* 4 ದಿನಗಳಲ್ಲಿ 17 ಪರ್ವತಾರೋಹಣ ಮಾಡಿ ಸಾಧನೆ ಮಾಡಿದ ಹಳ್ಳಿಯ ಯೋಧ
* ಜೈ ಭಾರತಾಂಬೆ ಎಂದು ರಾಷ್ಟ್ರ ಧ್ವಜ ಹಿಡಿದು ಜೈಕಾರ ಹಾಕಿದ ಯುವಕರು
* ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿ
ಗಂಗಾವತಿ(ಸೆ.01): 4 ದಿನದಲ್ಲಿ 17 ಮಾಡಿ ಗಿನ್ನಿಸ್ ದಾಖಲೆಯ ಸಾಧನೆಗೈದಿರುವ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ವೀರ ವೀರೇಶ ಗಾದಿಗನೂರು ಮಂಗಳವಾರ ಸ್ವಗ್ರಾಮಕ್ಕೆ ಆಗಮಿಸಿದ್ದು ಅವರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ, ಮನೆಗೆ ಕಳುಹಿಸಿಕೊಟ್ಟರು.
ವೀರೇಶ ಮೈಲಾಪುರ ಗ್ರಾಮದ ಪಂಪನಗೌಡ ಗಾದಿಗನೂರು ಅವರ ಪುತ್ರ. 2011ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡು ಆಂಧ್ರಪ್ರದೇಶ, ಜಮ್ಮು ಕಾಶ್ಮೀರ, ಆಸ್ಸಾಂ, ಪಂಜಾಬ್, ಸಿಕ್ಕಿಂ, ಅರುಣಾಚಲ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಯುದ್ಧ, ಭಯೋತ್ಪಾದಕರ ಜೊತೆಗಿನ ಗುಂಡಿನ ಚಕಮಕಿಗಳಲ್ಲಿ ಪಾಲ್ಗೊಂಡಿದ್ದಾರೆ. ಬಿ.ಎ. ಪದವೀಧರರಾಗಿರುವ ವೀರೇಶ ರೈತ ಕುಟುಂಬದಲ್ಲಿ ಕಷ್ಟಜೀವನ ನಡೆಸಿ ಶಿಕ್ಷಣ ಪಡೆದಿದ್ದಾರೆ.
ಗಿನ್ನಿಸ್ ದಾಖಲೆ
ವೀರೇಶ್ ಗಾದಿಗನೂರು ಅವರು ನಾಲ್ಕು ದಿನಗಳಲ್ಲಿ 17 ಪರ್ವತಾರೋಹಣ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. 6 ಸಾವಿರ ಮೀಟರ್ ಪರ್ವತ ಏರಿ ರಾಷ್ಟ್ರ ಧ್ವಜ ಹಾರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಹಿಂದೆ ಯೋಧರೊಬ್ಬರು 9 ದಿನಗಳಲ್ಲಿ 15 ಪರ್ವತಾರೋಹಣ ಮಾಡಿ 5.800 ಮೀಟರ್ ಎತ್ತರ ಏರಿದ್ದರು. ಈಗ ವೀರೇಶ 6 ಸಾವಿರ ಮೀಟರ್ ಏರಿ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಅದ್ಧೂರಿ ಸ್ವಾಗತ
ವೀರಯೋಧ ವೀರೇಶ್ ಮೈಲಾಪುರ ಗ್ರಾಮಕ್ಕೆ ಬರುತ್ತಿದ್ದಂತಯೇ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಪುತ್ರನ ಆಗಮನಕ್ಕೆ ಮನೆಯನ್ನು ಸಿಂಗರಿಸಿ, ಆರತಿ, ರಂಗೋಲಿ ಸೇರಿದಂತೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಯುವಕರು ಜೈ ಭಾರತಾಂಬೆ ಎಂದು ರಾಷ್ಟ್ರ ಧ್ವಜ ಹಿಡಿದು ಜೈಕಾರ ಹಾಕಿದರು. ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸ್ವಾಗತಿಸಿದರು.
ವೀರಯೋಧನ ಸಾಧನೆಗೆ ವೀರಭದ್ರ ಶರಣರು ತಲೇಖಾನ ಹಿರೇಮಠ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ. ಅದರಂತೆ ಗ್ರಾಮದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಮೈಲಾಪುರ ಸಂತಸ ವ್ಯಕ್ತ ಪಡಿಸಿದ್ದಾರೆ.