ಅರಕಲಗೂಡಿನಲ್ಲಿ ಗಮನ ಸೆಳೆದ ಹಸಿರು ದಸರಾ ಮಹೋತ್ಸವ

By Web DeskFirst Published Oct 3, 2019, 3:25 PM IST
Highlights

ಜನಮನ ಆಕರ್ಷಸಿದ ಕಬಡ್ಡಿ, ಹಗ್ಗ-ಜಗ್ಗಾಟ, ಶ್ವಾನಗಳ ಪ್ರದರ್ಶನ| ಜನರ ಆಕರ್ಷಣೆಗೆ ಒಳಪಟ್ಟಶ್ವಾನ ಪ್ರದರ್ಶನಗಳು| ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಯುವಕರು ಹಲವು ತಂಡಗಳ ಮೂಲಕ ಉತ್ತಮ ಕಬಡ್ಡಿ ಆಟ ಪ್ರದರ್ಶನ ನೀಡಿದರು| ಗ್ರಾಮೀಣ ಮಹಿಳೆಯರಿಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿಯೂ ಮಹಿಳೆಯರು ಅತ್ಯುತ್ಸಾಹದಿಂದ ಪಾಲ್ಗೊಂಡು, ನೆರೆದಿದ್ದ ಜನರ ಮನಸೂರೆಗೊಳಿಸಿದರು| ವಿವಿಧ ತಳಿಯ ಶ್ವಾನಗಳನ್ನು ತಂದಿದ್ದ ತಾಲೂಕಿನ ಶ್ವಾನ ಪ್ರಿಯರು ಪ್ರದರ್ಶನ ನೀಡಿದರು| 

ಅರಕಲಗೂಡು(ಅ.3): ಅರಕಲಗೂಡು ಪಟ್ಟಣದಲ್ಲಿ ನಡೆಯುತ್ತಿರುವ 10 ದಿನಗಳ ಹಸಿರು ದಸರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ರೈತ ದಸರಾದಲ್ಲಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ರೈತ ಮಹಿಳೆಯರಿಗಾಗಿ ಹಗ್ಗ ಜಗ್ಗಾಟ ಮತ್ತು ಶ್ವಾನ ಪ್ರದರ್ಶನಗಳು ಜನರ ಆಕರ್ಷಣೆಗೆ ಒಳಪಟ್ಟವು.

ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಯುವಕರು ಹಲವು ತಂಡಗಳ ಮೂಲಕ ಉತ್ತಮ ಕಬಡ್ಡಿ ಆಟ ಪ್ರದರ್ಶನ ನೀಡಿದರು. ಇದಕ್ಕೂ ಮೊದಲು ಶಾಸಕ ಎ.ಟಿ.ರಾಮಸ್ವಾಮಿ ಮತ್ತು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ಪರಸ್ಪರ ಎದುರಾಳಿ ಗುಂಪುಗಳಲ್ಲಿ ಇದ್ದು ಪಂದ್ಯಕ್ಕೆ ಚಾಲನೆ ನೀಡಿದರು.

ಉತ್ಸಾಹದಿಂದ ಪಾಲ್ಗೊಂಡ ಮಹಿಳೆಯರು

ಗ್ರಾಮೀಣ ಮಹಿಳೆಯರಿಗಾಗಿ ನಡೆದ ಹಗ್ಗ ಜಗ್ಗಾಟದಲ್ಲಿಯೂ ಮಹಿಳೆಯರು ಅತ್ಯುತ್ಸಾಹದಿಂದ ಪಾಲ್ಗೊಂಡು, ನೆರೆದಿದ್ದ ಜನರ ಮನಸೂರೆಗೊಳಿಸಿದರು. ವಿವಿಧ ತಳಿಯ ಶ್ವಾನಗಳನ್ನು ತಂದಿದ್ದ ತಾಲೂಕಿನ ಶ್ವಾನ ಪ್ರಿಯರು ಪ್ರದರ್ಶನ ನೀಡಿದರು. ಇದೇ ವೇಳೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆಗಳು ಕೃಷಿ ಸಾಮಗ್ರಿಗಳ ಪರಿಚಯ ಪ್ರದರ್ಶನ, ರಾಸಾಯನಿಕ, ಜೈವಿಕ ಗೊಬ್ಬರಗಳು ಮತ್ತು ಸಾವಯವ ಗೊಬ್ಬರಗಳ ಪರಿಚಯ ಮತ್ತು ಅದರ ಉಪಯುಕ್ತತೆ ಕುರಿತು ಪ್ರದರ್ಶನ ನೀಡಿದರು.

ಆಹಾರ ಪದಾರ್ಥಗಳನ್ನು ಪ್ರದರ್ಶನ 

ವಿವಿಧ ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ಗೃಹೋಪಯೋಗಿ ವಸ್ತುಗಳು, ಆಹಾರ ಪದಾರ್ಥಗಳನ್ನು ಪ್ರದರ್ಶನ ಮಾಡಲಾಯಿತು. ವಸ್ತು ಪ್ರದರ್ಶನಗಳ ಉದ್ಘಾಟನೆ ನಂತರ ಅರಕಲಗೂಡು ರೈತ ದಸರಾ ಕಾರ್ಯಕ್ರಮವನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ಉದ್ಘಾಟಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಾರೆಕೆರೆ ಕೃಷಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಯರಾಮಯ್ಯ ಮಾತನಾಡಿ, ಇಂದು ನಗರೀಕರಣ ಮತ್ತು ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಅದೇ ರೀತಿ ಜನಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಿದ್ದು, ಅದಕ್ಕನುಗುಣವಾಗಿ ಆಹಾರ ಉತ್ಪಾದನೆಯನ್ನೂ ಹೆಚ್ಚಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದ ಅವರು, 12 ವರ್ಷಗಳ ಹಿಂದೆ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆ ಕೃಷಿ ಮಾಡಲಾಗುತ್ತಿತ್ತು. ಬೆಳೆ ಪರಿವರ್ತನೆ ಮಾಡದ ಪರಿಣಾಮ ವಿವಿಧ ರೋಗಗಳು, ಬೆಳೆಯ ಬೆಲೆ ಇಳಿಕೆ ಮುಂತಾದ ಸಮಸ್ಯೆಗಳು ತಲೆದೋರಿ ಇಂದು ಕೇವಲ 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಆಲೂ ಬೆಳೆ ಬೆಳೆಯಲಾಗುತ್ತಿದೆ ಎಂದರು.

ಲಭ್ಯವಿರುವ ಕೃಷಿ ಭೂಮಿಯಲ್ಲೆ ಅತ್ಯದಿಕೆ ಬೆಳೆ ಬೆಳೆಯುವ ಅನಿವಾರ್ಯತೆ ನಮ್ಮ ಮೇಲಿದ್ದು, ಪ್ರಸ್ತುತ 288 ಮಿಲಿಯನ್‌ ಟನ್‌ ಆಹಾರದ ಅಗತ್ಯವಿದ್ದು, ಇದರ ಪ್ರಮಾಣ ಸದ್ಯದಲ್ಲೇ 325 ಮಿಲಿಯನ್‌ ಟನ್‌ಗೆ ಏರಿಕೆಯಾಗಲಿದೆ ಎಂದು ತಿಳಿಸಿದರು. 
 

click me!