ಹ್ಯಾಕರ್‌ಗಳು ವೃತ್ತಿಪರರು, ಸಂಘಟಿತರು: ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ವೆಂಕಟೇಶ್ ಮೂರ್ತಿ ಕಳವಳ

Published : Sep 12, 2024, 08:33 PM ISTUpdated : Sep 12, 2024, 08:36 PM IST
ಹ್ಯಾಕರ್‌ಗಳು ವೃತ್ತಿಪರರು, ಸಂಘಟಿತರು: ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ವೆಂಕಟೇಶ್ ಮೂರ್ತಿ ಕಳವಳ

ಸಾರಾಂಶ

ಹ್ಯಾಕರ್‌ಗಳು ಇತ್ತೀಚೆಗೆ ವೃತ್ತಿಪರರು ಮತ್ತು ಸಂಘಟಿತರಾಗಿದ್ದಾರೆ ಎಂದು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ. ವೆಂಕಟೇಶ್ ಮೂರ್ತಿ ಹೇಳಿದರು. 

ಬೆಂಗಳೂರು (ಸೆ.12): ಹ್ಯಾಕರ್‌ಗಳು ಇತ್ತೀಚೆಗೆ ವೃತ್ತಿಪರರು ಮತ್ತು ಸಂಘಟಿತರಾಗಿದ್ದಾರೆ ಎಂದು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ. ವೆಂಕಟೇಶ್ ಮೂರ್ತಿ ಹೇಳಿದರು. ಬೆಂಗಳೂರು ಆಕಾಶವಾಣಿ ವತಿಯಿಂದ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್), ಶಾರದಾ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಬಸವನಪುರದ ರಾಕ್ವುಡ್ ಗ್ರೀನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ನಡೆದ ಸೈಬರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹ್ಯಾಕರ್ ಅಥವಾ ಹ್ಯಾಕಿಂಗ್ ಅನ್ನುವುದನ್ನು ನಕಾರಾತ್ಮಕ ಅರ್ಥದಲ್ಲಿ ಬಳಸಬೇಕಾಗಿಲ್ಲ. ಆದರೆ ಅನಧಿಕೃತವಾಗಿ ಡಿಜಿಟಲ್ ಮಾಹಿತಿಯನ್ನು ಕದಿಯುವುದು, ದುರ್ಬಳಕೆ ಮಾಡುವ ಪ್ರಕರಣಗಳು ವಿಪರೀತವಾಗಿ ಹೆಚ್ಚಿರುವುದರಿಂದ ಹ್ಯಾಕಿಂಗ್‌ನ್ನು ನಕಾರಾತ್ಮಕವಾಗಿ ಅರ್ಥೈಸಲಾಗುತ್ತಿದೆ. ಹ್ಯಾಕರ್‌ಗಳಿಗೆ ತಾಳ್ಮೆ ಬೇಕು. ಅದಕ್ಕೆಂದೇ ಅಂತರ್ಜಾಲದ ಕಪ್ಪು ಜಗತ್ತಿನಲ್ಲಿ ‘ತಾಳ್ಮೆ’ ‘ಧ್ಯಾನ’ದ ಕೋರ್ಸ್‌ಗಳನ್ನೂ ಕಲಿಸಲಾಗುತ್ತಿದೆ. ಕೆಲವು ಡಿಜಿಟಲ್ ಅರ್ಥ ವ್ಯವಸ್ಥೆಗಳ (ಕ್ರಿಪ್ಟೋಕರೆನ್ಸಿ) ಮೇಲೆ ನಿಯಂತ್ರಣ ಸಾಧಿಸುವುದೇ ಕಷ್ಟವಾಗಿದೆ. ನಮ್ಮ ಮಾಹಿತಿಯನ್ನು ಕದ್ದು, ಪೊಲೀಸರಿಗೆ ತಾವೇ ದೂರು ನೀಡುವ ಖದೀಮರೂ (ರಾನ್ಸಮ್ ಗ್ಯಾಂಗ್) ಇದ್ದಾರೆ. ಹಾಗಾಗಿ ಈ ಎಲ್ಲ ವ್ಯವಸ್ಥೆಗಳಿಂದ ಪಾರಾಗಲು ನಮ್ಮ ಡಿಜಿಟಲ್ ಖಾಸಗಿತನವನ್ನು ರಕ್ಷಿಸಿಕೊಳ್ಳಬೇಕು. ಆನ್ಲೈನ್ ಅಪರಿಚಿತರಿಂದ ದೂರವಿರುವುದು ಕ್ಷೇಮ’ ಎಂದರು.

