ಆರತಿ ಬೆಳಗಲೆಂದೇ 5 ದಿನಗಳ ಉಪವಾಸ ಆರಂಭಿಸಿದ ಹರಿಜನ ದೇವದಾಸಿ ಯುವತಿ| ಜಾತ್ರೆಗಾಗಿ ಜಾತಿ, ಜನಾಂಗ ಎನ್ನದೇ 15 ದಿನಗಳ ಕಾಲ ಮಡಿ-ಉಡಿ ಪಾಲನೆ| ಶ್ರೀಸ್ವಾಮಿಗೆ ಏಳನೇ ಬಾರಿ ಕಳಸದಾರತಿ ಬೆಳಗಲು ಸಜ್ಜಾದ ದೇವದಾಸಿ ಯುವತಿ ದುರ್ಗಮ್ಮ|
ಕೊಟ್ಟೂರು(ಫೆ.17): ಕೊಟ್ಟೂರೇಶ್ವರನ ಮಹಾರಥೋತ್ಸವ ಆರಂಭಗೊಳ್ಳುವ ಮುನ್ನ ಶ್ರೀಸ್ವಾಮಿಗೆ ಕಳಸದಾರತಿ ಬೆಳಗುವ ಹರಿಜನ ದೇವದಾಸಿ ಯುವತಿ ದುರ್ಗಮ್ಮ 5 ದಿನಗಳ ಉಪವಾಸ ಶುಕ್ರವಾರ ರಾತ್ರಿಯಿಂದ ಪ್ರಾರಂಭವಾಗಿದೆ.
ದೇವದಾಸಿ ಯುವತಿ ದುರ್ಗಮ್ಮ ಶ್ರೀಸ್ವಾಮಿಗೆ ಕಳಸದಾರತಿ ಇದೀಗ ಏಳನೇ ಬಾರಿ ಬೆಳಗಲು ಸಜ್ಜಾಗಿದ್ದು, ಈ ಕಾರಣಕ್ಕಾಗಿಯೇ 5 ದಿನಗಳಿಂದ ಉಪವಾಸವಿದ್ದು ರಥೋತ್ಸವದ ದಿನಕ್ಕಾಗಿ ಕಾಯುತ್ತಾಳೆ. ಶ್ರೀಸ್ವಾಮಿಗೆ ದುರ್ಗಮ್ಮನ ಪೂರ್ವಿಕರು ಕಳಸದಾರತಿಯನ್ನು ಬೆಳಗುವ ಪರಂಪರೆ ಇದ್ದು ಈಗಲೂ ಮುಂದುವರೆದಿದೆ.
ರಥೋತ್ಸವಕ್ಕೆ ತೆರಳುವ ಮುನ್ನ ಶ್ರೀಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಹಿರೇಮಠದಿಂದ ಪಲ್ಲಕ್ಕಿ ಮೆರವಣಿಗೆಯೊಂದಿಗೆ ತೇರು ಬೀದಿಗೆ ಪೂಜಾ ಬಳಗ ಕೊಂಡ್ಯೊಯಲಿದ್ದು ಮಾರ್ಗ ಮಧ್ಯದಲ್ಲಿ ಬರುವ ಹರಿಜನ ಕೇರಿ ಬಳಿ ಪಲ್ಲಕ್ಕಿಯಲ್ಲಿನ ಶ್ರೀಸ್ವಾಮಿಗೆ ದುರ್ಗಮ್ಮ ಕಳಸದಾರತಿ ಬೆಳಗಲಿದ್ದಾರೆ. ಶ್ರೀಸ್ವಾಮಿಗೆ ಆರತಿ ಬೆಳಗಲೆಂದೇ ಉಪವಾಸವಿರುವುದನ್ನು ರೂಢಿ ಮಾಡಿಕೊಂಡಿದ್ದಾಳೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದುರ್ಗಮ್ಮ ಕಳಸದಾರತಿ ಬೆಳಗಿದ ನಂತರ ಆಶೀರ್ವಾದ ಪೂರಕವಾಗಿ ಸ್ವಾಮಿಯ ಪೂಜಾ ಕರ್ತರು