ತಾಳಿಕೋಟೆ: 10 ಅಡಿಗೇ ಪುಟಿದೆದ್ದ ಅಂತ​ರ್ಜಲ, ಸ್ಥಳೀಯರಲ್ಲಿ ಸಂತಸ

By Kannadaprabha News  |  First Published Jan 17, 2020, 10:02 AM IST

ತಾಳಿ​ಕೋ​ಟೆ​ಯಲ್ಲಿ ಸೇತುವೆ ನಿರ್ಮಾಣ ನಿಮಿತ್ತ ಪಾಯ ಅಗೆ​ಯು​ವಾಗ ಚಿಮ್ಮಿದ ನೀರು| ಕುಡಿಯಲೂ ಯೋಗ್ಯವಿರುವ ನೀರು| ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಘಟನೆ|


ಪ್ರವೀಣ್‌ ಘೋರ್ಪಡೆ 

ತಾಳಿಕೋಟೆ(ಜ.17): ನೂರಾರು ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುವುದು ವಿರಳ. ಹೀಗಿ​ರು​ವಾಗ ತಾಳಿಕೋಟೆ ಪಟ್ಟಣಕ್ಕೆ ಹೊಂದಿಕೊಂಡು ಹರಿಯುವ ಡೋಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ಸಮಯದಲ್ಲಿ ಕೇವಲ 10 ಅಡಿ ಅಂತರದಲ್ಲಿ ಬೃಹತ್‌ ನೀರಿನ ಪ್ರಮಾಣ ಹೊಂದಿರುವ ಅಂತರ್ಜಲ ಪತ್ತೆಯಾಗಿದೆ.

Latest Videos

undefined

ಡೋಣಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಸೇತುವೆ ಪಿಲ್ಲ​ರ್‌ಗಳ ನಿರ್ಮಾಣಕ್ಕಾಗಿ ಪಾಯ ಅಗೆಯುವ ಸಮಯದಲ್ಲಿ ಹತ್ತಿದ ಸಣ್ಣ ಬಂಡೆ ಒಡೆದಾಗ ಕೆಳಗಡೆ ಸುಮಾರು 5, 6 ಇಂಚಿನ ನೀರಿನ ಪ್ರಮಾಣ ಹೊಂದಿದ ನೀರಿನ ಜಲ ತಿಂಗಳಾಂತ್ಯದಿಂದ ಸದಾ ಪುಟಿಯುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಅಂತರ್ಜಲ ಸಿಹಿ ನೀರು ಹೊಂದಿದ್ದು, ಬಳಕೆ ಜತೆಗೆ ಕುಡಿಯಲೂ ಯೋಗ್ಯವಿದೆ ಎನ್ನಲಾ​ಗಿದೆ. ಪಾಯ ಅಗೆಯುವ ಸಮಯದಲ್ಲಿ ಕಾಣಿಸಿಕೊಂಡ ಅಂತರ್ಜಲ ಸೇತುವೆ ನಿರ್ಮಾಣದ ಕಾರ್ಮಿಕರು ಅದು ಉಪಯೋಗಕ್ಕೆ ಬರುವಂತೆ ಅದರ ಸುತ್ತಳತೆಯೂ ಸಿಮೆಂಟ್‌ನಿಂದ ಕೊಳವೆ ಆಕಾರದಲ್ಲಿ ಕಟ್ಟುತ್ತಾ ಬಂದಿದ್ದಾರೆ. ಈ ಡೋಣಿ ನದಿಯಲ್ಲಿ ಸದ್ಯ ಸವಳು ಮಿಶ್ರಿತ ನೀರು ಹರಿಯುತ್ತಿದ್ದರಿಂದ ಸೇತುವೆಯ ಕಿವ್ಹರಿಂಗ್‌ ಉಪಯೋಗವಾಗುವುದಿಲ್ಲ. ಮತ್ತೊಂದು ಕಡೆಯಿಂದ ನೀರು ತಂದು ಉಪಯೋಗಿಸಬೇಕಾಗುತ್ತಿತ್ತು. ಪಾಯ ಅಗೆಯುವ ಸಮಯದಲ್ಲಿ ಕಾಣಿಸಿಕೊಂಡಿರುವ ಬೃಹತ್‌ ಪ್ರಮಾಣದ ನೀರು ಸಿಹಿಯಾಗಿದ್ದರಿಂದ ಸೇತುವೆ ನಿರ್ಮಾಣದ ಸಮಯದಲ್ಲಿ ಕಿವ್ಹರಿಂಗ್‌ಗೆ (ನೀರು) ಉಪಯೋಗಕ್ಕೆ ಬರುತ್ತಿದೆ. ಇದನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಹೆಚ್ಚುವರಿಯಾಗಿ ಬರುವ ನೀರನ್ನು 10 ಎಚ್‌ಪಿ ಪಂಪ್‌ಸೆಟ್‌ ಮೋಟರ್‌ ಸಹಾಯದಿಂದ ಹಗಲು ರಾತ್ರಿ ಡೋಣಿನದಿಗೆ ಬಿಡ​ಲಾ​ಗು​ತ್ತಿದೆ ಎಂದು ಸೇತುವೆ ನಿರ್ಮಾಣದ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.

ಸೇತುವೆ ನಿರ್ಮಾಣದ ಸಮಯದಲ್ಲಿ ಪಾಯ ಅಗೆಯುವಾಗ 10 ಅಡಿಯಲ್ಲಿ ದೊಡ್ಡಮಟ್ಟದ ಅಂತರ್ಜಲ ಪುಟಿಯುತ್ತಿರುವುದು ಖುಷಿ ತಂದಿದೆ. ಈ ನೀರನ್ನು ಡೋಣಿ ನದಿಗೆ ಹೊಂದಿಕೊಂಡಿರುವ ಕೆಲ ಬಡಾವಣೆ ಜನರ ಉಪಯೋಗಕ್ಕೆ ಬರುವಂತೆ ಪುರಸಭೆ ಕ್ರಮಕೈಗೊಳ್ಳಬೇಕು ಎಂದು ಕರವೇ ತಾಲೂಕು ಉಪಾಧ್ಯಕ್ಷ ಜೈಭೀಮ ಮುತ್ತಗಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಅವರು, ಡೋಣಿ ನದಿಯಲ್ಲಿ ಸೇತುವೆ ನಿರ್ಮಾಣದ ಸಮಯದಲ್ಲಿ ಅಂತರ್ಜಲ ಪತ್ತೆ​ಯಾ​ಗಿ​ರು​ವುದು ಗಮನಕ್ಕೆ ಬಂದಿದೆ. ಈ ನೀರನ್ನು ಸೇತುವೆ ನಿರ್ಮಾಣಕ್ಕೆ ಗುತ್ತಿಗೆದಾರರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸೇತುವೆ ನಿರ್ಮಾಣದ ನಂತರ ಈ ನೀರನ್ನು ಪಟ್ಟಣ ಕೆಲ ಬಡಾವಣೆಯ ಜನರ ಉಪಯೋಗಕ್ಕೆ ಬರುವಂತೆ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ. 
 

click me!