ಕತ್ತೆ ಕಾಯ್ತಿದ್ರಾ ಪೊಲೀಸರು?: ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುತ್ತೆ ಎಂದಿದ್ಯಾಕೆ ಆರ್.ಅಶೋಕ್

ಬೆಂಗಳೂರು ಉತ್ತರ ಸೆನ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವರತ್ನಾ ಎಸ್. ಮಾತನಾಡಿ, ‘ ಸೈಬರ್- ಆರ್ಥಿಕ ಮತ್ತು ಮಾದಕವಸ್ತು ಅಪರಾಧ ಠಾಣೆಗೆ ತಿಂಗಳಿಗೆ ಸರಾಸರಿ 3 ಸಾವಿರ ದೂರುಗಳು ಬರುತ್ತಿವೆ. ಸೈಬರ್ ಅಪರಾಧದಿಂದ ಆರ್ಥಿಕ ನಷ್ಟವೊಂದೇ ಅಲ್ಲ, ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಆಮಿಷ ನೀಡುವುದು, ನಗ್ನತೆ ಪ್ರಸಾರ ಮಾಡುವುದು ನಡೆಯುತ್ತಿದೆ. ಇದರಿಂದಾಗಿ ಹದಿಹರೆಯದವರು ಮತ್ತು ಮಕ್ಕಳು ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ಹಾಗಾಗಿ ಸೈಬರ್ ಜಾಗೃತಿ ಎಲ್ಲ ವಯೋಮಾನದವರಿಗೂ ಅಗತ್ಯ ’ ಎಂದರು.

ಆನ್ಲೈನ್ ಮೂಲಕ ಆರ್ಥಿಕ ಮತ್ತು ಆರ್ಥಿಕೇತರ ಅಪರಾಧಗಳು ನಡೆಯುತ್ತವೆ. ನಿಮಗೆ ಗೊತ್ತಿರುವವರ ಹೆಸರಿನಲ್ಲಿ ಯಾವುದೋ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ಬೇರೆಯವರು ವೀಕ್ಷಿಸುವ, ಅದನ್ನು ಬಳಸಿ ಮಾಹಿತಿ ದುರುಪಯೋಗ ಮಾಡುವ ಸಾಧ್ಯತೆಗಳು ಹೆಚ್ಚು ಇವೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಆಹ್ವಾನ ಸ್ವೀಕರಿಸುವಾಗ ಹತ್ತಾರು ಬಾರಿ ಪರಿಶೀಲಿಸಬೇಕು. ಮೊಬೈಲ್‌ಗಳಲ್ಲಿ ನಮ್ಮ ಖಾತೆಯ ಸುರಕ್ಷತೆಯನ್ನು ಆಗಾಗ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಉನ್ನತೀಕರಣಕ್ಕೆ ಆದ್ಯತೆ: ಸಚಿವ ಶರಣ ಪ್ರಕಾಶ್‌ ಪಾಟೀಲ್‌

ಆ್ಯಂಝೆನ್ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ತರುಣ್ ಕೃಷ್ಣಮೂರ್ತಿ ಮಾತನಾಡಿ, ‘ಅಂತರ್ಜಾಲದ ಮೂಲಕ ಒಂದು ನಗರ ಅಥವಾ ವಿಶ್ವವೇ ಸಂಕುಚಿತವಾಗಿಬಿಟ್ಟಿದೆ. ಈ ಹೊತ್ತಿನಲ್ಲಿ ಭದ್ರತೆಯ ಕಾಳಜಿಗಳೂ ಹೆಚ್ಚಿವೆ. ಆದ್ದರಿಂದ ನಮ್ಮ ಉಪಕರಣಗಳ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು. ಪಾಸ್ವರ್ಡ್, ಕೋಡ್, ಒಟಿಪಿ ಇತ್ಯಾದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ಡಿಜಿಟಲ್ ಉಪಕರಣ ಬಳಸುವಾಗ ನಿಮ್ಮ ಖಾತೆ (ಇಮೇಲ್/ ವಾಟ್ಸ್ ಆ್ಯಪ್ ಅಥವಾ ಸಾಫ್ಟ್ವೇರ್) ಇನ್ನೊಂದು ಉಪಕರಣದಲ್ಲಿ ಮುಕ್ತವಾಗಿ ಚಾಲನೆಯಲ್ಲಿ ಇರಬಾರದು. ವಿದ್ಯಾರ್ಥಿ ಬದುಕಿನಲ್ಲಿಯೂ ನಮ್ಮ ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡಬಾರದು’ ಎಂದರು. ಶಾರದಾ ವಿಕಾಸ ಟ್ರಸ್ಟ್ ಅಧ್ಯಕ್ಷ, ಆಡಳಿತ ನಿರ್ದೇಶಕ ಡಿ.ವಿ. ವೆಂಕಟಾಚಲಪತಿ ಅಧ್ಯಕ್ಷತೆ ವಹಿಸಿದ್ದರು. ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಸ್ವಾಗತಿಸಿದರು. ಜೊಹಾನಾ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಜ್ ವಂದಿಸಿದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