ಎತ್ತಿನಂತೆ ಎಡೆ ಹೊಡೆಯುವುದಕ್ಕೆ ಹೆಗಲು ಕೊಡುತ್ತಿರುವ ಬಿಇಡಿ ಪದವೀಧರ| ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಕರುಣಾಜನಕ ಕತೆ| ನಾನೊಬ್ಬನೇ ಅಲ್ಲ, ನನ್ನಂತಹ ಅನೇಕರು ಬಿಇಡಿ ಪದವಿಯನ್ನು ಮುಗಿಸಿ, ಈ ರೀತಿ ದುಡಿಯುತ್ತಿದ್ದಾರೆ, ಸರ್ಕಾರ ಕೂಡಲೇ ನೇಮಕ ಮಾಡಿಕೊಳ್ಳಬೇಕು ಎನ್ನುವ ಹಕ್ಕೊತ್ತಾಯ ಪದವಿಧರ ಮರಿಯಪ್ಪನ ಆಗ್ರಹ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.07): ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದ ಬಿಇಡಿ ಪದವೀಧರ ಮರಿಯಪ್ಪ ಹಳ್ಳಿ ಈಗ ಅಪ್ಪನ ಕೃಷಿಗೆ ಸಾಥ್ ನೀಡಲು ಎತ್ತಿನಂತೆ ಎಡೆ ಹೊಡೆಯುವುದಕ್ಕೆ ಹೆಗಲು ಕೊಡುತ್ತಿದ್ದಾರೆ. ಹೊಲದಲ್ಲಿನ ಬೆಳೆಯನ್ನು ಎಡೆ ಹೊಡೆಯಲು ಎತ್ತು ಇಲ್ಲದಿರುವುದರಿಂದ ಮತ್ತು ಬಾಡಿಗೆ ಕೊಡುವುದು ಕಷ್ಟವಾಗಿರುವುದರಿಂದ ಮನೆಯಲ್ಲಿಯೇ ಇರುವ ಪದವೀಧರ ಈಗ ಹೆಗಲು ಕೊಟ್ಟು ಎತ್ತಿನಂತೆ ಎಳೆಯುತ್ತಿರುವ ಕರುಣಾಜನಕ ಕತೆ ಇದು.
ಎತ್ತು, ಎಮ್ಮೆಗಳನ್ನು ಕೃಷಿಯಲ್ಲಿ ಹೀಗೆ ದುಡಿಸಿಕೊಳ್ಳುವುದು ತಪ್ಪು ಎನ್ನುವ ಕಾಲ ಇದು. ಟ್ರ್ಯಾಕ್ಟರ್ ಮೊದಲಾದ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೃಷಿ ಮಾಡಬೇಕು ಎನ್ನಲಾಗುತ್ತದೆ. ಅಂಥದ್ದರಲ್ಲಿ ಎತ್ತುಗಳಂತೆ ಪದವೀಧರ ಶಿಕ್ಷಕ ಗಳೆ ಹೊಡೆಯುವುದಕ್ಕೆ ನೊಗ ಹೊತ್ತು ಎಳೆಯುತ್ತಿರುವ ದೃಶ್ಯ ಮನಕಲಕುವಂತೆ ಇದೆ.
ಬಂಗಾರದ ಮನುಷ್ಯ
ಅವರ ತಂದೆ ಹುಚ್ಚಪ್ಪ ಕಡುಬಡನತದಲ್ಲಿದ್ದಾನೆ. ತುಂಡು ಹೊಲ ಇಲ್ಲದಿದ್ದರೂ ಪಾಳು ಬಿದ್ದಿದ್ದ ಹೊಲವನ್ನು ಕೇಳಿ, ಬಂಗಾರದ ಮನುಷ್ಯನಂತೆ ತಾನೇ ನಿಂತು ಅದರಲ್ಲಿದ್ದ ಜಾಲಿಗಿಡಗಳನ್ನು ತೆರವು ಮಾಡಿ, ಕೃಷಿ ಮಾಡುತ್ತಿದ್ದಾರೆ. ಸುಮಾರು 5 ಎಕರೆ ಈ ಭೂಮಿಯಲ್ಲಿ ಈರುಳ್ಳಿ ಮತ್ತು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.