ಮತ್ತು ಧರ್ಮಕರ್ತರು ದುರ್ಗಮ್ಮಳಿಗೆ ಹಾರ ಹಾಕಲಿದ್ದಾರೆ. ದುರ್ಗಮ್ಮ ಕೇವಲ ಆರತಿ ಬೆಳಗುತ್ತಾಳೆ ಹೊರತು ಬೇರೆ ಯಾವ ಎಡೆ, ನೈವೇದ್ಯ ಅರ್ಪಿಸುವುದಿಲ್ಲ. ದಲಿತ ಮಹಿಳೆ ರಥೋತ್ಸವದ ದಿನ ಆಕಳ ಹಾಲಿನ ಗಿಣ್ಣವನ್ನು ಎಡೆ ಮಾಡಿ ಶ್ರೀಸ್ವಾಮಿಗೆ ಅರ್ಪಿಸುತ್ತಾರೆ ಎಂದು ಕೆಲ ಭಕ್ತರು ಸುಳ್ಳು ವದಂತಿಗಳನ್ನು ಹಬ್ಬಿಸಿದ್ದು ಇಂತಹ ಯಾವುದೇ ನೈವೇದ್ಯವನ್ನು ಮೊದಲಿನಿಂದಲೂ ಶ್ರೀಸ್ವಾಮಿಗೆ ಅರ್ಪಿಸಿದ ಹಿನ್ನೆಲೆಯೂ ಇಲ್ಲ ಎನ್ನುತ್ತಾರೆ ಧರ್ಮಕರ್ತ ಸಿ.ಎಚ್.ಎಂ. ಗಂಗಾಧರ.
ಕೊಟ್ಟೂರೇಶ್ವರ ದೀನದಲಿತರ ಪಾಲಿಗೂ ಅಚ್ಚುಮೆಚ್ಚು ನಂಬುಗೆಯ ದೇವರಾಗಿದ್ದು ಈ ಕಾರಣಕ್ಕಾಗಿ ರಥೋತ್ಸವ ಜರುಗಲು ಇನ್ನೂ 5 ದಿನಗಳು ಇರುವಂತೆಯೇ ಇಲ್ಲಿನ ಹರಿಜನ ಕೇರಿಯಲ್ಲಿನ ಭಕ್ತರು ಮತ್ತು ಇತರ ಬಹುತೇಕ ಭಕ್ತರು ಮಾಂಸದೂಟ ಮತ್ತು ಮದ್ಯ ವ್ಯರ್ಜನಗೈಯುವ ಮೂಲಕ ಶ್ರೀಸ್ವಾಮಿಗೆ ತಮ್ಮ ಭಕ್ತಿ ಸಮರ್ಪಿಸಲು ಮುಂದಾಗಿದ್ದಾರೆ. ರಥೋತ್ಸವದ ದಿನ ಹರಿಜನ ಕೇರಿಯಲ್ಲಿನ ಭಕ್ತರೇ ಶ್ರೀಸ್ವಾಮಿಗೆ ತಮ್ಮದೇ ಆದ ಸೇವೆಯನ್ನು ಸಲ್ಲಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಅಂದು ಕೇರಿಯಲ್ಲಿನ ಜನರು ಬೆಳಗ್ಗೆ ಸ್ನಾನ, ಪೂಜೆ ಮಾಡಿಕೊಂಡು ಮಧ್ಯಾಹ್ನದ ವೇಳೆಗೆ ಶ್ರೀಸ್ವಾಮಿಯ ಮೂರ್ತಿಯು ರಥವೇರಲು ಸಹಕಾರಿಯಾಗಲು ಗಚ್ಚಿನಮಠದಲ್ಲಿನ ಬೃಹತ್ ಏಣಿಯನ್ನು ತಂದಿರಸಲಿದ್ದಾರೆ. ಇದಕ್ಕೆಂದೆ ಇಡೀ ಕೇರಿಯ ಜನ ಸಡಗರ ಸಂಭ್ರಮಗಳೊಂದಿಗೆ ಮೆರವಣಿಗೆ ಮೂಲಕ ಗಚ್ಚಿನಮಠಕ್ಕೆ ತೆರಳಿ ಏಣಿಯನ್ನು ರಥದ ಬಳಿ ತಂದು ಮುಂಭಾಗದಲ್ಲಿರಿಸುತ್ತಾರೆ.
