
ಬಿ. ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ: ಇಲ್ಲಿಯ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ ಹಿನ್ನಲೆ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಈ ಮೊದಲಿದ್ದ 27 ವಾರ್ಡ್‌ಗಳ ಸಂಖ್ಯೆ 31ಕ್ಕೇರಿದೆ. ಚುನಾವಣೆಗೂ ಮುನ್ನವೇ ರಾಜಕೀಯ ಲೆಕ್ಕಾಚಾರ ಶುರುವಾಗಿದ್ದು ಯಾವ ವಾರ್ಡ್‌ನಲ್ಲಿ ಮೀಸಲಾತಿ ಬದಲಾಗುತ್ತದೆ, ಬದಲಾದರೆ ಯಾವ ಅಭ್ಯರ್ಥಿಯನ್ನು ಕಣಕ್ಕೀಳಿಸಬೇಕೆಂಬ ಲೆಕ್ಕಾಚಾರ ಶುರುವಾಗಿದೆ.
ಮೊದಲಿಗೆ 27 ವಾರ್ಡ್‌ಗಳಿದ್ದು ನ. 27, 2025ರಂದು ನಗರಸಭೆಯನ್ನಾಗಿ ಮೇಲ್ದರ್ಜಗೇರಿಸಿ ಅಧಿ ಸೂಚನೆ ಹೊರಡಿಸಲಾಗಿತ್ತು. ಸುದೀರ್ಘ ಅವಧಿಯ ನಂತರ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಿ ಇದೀಗ 31 ವಾರ್ಡ್‌ಗಳನ್ನಾಗಿ ರಚಿಸಲಾಗಿದೆ.
ಫೆ. 10, 2026ರ ಜನಸಂಖ್ಯೆಕ್ಕೆ ಅನುಗುಣವಾಗ 31 ವಾರ್ಡ್‌ಗಳಾಗಿ ಪುನರ್ ವಿಂಗಡಣೆ ಮಾಡಿ ಚಕ್ಕು ಬಂದಿ ಹಾಗೂ ಜನಸಂಖ್ಯೆಯ ವಿವರಗಳನ್ನು ಅಂತಿಮ ಗೊಳಿಸಲಾಗಿದೆ. 55,743 ಜನಸಂಖ್ಯೆ ಗುರುತಿಸಿದ್ದು ವಾರ್ಡ್-1 ಟೀಚರ್ಸ್ ಕಾಲನಿ, ವಾರ್ಡ್ 2 ಬಾಪೂಜಿ ಬಡಾವಣೆ, ವಾರ್ಡ್ 3 ಇಜಾರಿ ಶಿರಸಪ್ಪ ಬಡಾವಣೆ, ವಾರ್ಡ್ 4 ಕೊಟ್ಟೂರು ರಸ್ತೆ, ವಾರ್ಡ್ 5 ಮೇಗಳಪೇಟೆ, ವಾರ್ಡ್ 6 ಹುಲ್ಲುಗರಡಿಕೇರಿ, ವಾರ್ಡ್ 7 ಗಾಜಿಕೇರಿ, ವಾರ್ಡ್ 8 ವಾಲ್ಮೀಕಿ ನಗರ, ವಾರ್ಡ್ 9 ಬ್ರೂಸ್ ಪೇಟೆ, ವಾರ್ಡ್ 10 ಹರಿಹರ ರಸ್ತೆ ಆಶ್ರಯ ಕಾಲನಿ, ವಾರ್ಡ್ 11 ಶಿಲಾರಗೇರಿ, ವಾರ್ಡ್ 12 ಉಪ್ಪಾರಗೇರಿ, ವಾರ್ಡ್ 13 ಗುಂಡಿನಕೇರಿ, ವಾರ್ಡ್ 14 ತೆಕ್ಕದಗರಡಿಕೇರಿ, ವಾರ್ಡ್ 15 ಕೊರವರಕೇರಿ, ವಾರ್ಡ್ 16 ಅಂಬೇಡ್ಕರ ನಗರ, ವಾರ್ಡ್ 17 ಹಳೆ ಕುರುಬರಗೇರಿ, ವಾರ್ಡ್ 18 ಸಾಳೇರಕೇರಿ, ವಾರ್ಡ್ 19 ತೆಲುಗರಓಣಿ, ವಾರ್ಡ್ 20 ಗುಡಿಕೇರಿ, ವಾರ್ಡ್ 21 ಗೌಳೇರಕೇರಿ, ವಾರ್ಡ್ 22 ಹಿಪ್ಪಿತೋಟ, ವಾರ್ಡ್ 23 ಪಠಾಣಗೇರಿ, ವಾರ್ಡ್ 24 ಚಿತ್ತಾರಗೇರಿ, ವಾರ್ಡ್ 25 ಸಂಡೂರುಗೇರಿ, ವಾರ್ಡ್ 26 ಬಾಣಗೇರಿ, ವಾರ್ಡ್ 27 ಸುಣಗಾರಗೇರಿ, ವಾರ್ಡ್ 28 ಗುಡೇಕೋಟಿ ಕೇರಿ, ವಾರ್ಡ್ 29 ಕುರುಬರಗೇರಿ, ವಾರ್ಡ್ 30 ಅಗಸನಕಟ್ಟಿ, ವಾರ್ಡ್ 31 ಜೋಯಿಸರಕೇರಿ ಹೀಗೆ ವಾರ್ಡ್‌ಗಳನ್ನು 31ಕ್ಕೆ ಹೆಚ್ಚಿಸಿ ಪುನರವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ.
