ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವುದೂ ಸೇರಿ ಇನ್ನಿತರೆ ಉದ್ದೇಶದೊಂದಿಗೆ ಪೊಲೀಸ್ ಇಲಾಖೆಯಿಂದ ನೂತನ ದುರ್ಗಾ ಪಡೆ ಅಸ್ತಿತ್ವಕ್ಕೆ ತರಲಾಗಿದೆ| ಶ್ರೀ ಜಯದೇವ ವೃತ್ತದಲ್ಲಿ ನೂತನ ದುರ್ಗಾ ಪಡೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉದ್ಘಾಟಿಸಿದ್ದಾರೆ. ದುರ್ಗಾ ಪಡೆ ರಚನೆ ಹಿನ್ನೆಲೆ, ಅದರ ಮಹತ್ವ, ಕಾರ್ಯ ಚಟುವಟಿಕೆಗಳ ಕುರಿತಂತೆ ಮಾಹಿತಿ ನೀಡಿದರು|
ದಾವಣಗೆರೆ(ಅ.3): ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವುದೂ ಸೇರಿ ಇನ್ನಿತರೆ ಉದ್ದೇಶದೊಂದಿಗೆ ಪೊಲೀಸ್ ಇಲಾಖೆಯಿಂದ ನೂತನ ದುರ್ಗಾ ಪಡೆ ಅಸ್ತಿತ್ವಕ್ಕೆ ತರಲಾಗಿದೆ.
ನಗರದ ಶ್ರೀ ಜಯದೇವ ವೃತ್ತದಲ್ಲಿ ನೂತನ ದುರ್ಗಾ ಪಡೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಉದ್ಘಾಟಿಸಿ, ದುರ್ಗಾ ಪಡೆ ರಚನೆ ಹಿನ್ನೆಲೆ, ಅದರ ಮಹತ್ವ, ಕಾರ್ಯ ಚಟುವಟಿಕೆಗಳ ಕುರಿತಂತೆ ಮಾಹಿತಿ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಹಿಳಾ ಸಿಬ್ಬಂದಿಯನ್ನೊಳಗೊಂಡ ದುರ್ಗಾ ಪಡೆ ಇಂದಿನಿಂದ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಲಿದೆ. ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡಲು ದುರ್ಗಾ ಪಡೆ ಸಜ್ಜಾಗಿದೆ. ಮಹಿಳೆಯರು, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಮಾರಾಟ ತಡೆ, ಮಾದಕ ವ್ಯಸನ, ಸೈಬರ್ ಕ್ರೈಮ್ ಕುರಿತಂತೆ ಜನರಲ್ಲಿ ಅರಿವು ಮೂಡಿಸುವುದು. ನಿರ್ಗತಿಕ, ಅನಾಥ ಮಕ್ಕಳ ರಕ್ಷಣೆಗೆ ದುರ್ಗಾ ಪಡೆ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಮಹಿಳೆಯರು, ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಪಡೆ ಸ್ಥಾಪಿಸಲಾಗಿದೆ. ತೊಂದರೆ, ಸಂಕಷ್ಟದಲ್ಲಿರುವ ಮಹಿಳೆಯರು ದುರ್ಗಾ ಪಡೆಗೆ ದೂರು ನೀಡಬಹುದು. ನಿರ್ಭಯಾ ಯೋಜನೆಯಡಿ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ 15 ಜನ ಸದಸ್ಯರ ತಂಡ ಈ ಪಡೆಯಲ್ಲಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ನಿರೀಕ್ಷಕಿ ನಾಗಮ್ಮ ಮಾತನಾಡಿ, ಆತ್ಮರಕ್ಷಣೆ, ಕರಾಟೆ ಕೌಶಲ್ಯ ತರಬೇತಿಯನ್ನು ದುರ್ಗಾ ಪಡೆ ಸದಸ್ಯರು ಪಡೆದಿದ್ದು, ಶಾಲಾ-ಕಾಲೇಜು ಆರಂಭವವಾಗುವ ಮತ್ತು ಬಿಡುವ ವೇಳೆಗೆ ತಂಡವು ಗಸ್ತು ತಿರುಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು, ಮಕ್ಕಳಿಗೆ ರಕ್ಷಣೆ ಒದಗಿಸುವುದು ತಂಡದ ಮೊದಲ ಕರ್ತವ್ಯ ಎಂದು ತಿಳಿಸಿದರು.
ಮಹಿಳೆಯರು, ಮಕ್ಕಳು ತೊಂದರೆಯಲ್ಲಿ ಸಿಲುಕಿದ್ದರೆ ತಕ್ಷಣವೇ ಮಹಿಳಾ ಪೊಲೀಸ್ ಠಾಣೆಯ ದೂ. 08192-253088ಗೆ ಸಂಪರ್ಕಿಸಬೇಕು. ತಕ್ಷಣವೇ ದುರ್ಗಾ ಪಡೆ ರಕ್ಷಣೆಗೆ ಧಾವಿಸಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ ಸೇರಿದಂತೆ ಗಣ್ಯರು ನೂತನ ದುರ್ಗಾ ಪಡೆ ತಂಡಕ್ಕೆ ಶುಭಾರೈಸಿದರು.