ರಥೋತ್ಸವದ ನಿಮಿತ್ತವಾಗಿ ಸ್ವಾಮಿಗೆ ಹರಕೆ ಹೊತ್ತು ಕೆಲ ಮದ್ಯ ವ್ಯಸನಿಗಳು ಮತ್ತು ಮಾಂಸದ ಊಟ ತ್ಯಜಿಸಿದ್ದಾರೆ. ಒಂದು ವಾರದಿಂದ ರಥೋತ್ಸವ ಜಾತ್ರಾ ಮಹೋತ್ಸವ ನಡೆಯುವವರೆಗೂ ಈ ಮೂಲಕ ಭಕ್ತರು ತಮ್ಮ ವ್ಯಸನಗಳಿಂದ ದೂರವಿರುತ್ತಾರೆ. ಕೇವಲ ವೀರಶೈವ ಜನರಲ್ಲದೆ ಎಲ್ಲ ಜನಾಂಗದವರು ಈ ಪರಿಪಾಟವನ್ನು ಮಾಡಿಕೊಂಡು ಬರುತ್ತಿದ್ದು ಮಾಂಸದೂಟ ತಯಾರು ಮಾಡುವುದನ್ನು 15 ದಿನಗಳ ಕಾಲ ಕೈಬಿಟ್ಟು ಕೇವಲ ಸಾತ್ವಿಕ ಊಟ ಮತ್ತು ಸಸ್ಯಹಾರ ಊಟಕ್ಕೆ ಶರಣು ಹೋಗುತ್ತಾರೆ. ಈ ಭಾಗದಲ್ಲಿನ ಮುಸ್ಲಿಮರು ಸಹ ಈ ಪದ್ಧತಿಯನ್ನು ಅನುಸರಿಸುವುದು ಪ್ರಮುಖ ವಿಷಯ. ವೀರಶೈವ ಮತ್ತಿತರ ಜನಾಂಗದ ಭಕ್ತರು ಅದರಲ್ಲೂ ಶ್ರೀಸ್ವಾಮಿಯನ್ನು ಮನೆ ದೇವರನ್ನಾಗಿಸಿಕೊಂಡವರು ರಥೋತ್ಸವ ಸಾಗುವವರೆಗೂ ದಿನವಿಡೀ ನೀರನ್ನು ಹೊರತುಪಡಿಸಿ ಕಟ್ಟುನಿಟ್ಟಾಗಿ ಉಪವಾಸವಿರುವುದು ವಾಡಿಕೆಯಾಗಿದೆ.
ಈ ಬಗ್ಗೆ ಮಾತನಾಡಿದ ಕೊಟ್ಟೂರಿನ ಹರಿಜನ ದೇವದಾಸಿ ಯುವತಿ ದುರ್ಗಮ್ಮ ಅವರು, ನಮ್ಮ ಮನೆತನದವರ ಪೂರ್ವಿಕರು ನಡೆದುಕೊಂಡು ಪದ್ಧತಿಯಂತೆ ನಾನು ಈಗ ಶ್ರೀಸ್ವಾಮಿಗೆ ಆರತಿ ಬೆಳಗುತ್ತಿದ್ದು ಇದಕ್ಕಾಗಿಯೇ 5 ದಿನಗಳ ಕಾಲ ಉಪವಾಸವಿರುವೆ. ಇದು ನನ್ನ ಮತ್ತು ಕುಟುಂಬದವರ ಹರಕೆಯ ಪರಿಣಾಮ. ಈ ರೀತಿ ಇರುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಇದನ್ನು ಹೊರತುಪಡಿಸಿ ಯಾರೊಬ್ಬರು ಉಪವಾಸವಿರುವಂತೆ ತಾಕೀತು ಮಾಡಿಲ್ಲ. ನಮಗೆ ಕೊಟ್ಟೂರೇಶ್ವರ ಸ್ವಾಮಿ ಒಳ್ಳೆಯದನ್ನು ದಯಪಾಲಿಸುತ್ತಾನೆ ಎಂಬ ನಂಬಿಗೆ ಇದೆ. ಈ ಕಾರಣಕ್ಕಾಗಿ ಈ ಕೈಂಕರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.