ನಗರಸಭೆಗೆ ಪೌರಾಯುಕ್ತರಾಗಿ ರೇಣುಕಾ ಎಸ್. ದೇಸಾಯಿ ಸೇವೆ ಸಲ್ಲಿಸುತ್ತಲಿದ್ದು, ಇನ್ನೂ ನಗರಸಭೆಗೆ ತಕ್ಕ ಹಾಗೆ ಸಿಬ್ಬಂದಿ ನೇಮಕವಾಗಿಲ್ಲ. ಶೀಘ್ರ ನೇಮಕವಾಗುವ ನಿರೀಕ್ಷೆ ಇದೆ. ಮಾಜಿ ಆಗಿರುವ ನಗರಸಭಾ ಸದಸ್ಯರು ಈ ಹಿಂದೆ ಪರಾಭವಗೊಂಡಿರುವ ಅಭ್ಯರ್ಥಿಗಳು ಯಾವ ವಾರ್ಡ್‌ಗಳಲ್ಲಿ ಯಾವ ಮೀಸಲಾತಿ ಬರುತ್ತದೆ, ಎಲ್ಲಿ ನಾವು ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಒಟ್ಟಿನಲ್ಲಿ ನಗರಸಭೆಯಾಗಿ ಪ್ರಥಮ ಚುನಾವಣೆ ಕುತೂಹಲ ಮೂಡಿಸಿದೆ. ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರ ಮಾಡುತ್ತೇವೆ ಎಂದು ಹೇಳುತ್ತಲೇ ಬರುತ್ತಲಿದ್ದು ಅಭ್ಯರ್ಥಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಪೌರಾಯುಕ್ತೆ ರೇಣುಕಾ ದೇಸಾಯಿ ಹೇಳಿಕೆ
ನಗರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ವಾರ್ಡ್‌ಗಳನ್ನು 31ಕ್ಕೆ ಹೆಚ್ಚಿಸಲಾಗಿದೆ. ಆದರೆ, ನಗರಸಭೆಗೆ ತಕ್ಕ ಹಾಗೆ ಆದಾಯವು ಹೆಚ್ಚಳವಾಗಬೇಕು. ಅದಕ್ಕಾಗಿ ಮೂರು ವರ್ಷ ಕಾದು ನೋಡಿ ರಾಜ್ಯ ಸರ್ಕಾರ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುತ್ತದೆ. ಆದ್ದರಿಂದ ಸಾರ್ವಜನಿಕರು ಎಲ್ಲ ನಮೂನೆಯ ತೆರಿಗೆಗಳನ್ನು ಸರಿಯಾಗಿ ಪಾವತಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪೌರಾಯುಕ್ತೆ ರೇಣುಕಾ ದೇಸಾಯಿ ತಿಳಿಸಿದ್ದಾರೆ.
ನಗರಸಭೆಯಾದ ನಂತರ ಹಂತ-ಹಂತವಾಗಿ ಆದಾಯ ಹೆಚ್ಚಳವಾಗಲಿದೆ. ಆದರೆ, ಚುನಾಯಿತ ಮಂಡಳಿ ಇದ್ದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತ್ವರಿತವಾಗಿ ವಾರ್ಡ್‌ಗಳ ಮೀಸಲಾತಿ ಹೆಚ್ಚಳ ಮಾಡಿ ಚುನಾವಣೆ ಘೋಷಣೆ ಮಾಡಬೇಕು ಎನ್ನುತ್ತಾರೆ ನಗರಸಭಾ ಮಾಜಿ ಸದಸ್ಯ ಎಂ.ವಿ. ಅಂಜಿನಪ್ಪ.