ರಾಜ್ಯದ ಮಹತ್ವಾಕಾಂಕ್ಷೆ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ಒಂದು ಕೈಯಲ್ಲಿ ಕೊಟ್ಟ, ಮತ್ತೊಂದು ಕೈಯಲ್ಲಿ ಕಸಿದು ಕೊಂಡಂತಾಗಿದೆ ಎಂದು ನೊಂದ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ತಲಕಾಡು : ರಾಜ್ಯದ ಮಹತ್ವಾಕಾಂಕ್ಷೆ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆ ಒಂದು ಕೈಯಲ್ಲಿ ಕೊಟ್ಟ, ಮತ್ತೊಂದು ಕೈಯಲ್ಲಿ ಕಸಿದು ಕೊಂಡಂತಾಗಿದೆ ಎಂದು ನೊಂದ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
ಯೋಜನೆ ಅನುಷ್ಠಾನದಲ್ಲಿ ಸಾಕಷ್ಟು ಗ್ರಾಹಕರಿಗೆ ಖುಷಿ ತಂದಿದ್ದರೆ ಮತ್ತೆ ಕೆಲವರಿಗೆ ನಿರಾಸೆಯಾಗಿದೆ. ವಾರ್ಷಿಕ ಸರಾಸರಿ ಪ್ರಕಾರ ತಿಂಗಳಲ್ಲಿ ಇನ್ನೂರು ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರು, ಯೂನಿಟ್ ಗೆ (ಪರಿಷ್ಕೃತ 7ರೂ ದರದಂತೆ) ಬಿಲ್ ಭರಿಸಬೇಕಿದೆ. 200 ಯೂನಿಟ್ ಮೀರಿ ಬಳಸಿರುವ ರು ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಬಂದಿರುವ ಬಿಲ್ ನೋಡಿ ಶಾಕ್ ಆಗಿದ್ದಾರೆ.
ಗೃಹಜ್ಯೊತಿ ಯೋಜನೆಯಡಿ ಫಲಾನುಭವಿ ಸೇರ್ಪಡೆಗೆ ಸೆಸ್ಕ್ ಅನುಸರಿಸಿರುವ ಷರತ್ತುಗಳು ಇಲ್ಲಿನ ಸಾಕಷ್ಟು ಗ್ರಾಹಕರಿಗೆ ಸಂಕಷ್ಟ ತಂದೊಡ್ಡಿದೆ. ಉಚಿತ ವಿದ್ಯುತ್ ಭಾಗ್ಯ ಯೋಜನೆಗೆ ಸೇರ್ಪಡೆಗೊಂಡರು ಹೇಳಿಕೊಳ್ಳುವ ಪ್ರಯೋಜನವಾಗದೆ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷ ಮನೆಗೆ ಬಾಡಿಗೆದಾರರಿಲ್ಲದೆ, ಉದ್ಯೋಗಕ್ಕಾಗಿ ಅಥವಾ ಅನಾರೋಗ್ಯ ನಿಮಿತ್ತ ಬೇರೆ ಬೇರೆ ಕಾರಣಗಳಿಂದ ಮನೆಗೆ ಬೀಗ ಹಾಕಿ ತೆರಳಿದ್ದವರು. ಪ್ರಸ್ತುತ ಅದೇ ಮನೆಗೆ ವಾಸಕ್ಕೆ ಬಂದಾಗ ತಿಂಗಳ ದುಬಾರಿ ವಿದ್ಯುತ್ ಬಿಲ್ ಭರಿಸಲಾಗದ ಸಂಕಟಕ್ಕೆ ಸಿಲುಕಿದ್ದಾರೆ.