ಕೊರೋನಾ ಮುಕ್ತ ಕೊಪ್ಪಳ ಅಭಿಯಾನ: ಗವಿಸಿದ್ದೇಶ್ವರ ಸ್ವಾಮೀಜಿಯವರಿಂದ ಜಾಗೃತಿ ಜಾಥಾಕ್ಕೆ ಚಾಲನೆ
ಈರುಳ್ಳಿಯಲ್ಲಿ ಕಳೆ ತೆಗೆಯಿಸಲು ಆಳಿಗೆ ದುಡ್ಡು ಕೊಡಲು ಆಗದೆ ಮತ್ತು ಎತ್ತಿನಿಂದ ಹರಗಲು ಬಾರದಿರುವುದರಿಂದ ತಾನೇ ಮನೆಯಲ್ಲಿಯೇ ಇರುವ ಪದವೀಧರ ಮಗನನ್ನು ಹೂಡಿ ಎಡೆ ಹೊಡೆಯುತ್ತಿದ್ದಾರೆ. ಕೇವಲ ಅವರಷ್ಟೇ ಅಲ್ಲ, ಮನೆಯವರು ಸರದಿಯ ಮೇಲೆ ದಣಿವಾರಿಸಿಕೊಂಡು ಹೀಗೆ ಎತ್ತಿನಂತೆ ದುಡಿಯುತ್ತಾರೆ.
ನೇಮಕ ಮಾಡಿಕೊಳ್ಳಲು ಆಗ್ರಹ
ನಾನೊಬ್ಬನೇ ಅಲ್ಲ, ನನ್ನಂತಹ ಅನೇಕರು ಬಿಇಡಿ ಪದವಿಯನ್ನು ಮುಗಿಸಿ, ಈ ರೀತಿ ದುಡಿಯುತ್ತಿದ್ದಾರೆ. ಸರ್ಕಾರ ಕೂಡಲೇ ನೇಮಕ ಮಾಡಿಕೊಳ್ಳಬೇಕು ಎನ್ನುವ ಹಕ್ಕೊತ್ತಾಯ ಪದವಿಧರ ಮರಿಯಪ್ಪನ ಆಗ್ರಹ.
ಬಡತನ ಇರುವುದರಿಂದ ಅನಿವಾರ್ಯವಾಗಿ ನಾವು ದುಡಿಯಲೇಬೇಕು. ಎತ್ತುಗಳನ್ನು ಮತ್ತು ಆಳುಗಳನ್ನು ಹಚ್ಚಿ ಕೆಲಸ ಮಾಡಿಸುವಷ್ಟು ಶ್ರೀಮಂತರು ನಾವಲ್ಲ. ಹೀಗಾಗಿ, ಅನಿವಾರ್ಯವಾಗಿ ನಾವೇ ಮಾಡಿಕೊಳ್ಳುತ್ತೇವೆ ಎಂದು ತಾನು ನೊಗಕ್ಕೆ ಹೆಗಲು ಕೊಟ್ಟು ದುಡಿಯುತ್ತಿರುವುದಕ್ಕೆ ಕಾರಣವನ್ನು ವಿವರಿಸುತ್ತಾರೆ.
ಅಪ್‌ಲೋಡ್
ಹೀಗೆ ಮಗನನ್ನು ನೊಗಕ್ಕೆ ಹೂಡಿ ಉಳುಮೆ ಮಾಡುತ್ತಿರುವುದನ್ನು ಅದೇ ಗ್ರಾಮದ ಪ್ರಕಾಶ್ ನೋಡಿ ಫೋಟೋ ತೆಗೆದು, ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.