ಹುಣಸೂರು ಉಪಚುನಾವಣೆಯಲ್ಲಿ ಸೋಲನುಭವಿಸಿದ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ತಮ್ಮ ಸೋಲಿನ ಕಾರಣವನ್ನು ತಿಳಿಸಿದ್ದಾರೆ. ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಸೋಲಿಗೆ ಕಾರಣವಾಗಿದ್ದೇನು ಎಂಬುದನ್ನು ಹೇಳಿದ್ದಾರೆ.
ಮೈಸೂರು(ಡಿ.20): ಉಪಚುನಾವಣೆಯಲ್ಲಿ ಪ್ರತಿಪಕ್ಷಗಳು ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ನಡೆಸುವ ಮೂಲಕ ಸೋಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಹುಣಸೂರು ಪಟ್ಟಣದ ಗೌರಮ್ಮ ಪುಟ್ಟಸೋಮಪ್ಪ ಕಲ್ಯಾಣಮಂಟಪದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಗುರುವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ನನ್ನನ್ನು ಒಕ್ಕಲಿಗರ ವಿರೋಧಿ ಎಂದು ಬಿಂಬಿಸಿತು. ಆದರೆ ಅದೇ ಪಕ್ಷದ ಅಭ್ಯರ್ಥಿಯಾಗಿದ್ದ ಒಕ್ಕಲಿಗ ಸಮುದಾಯದ ಸೋಮಶೇಖರ್ ಅವರನ್ನು ಅದೇ ಪಕ್ಷದ ಒಕ್ಕಲಿಗ ಮುಖಂಡರು ಸೋಲಿಸಿದರು ಎಂದು ಕಿಡಿಕಾರಿದ್ದಾರೆ.
undefined
250 ಕೋಟಿ ರು. ಕಾಮಗಾರಿ:
ತಾಲೂಕಿನ ತಮ್ಮ 14 ತಿಂಗಳ ಅಧಿಕಾರಾವಧಿಯಲ್ಲಿ 250 ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಅದರಲ್ಲೂ ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿರುವ ಹಬ್ಬನಕುಪ್ಪೆ, ಹಿರಿಕ್ಯಾತನಹಳ್ಳಿ, ತಿಪ್ಲಾಪುರ ಮುಂತಾದ ಗ್ರಾಮಗಳಲ್ಲಿ ಜನರಲ್ ಬೀದಿಗಳಿಗೆ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡಿದ್ದು, ಕಾಮಗಾರಿ ನಡೆದಿದೆ. ತಾಲೂಕಿನ 28 ಒಕ್ಕಲಿಗ ಸಮುದಾಯದ ಗುತ್ತಿಗೆದಾರರಿಗೆ ಕೆಲಸ ಕೊಡಿಸಿದ್ದೇನೆ. ನನ್ನನ್ನು ಮಾರಿಕೊಂಡವನು ಎಂದು ಹೇಳಿದ ಜೆಡಿಎಸ್ ಮುಖಂಡರೊಬ್ಬರು ಚುನಾವಣೆ ಕೊನೆ ಗಳಿಗೆಯಲ್ಲಿ ಪಕ್ಷಕ್ಕೂ, ಜಾತಿಗೂ ಮೋಸ ಮಾಡಿ ತಮ್ಮನ್ನು ತಾವು ಕಾಂಗ್ರೆಸ್‌ಗೆ ಮಾರಿಕೊಂಡಿದ್ದಾರೆ. ಒಕ್ಕಲಿಗ ವಿರೋಧಿ ನೀವಾ ನಾನಾ? ಮಾರಿಕೊಂಡವನು ನಾನಾ ನೀವಾ ಎಂದು ಜಿ.ಟಿ. ದೇವೇಗೌಡರ ವಿರುದ್ಧ ಹೆಸರು ಹೇಳದೇ ವ್ಯಂಗ್ಯವಾಡಿದರು.
ಶಾಂತಿಯುತ ಚುನಾವಣೆ:
ಶಾಸಕ ಎಚ್.ಪಿ. ಮಂಜುನಾಥ್ ಹಳ್ಳಿಹಳ್ಳಿಗಳಲ್ಲಿ ಪಟಾಕಿ ಸಿಡಿಸಿಕೊಂಡು ಕೃತಜ್ಞತೆ ಸಲ್ಲಿಸುತ್ತಾ ತಾಲೂಕಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಆಡಳಿತ ಜಡತ್ವ ಹಿಡಿದಿದೆ ಎಂದಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆ ವೇಳೆ ತಾಲೂಕಿನಲ್ಲಿ ಮಿಲಿಟರಿ ಪೊಲೀಸರ ಬೂಟಿನ ಸದ್ದಿನ ಮಧ್ಯೆ ಚುನಾವಣೆ ನಡೆದಿತ್ತು. ಇದಕ್ಕೆ ತಮ್ಮ 10ವರ್ಷಗಳ ಆಡಳಿತವೇ ಕಾರಣ. ಈಗ ಹಾಗಿಲ್ಲ. ಹುಣಸೂರು ಶಾಂತವಾಗಿದೆ. ಶಾಂತಿಯನ್ನು ಮತ್ತೆ ಕದಡದಿರಿ ಎಂದು ಮಂಜುನಾಥ್‌ಗೆ ಮಾತಿನ ತಿರುಗೇಟು ನೀಡಿದ್ದಾರೆ.
ಮೈಸೂರಿನ ಯುವಕ ಮಲೇಷ್ಯಾದಲ್ಲಿ ನೀರು ಪಾಲು
ಮುಖಂಡ ಸತ್ಯಪ್ಪ ಮಾತನಾಡಿ, ಚುನಾವಣೆಗೆ ಎರಡು ದಿನಗಳು ಬಾಕಿಯಿದ್ದಂತೆ ಪ್ರಮುಖ ಸಮುದಾಯಗಳ ನಿಲುವುಗಳು ಬದಲಾದವು. ಸೋಲಿಗಾಗಿ ಧೃತಿಗೆಡಬೇಕಿಲ್ಲ. ಪಕ್ಷ ಸಂಘಟಿಸಿ ಮುಂಬರುವ ನಗರಸಭೆ ಚುನಾವಣೆಯಲ್ಲಿ ಖಾತೆ ತೆರಯೋಣ. ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಹೋರಾಟ ನಡೆಸಿ ಪಕ್ಷ ಕಟ್ಟೋಣ. ವಿಶ್ವನಾಥ್ ಅವರ ನೇತೃತ್ವದಲ್ಲಿ ಜನತೆ ನಂಬಿಕೆಯಿಟ್ಟಿದ್ದಾರೆ. ತಂಬಾಕು ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ವಾಣಿಜ್ಯ ಮಂತ್ರಿಯನ್ನು ಕರೆತರುವ ಕಾರ್ಯ ಮಾಡಬೇಕಿದೆ ಎಂದಿದ್ದಾರೆ.
ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್. ಯೋಗಾನಂದಕುಮಾರ್, ಚುನಾವಣಾ ಉಸ್ತುವಾರಿ ಮೈ.ವಿ. ರವಿಶಂಕರ್, ಜಿಪಂ ಮಾಜಿ ಸದಸ್ಯ ಸಿ.ಟಿ. ರಾಜಣ್ಣ, ರಾಮಕೃಷ್ಣ, ರಾಜು ಬಿಳಿಕೆರೆ, ಸೋಮಶೇಖರ್ ಮುಂತಾದವರು ಮಾತನಾಡಿದರು. ಇಡೀ ಕಲ್ಯಾಣಮಂಟಪ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ತುಂಬಿ ತುಳುಕಿತ್ತು.
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ.