ಗುರುಮಠಕಲ್ ಪೊಲೀಸ್ ಠಾಣೆಯ ಪಿಎಸೈ ಸೇರಿ 16 ಸಿಬ್ಬಂದಿಗಳ ವರದಿ ಪಾಸಿಟಿವ್, ನಂತರ ನೆಗೆಟಿವ್| ಕಳೆದ ವಾರವಷ್ಟೇ ಯಾದಗಿರಿ ಜಿಲ್ಲಾಸ್ಪತ್ರೆ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಪ್ರಯೋಗಾಲಯ ವರದಿಯ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಮೂಡಿಬಂದಿದ್ದವು|
ಯಾದಗಿರಿ(ಜು.16): ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕೋವಿಡ್-19 ಟೆಸ್ಟ್ ವಿಚಾರ ಇದೀಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಜು.13ರಂದು ಈ ಠಾಣೆಯ ಪಿಎಸೈ ಸೇರಿದಂತೆ 16 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎನ್ನುವ ಮಾಹಿತಿ ಪ್ರಕಟಗೊಂಡಿತ್ತು. ಹೀಗಾಗಿ, ಕೋವಿಡ್ ಕೇರ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಓರ್ವ ಮಹಿಳಾ ಪಿಎಸೈ, ಇಬ್ಬರು ಹೆಡ್ ಕಾನ್ಸ್‌ಟೇಬಲ್ಸ್ ಹಾಗೂ 13 ಜನ ಕಾನ್ಸ್‌ಟೇಬಲ್ಸ್‌ಗೆ ಸೋಂಕು ಖಚಿತಪಟ್ಟಿತ್ತು. ಇದಕ್ಕಾಗಿ ಆಗ ಇಡೀ ಠಾಣೆಯನ್ನೆ ಸೀಲ್‌ಡೌನ್ ಮಾಡಲಾಗಿತ್ತು. ಆದರೆ, ಮಾರನೇಯ ದಿನವೇ, ಅಂದರೆ ಜು.14ರಂದು ಇವರ ವರದಿಗಳು ನೆಗೆಟಿವ್ ಬಂದಿವೆ ಅನ್ನೋ ಕಾರಣಕ್ಕೆ ಕೆಲವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎನ್ನಲಾಗಿದೆ.
undefined
ಈ ವಿಚಾರ, ಗುರುಮಠಕಲ್ ಪಟ್ಟಣ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಸೋಮವಾರ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕೆ ಅಡ್ಮಿಟ್ ಮಾಡಿದ್ದರೆ, ಮರುದಿನವೇ ನೆಗೆಟಿವ್ ಬಂದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನೇಕ ಅನುಮಾನಗಳಿಗೆ ಕಾರಣವಾದವು. ಆದರೆ, ಠಾಣೆಯ ಸಿಬ್ಬಂದಿಗಳ ಗಂಟಲು ದ್ರವ ಮಾದರಿಯನ್ನು ಜು.4ರಂದೇ ಪಡೆಯಲಾಗಿತ್ತು. ಜು.11ರಂದು ರಾತ್ರಿ ಪ್ರಯೋಗಾಲಯ ವರದಿ ಪ್ರಕಟಗೊಂಡಿದ್ದರಿಂದ, ಜು.12ರಂದು ಭೀಮರಾಯನಗುಡಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಮತ್ತೊಮ್ಮೆ ಬಾರಿ ಸ್ಯಾಂಪಲ್ ಪಡೆದಾಗ ನೆಗೆಟಿವ್ ಬಂದಿದೆ ಎನ್ನುತ್ತಾರೆ ವೈದ್ಯರು. ಇದು ಸಹಜವಾಗಿ ಹತ್ತು ದಿನಗಳಾಗಿ ಹೋಗಿವೆ, ಹೀಗಾಗಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಹೀಗಾಗಿ, ಕೋವಿಡ್ ಟೆಸ್ಟ್ ಬಗ್ಗೆ ಅನುಮಾನ ಬೇಡ ಎಂಬುದು ಜಿಲ್ಲಾ ಆರೋಗ್ಯಧಿಕಾರಿ ಡಾ. ಎಂ. ಎಸ್. ಪಾಟೀಲ್ ಪ್ರತಿಕ್ರಿಯಿಸುತ್ತಾರೆ.
ಯಾದಗಿರಿ: ಕೋವಿಡ್ ಟೆಸ್ಟ್ ಮಾಡಲು ಬಂದಾಗ ಊರಲ್ಲೇ ಇರ್‍ಲಿಲ್ಲ, ಆದ್ರೂ ಪಾಸಿಟಿವ್ !
ಒಂದು ಹಂತದಲ್ಲಿ ಇದು ಸರಿಯಾದರೆ, ರಿಪೋರ್ಟ್ ಬರಲು ಎಂಟ್ಹತ್ತು ದಿನಗಳನ್ನು ಮಾಡಿದರೆ ಪಾಸಿಟಿವ್ ಬಂದವರ ಮತ್ತಷ್ಟೂಚಲನವಲನಗಳಿಂದ ಹಬ್ಬುವ ಸಾಧ್ಯತೆ ಇರುತ್ತದೆ ಎನ್ನುವ ಸಾರ್ವಜನಿಕ ಮಾತುಗಳನ್ನೂ ತಳ್ಳಿಹಾಕುವಂತಿಲ್ಲ. ಕಳೆದ ವಾರವಷ್ಟೇ ಯಾದಗಿರಿ ಜಿಲ್ಲಾಸ್ಪತ್ರೆ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಪ್ರಯೋಗಾಲಯ ವರದಿಯ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಮೂಡಿಬಂದಿದ್ದವು. ವೈದ್ಯರುಗಳಿಗೆ ಮುಂಜಾನೆ ಪಾಸಿಟಿವ್ ಎಂಬ ಕಾರಣಕ್ಕೆ ಇಡೀ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಟೆಸ್ಟ್ ಮಾಡಿಸಲಾಗುತ್ತಲ್ಲದೆ, ಪ್ರಾಥಮಿಕ ಸಂಪರ್ಕದ ರೋಗಿಗಳನ್ನು ಪತ್ತೆ ಹಚ್ಚಲು ಯತ್ನಿಸಿದ್ದರು. ಆದರೆ, ಸಂಜೆಯೊಳಗೆ ಎಲ್ಲ ವರದಿಗಳೂ ನೆಗೆಟಿವ್ ಎಂಬ ಆರೋಗ್ಯ ಇಲಾಖೆಯ ಮಾತುಗಳು ಜನರ ಅನುಮಾನವನ್ನು ಮತ್ತಷ್ಟೂ ಕಾಡುವಂತೆ ಮಾಡಿತ್ತು.
ಜು.4ರಂದೇ ಸಿಬ್ಬಂದಿಗಳ ಗಂಟಲು ದ್ರವ ಮಾದರಿ ಪಡೆಯಲಾಗಿತ್ತು. ಪಾಸಿಟಿವ್ ಬಂದ ನಂತರ ಅವರಿಗೆ ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ಹತ್ತು ದಿನಗಳಾಗಿದ್ದರಿಂದ ಮಾದರಿ ಪಡೆಯಲಾಗಿತ್ತು. ಅಸಿಂಪ್ಟೋಮ್ಯಾಟಿಕ್ ಇದೆ, ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಎಸ್ಪಿ ಋುಷಿಕೇಶ್ ಸೋನವಣೆ ಅವರು ತಿಳಿಸಿದ್ದಾರೆ.