ಚಹಾ ಪ್ರಿಯರೇ ಹುಷಾರ್, ನಿಮ್ಮ ಹೊಟ್ಟೆ ಸೇರ್ತಿದೆ ಹಾನಿಕಾರಕ ರಾಸಾಯನಿಕ ವಸ್ತು?

By Suvarna News  |  First Published Dec 19, 2019, 12:06 PM IST

ರಾಸಾಯನಿಕ ಮಿಶ್ರಿತ ಚಹಾಪುಡಿ ಬಳಕೆ | ಚಹಾ ಸೇವಿಸುವವರೆ ಹುಷಾರ್| ಆರೋಗ್ಯಕ್ಕೆ ದುಷ್ಪರಿಣಾಮ ಬೀರುವ ರಾಸಾಯನಿಕ ಮಿಶ್ರಿತ ಕಲ ಬೆರಕೆ ಚಹಾಪುಡಿ ಬಳಕೆ| ಅನಧಿಕೃತ ಚಹಾಪುಡಿಯನ್ನು ಪಟ್ಟಣದಲ್ಲಿರುವ ಕೆಲ ಅಂಗಡಿಗಳಲ್ಲಿ ಬಳಸಲಾಗುತ್ತಿದೆ ಎಂಬ ಆರೋಪ|


ಮುದ್ದೇಬಿಹಾಳ(ಡಿ.19): ದಣಿವಾಗಿದೆ, ಬಾಯಾರಿದೆ ಎಂದೆಲ್ಲ ಕಾರಣವಿಟ್ಟು ಕೊಂಟು ಒಂದು ವೇಳೆ ಪಟ್ಟಣದ ಕೆಲ ಅಂಗಡಿಗಳಲ್ಲಿ ಚಹಾ ಕುಡಿದರೆ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕ ವಸ್ತು ನಿಮ್ಮ ಹೊಟ್ಟೆ ಸೇರುವುದು ಗ್ಯಾರಂಟಿ..! 

ಹೌದು, ಹೆಚ್ಚಿನ ಲಾಭದಾಸೆಗೆ, ಕಡಿಮೆ ದರಕ್ಕೆ ಸಿಗುತ್ತದೆ ಎಂಬ ಕಾರಣದಿಂದಾಗಿ ಆರೋಗ್ಯಕ್ಕೆ ದುಷ್ಪರಿಣಾಮ ಬೀರುವ ರಾಸಾಯನಿಕ ಮಿಶ್ರಿತ ಕಲ ಬೆರಕೆ ಚಹಾಪುಡಿ ಹಾಗೂ ಅನಧಿಕೃತ ಚಹಾಪುಡಿ ಯನ್ನು ಪಟ್ಟಣದಲ್ಲಿರುವ ಕೆಲ ಅಂಗಡಿಗಳಲ್ಲಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 

Latest Videos

undefined

ಪಟ್ಟಣದ ತಹಸೀಲ್ದಾರ್ ಕಚೇರಿ, ಬಸ್ ನಿಲ್ದಾಣ, ಮುಖ್ಯ ಬಜಾರ ರಸ್ತೆ, ಶಾಲಾ ಕಾಲೇಜುಗಳು ಮತ್ತು ವಿವಿಧ ಸರ್ಕಾರಿ ಕಚೇರಿ ಎದುರಿಗೆ ಸೇರಿದಂತೆ ವಿವಿಧೆಡೆ ಸಣ್ಣ ಹೋಟೆಲ್ ಹಾಗೂ ರಸ್ತೆ ಬದಿಯಲ್ಲಿರುವ ಚಹಾ ಅಂಗಡಿಗಳು ಅಲ್ಲದೆ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿಯೂ ಇಂತಹ ಚಹಾಪುಡಿ ಬಳಸಲಾಗುತ್ತಿದೆ ಎನ್ನಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೆಚ್ಚಿನ ಲಾಭದಾಸೆಗೆ ಕಟ್ಟಿಗೆ ಪುಡಿಯನ್ನು ಬಳಸಿ ಅದಕ್ಕೆ ಮಾರಕ ರಾಸಾಯನಿಕ ಬಣ್ಣ ಬಳಸಿ ಚಹಾಪುಡಿಯಲ್ಲಿ ಮಿಶ್ರಣ ಮಾಡಿದ್ದನ್ನು ಅಂಗಡಿಕಾರರು ಬಳಸುತ್ತಿದ್ದಾರೆ. ಇಂತಹ ಚಹಾ ಕುಡಿದರೆ ಮಾರಕ ಕ್ಯಾನ್ಸರ್‌ರೋಗ ಸಹಿತ ಬರುವ ಸಾಧ್ಯತೆ ಇದೆ. ಅದಕ್ಕಾಗಿ ಸಾರ್ವಜನಿಕರಿಗೆ ಜಾಗೃತರಾಗಬೇಕಿದೆ. ಇಂತಹ ಗಂಭೀರ ಆರೋಪದಿಂದಾಗಿ  ಖುದ್ದಾಗಿ ಸಣ್ಣ ಹೋಟೆಲೊಂದಕ್ಕೆ ಹೋಗಿ ಅಲ್ಲಿನ ಚಹಾಪುಡಿ ತೆಗೆದುಕೊಂಡು ಅದಕ್ಕೆ ಒಂದು ಚಮಚ ನೀರು ಹಾಕಿದಾಗ ಕಟ್ಟಿಗೆ ಪುಡಿಗೆ ರಾಸಾಯನಿಕ ಬಣ್ಣ ಬಳಸಿರುವುದು ಕಂಡುಬಂದಿದೆ. 

ಚಹಾಪುಡಿಯಷ್ಟೇ ಅಲ್ಲದೆ ಪಟ್ಟಣದ ಬಹುತೇಕ ಪ್ರಮುಖ ಬೀದಿ ಬದಿಗಳಲ್ಲಿನ ಹೋಟೆಲ್‌ಗಳಲ್ಲಿ ವಿವಿಧ ರಾಸಾಯನಿಕ ಬಳಸಿದ ಆಹಾರ ಪದಾರ್ಥಗಳನ್ನೂ ಮಾರಲಾಗುತ್ತಿದೆ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಸ್ವತಃ ಹೋಟೆಲ್‌ಗಳು, ಬೇಕರಿಗಳು, ಪಾನ್‌ಶಾಪ್ ಸೇರಿದಂತೆ ವಿವಿಧ ದಿನಸಿ, ಕಿರಾಣಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕಿದೆ. 

ಆರೋಗ್ಯಕ್ಕೆ ಮಾರಕವಾಗುವ ದವಸ ಧಾನ್ಯಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಲ್ಲಿ ಮುಂದಾಗಬೇಕಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಳಪೆ ಆಹಾರ ಧಾನ್ಯ ಪೂರೈಸುವುದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಇಂತಹ ಅವ್ಯವಹಾರ ನಡೆದಿದೆ. ಅದಕ್ಕಾಗಿ ಸಂಬಂಧಿತ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತ ರಾಗಬೇಕಿದೆ.

ಈ ಬಗ್ಗೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ ಅವರು, ಸಾರ್ವಜನಿಕರ ಆರೋಗ್ಯ ಕಾಪಾಡುವುದು ಆರೋಗ್ಯ ಇಲಾಖೆ ಕರ್ತವ್ಯ. ನಿಟ್ಟಿನಲ್ಲಿ ಎಲ್ಲೆಲ್ಲಿ ಈ ರೀತಿಯ ಅನಧಿಕೃತ ಚಹಾಪುಡಿ ಮಾರಲಾಗುತ್ತಿದೆ, ಅದನ್ನು ಎಲ್ಲೆಲ್ಲೆ ಬಳಸಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಹಾರ ಸಂರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ. 

ಮುದ್ದೇಬಿಹಾಳ ಕಲಬೆರಕೆ ಚಹಾಪುಡಿ ಮಾಡುತ್ತಿರುವುದನ್ನು ಪರಿಶೀಲಿಸಲಾಗುವುದು. ಯಾರೇ ಆಗಿರಲಿ ಅಕ್ರಮ ಹಾಗೂ ಆರೋಗ್ಯಕ್ಕೆ ಹಾನಿಕಾರಕ ಚಹಾಪುಡಿ ಮಾರುವುದು ಕಂಡು ಬಂದಲ್ಲಿ ಅಂತಹ ಹೋಟೆಲ್‌ಗಳ ಪರವಾನಗಿ ರದ್ದುಗೊಳಿಸುವ ಮೂಲಕ ಮಾಲೀಕನ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮುದ್ದೇಬಿಹಾಳ ಪುರಸಭೆ ಮುಖ್ಯಾಧಿಕಾರಿ ಎಚ್. ಕಾಸೆ ಅವರು ತಿಳಿಸಿದ್ದಾರೆ. 

ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಚಹಾಪುಡಿ ಮಾರುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮುಂದೇ ಹೀಗೆ ಯಾರೂ ಮಾಡದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಮುದ್ದೇಬಿಹಾಳ ನಗರದ ಯುವ ಮುಖಂಡ ಮಂಜುನಾಥ ರತ್ನಾಕರ ಅವರು ಆಗ್ರಹಿಸಿದ್ದಾರೆ. 
 

click me!