ವರ್ಷದಿಂದ ವಾಸವಿಲ್ಲದ ಮನೆಗಳಲ್ಲಿ ವಿದ್ಯುತ್ ಬಳಕೆ ಪ್ರಮಾಣ 10 ರಿಂದ 20 ಯೂನಿಟ್ ನಷ್ಟು ಕಡಿಮೆ ಇರುತ್ತದೆ. ಇಂತಹ ಮನೆಗೆ ಬಾಡಿಗೆದಾರ ಅಥವಾ ಮನೆಯವರೇ ಮರಳಿ ವಾಸ ಮಾಡಲು ಬಂದಾಗ ಸೆಸ್ಕ್ ಅವರು ಕಳೆದ ವರ್ಷ ವಿದ್ಯುತ್ ಬಳಕೆ ಮಾಡಿರುವ ಸರಾಸರಿ ಆಧಾರದಲ್ಲಿ ಶೇ. 10 ಯೂನಿಟ್ ಸೇರಿಸಿ ಉಚಿತವಾಗಿ ಕೊಡುತ್ತಾರೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ.
ಗೃಹಜ್ಯೋತಿ ಯೋಜನೆಯಡಿ ಸೇರ್ಪಡೆಗೊಂಡ ನಿವಾಸಗಳಲ್ಲಿ 150 ಅಥವಾ 180 ಯೂನಿಟ್ ವಿದ್ಯುತ್ ಬಳಕೆ ಮಾಡಿದ ಗ್ರಾಹಕರು, ತಿಂಗಳ ಕಡಿಮೆ ಸರಾಸರಿ ಮೀರಿ ಹೆಚ್ಚಾಗಿ ಬಳಕೆ ಮಾಡಿದ್ದಕ್ಕೆ ಪೂರ್ಣ ಬಿಲ್ ಪಾವತಿಸುವ ತಾಪತ್ರಯಕ್ಕೆ ಈಗ ಸಿಲುಕಿದ್ದಾರೆ. ಸೆಸ್ಕ್ ಅನುಸರಿಸಿರುವ ಅವೈಜ್ಞಾನಿಕ ನಿಯಮಗಳಿಂದ ಹೋಬಳಿ ಭಾಗದ ಸಾಕಷ್ಟು ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ.
ಅವಿಭಜಿತ ದೊಡ್ಡ ಕುಟುಂಬಗಳು ಗ್ರಾಮೀಣ ಭಾಗದಲ್ಲಿ ಸಾಕಷ್ಟಿವೆ. ಒಂದೇ ಮೀಟರ್ ನಡಿ ಮನೆಯಲ್ಲಿ ಸಹೋದರರ ಕುಟುಂಬಗಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇವರ ಮನೆಯಲ್ಲಿನ ಏಕೈಕ ವಿದ್ಯುತ್ ಮೀಟರ್ 200 ಯೂನಿಟ್ ಗೆ ಹೆಚ್ಚಿಗೆ ಉಪಯೋಗಿಸುತ್ತಾರೆ. ಹೀಗಾಗಿ ತೊಂದರೆಗೆ ಸಿಲುಕಿದ್ದಾರೆ.
ಗೃಹಜ್ಯೋತಿ ಯೋಜನೆಯಡಿ ಸೇರ್ಪಡೆಗೊಂಡು ವರ್ಷದಿಂದ ಖಾಲಿ ಬಿದ್ದಿದ್ದ ಮನೆಗಳು, ಪ್ರಸ್ತುತ ಬಳಕೆ ಮಾಡುತ್ತಿರುವ ಯೂನಿಟ್ ಸರಾಸರಿ ಅನುಸಾರ ಬಿಲ್ ಗೆ ಪರಿಗಣಿಸಲು ಹಾಗು ತಿಂಗಳಲ್ಲಿ 200 ಯೂನಿಟ್ ಗಿಂತಲೂ ಹೆಚ್ಚಾಗಿ ಬಳಸಿದ ಗೃಹ ಬಳಕೆದಾರರಿಗೆ ಹೆಚ್ಚುವರಿಯಾಗಿ ಬಳಸಿರುವ ವಿದ್ಯುತ್ ಗೆ ಮಾತ್ರ ಬಿಲ್ ಪಾವತಿಸಿಗೆ ಅಗತ್ಯ ಕ್ರಮ ವಹಿಸುವಂತೆ ನೊಂದ ಗೃಹಜ್ಯೋತಿ ಗ್ರಾಹಕರು ಒತ್ತಾಯಿಸಿದ್ದಾರೆ.