
ಮೈಸೂರು (ಡಿ.03): ಸರ್ಕಾರದ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮುಂದೆ ನಿಂತಿದ್ದ ಸ್ಥಿತಿಯೇ ಬೇರೆ ಇತ್ತು, ಇಂದಿನ ಯಡಿಯೂರಪ್ಪ ನಡವಳಿಕೆಯೇ ಬೇರೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತೆ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಕೃತಜ್ಞತೆ ಕಡಿಮೆಯಾಗುತ್ತಿದೆ. ನಾವು ಮಾಡಿದ ಕೆಲಸವನ್ನು ಯಾರೂ ಸ್ಮರಿಸುತ್ತಿಲ್ಲ. ಯಡಿಯೂರಪ್ಪನವರ ಮೇಲೆ ಒತ್ತಡ ಇದೆ. ಆದ್ದರಿಂದ ಏನಾಗುತ್ತದೆಯೋ ನೋಡಿಕೊಂಡು ತೀರ್ಮಾನಿಸಲಾಗುವುದು ಎಂದರು.
ಒಂಟಿಯಲ್ಲ, ಬಾಂಬೆ ಟೀಮ್ ಜೊತೆಗಿದೆ:
ರಾಜಕಾರಣ ಸಕಾರಾತ್ಮಕ ಧೋರಣೆಯಿಂದ ಸಮಾನವಾಗಿ ಹೋಗಬೇಕು. ನಕಾರಾತ್ಮಕವಾಗಿ ರಾಜಕಾರಣ ಮಾಡಬಾರದು. ಬಾಂಬೆ ತಂಡದಲ್ಲಿ ನಾನು ಒಂಟಿಯಲ್ಲ. ಎಲ್ಲರೂ ನನ್ನ ಜೊತೆಗಿದ್ದಾರೆ. ನಾವಿದ್ದೇವೆ ಎಂದು ಬಿಜೆಪಿಯ ಹಿರಿಯ ನಾಯಕರೇ ಹೇಳಿದ್ದಾರೆ. ಆದ್ದರಿಂದ ನಾನು ಒಂಟಿಯಲ್ಲ ಎಂದರು.
ವಿಶ್ವನಾಥ್‌ಗೆ ಕೋರ್ಟ್ ಶಾಕ್: ಚಾಲೆಂಜ್ ಆಗಿ ಸ್ವೀಕರಿಸುತ್ತೇವೆ ಎಂದ ಸಾಹುಕಾರ್...! ..
ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಅವಸರ ಏನಿದೆ?
ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡುವ ಅವಸರ ಏನಿದೆ? ಅವರೇನು ಸರ್ಕಾರ ಬಿಳಿಸೋಕೆ ಕಾರಣರಾದರೇ? ಅವರೇನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೇ? ಬಾಂಬೆ ಪುಣೆಯಲ್ಲಿ ಸೂಟ್ಕೇಸ್ ಹಿಡ್ಕೊಂಡು ಓಡಾಡುತ್ತಿದ್ದವರು. ಅವರನ್ನು ಸಚಿವರನ್ನಾಗಿ ಮಾಡುವುದಕ್ಕೆ ಯಾಕೆ ಅವಸರ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಬರುವುದಕ್ಕೆ ಯೋಗೇಶ್ವರ್ ಪಾತ್ರ ಏನೂ ಇಲ್ಲ. ಅವನ ಪಾತ್ರ ಏನು ಇಲ್ಲದ ಮೇಲೆ ಅವನಿಗ್ಯಾಕೆ ಮಂತ್ರಿ ಸ್ಥಾನ ನೀಡಬೇಕು? ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.