ನಂಜನಗೂಡು : ಡೀಸಿ ರೋಹಿಣಿ ಸಿಂಧೂರಿ ಮಹತ್ವದ ಆದೇಶ

By Kannadaprabha NewsFirst Published Mar 17, 2021, 7:14 AM IST
Highlights

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಹತ್ವದ ಆದೇಶ ಹೊರಡಿಸಿದ್ದಾರೆ.  ನಂಜನಗೂಡು ಜಾತ್ರಾ ಮಹೋತ್ಸವ ಸಂಬಂಧ ಆದೇಶ ನೀಡಿದ್ದಾರೆ. 

ಮೈಸೂರು (ಮಾ.17):  ಕೋವಿಡ್‌-19 ಸ್ಫೋಟ ಹಾಗೂ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾ. 19 ರಿಂದ 30 ರವರೆಗೆ ನಡೆಯುವ ಜಾತ್ರಾ ಮಹೋತ್ಸವ ಹಾಗೂ 26 ರಂದು ನಡೆಯಬೇಕಿದ್ದ ಶ್ರೀ ಶ್ರೀಕಂಠೇಶ್ವರಸ್ವಾಮಿ ಗೌತಮ ಪಂಚಮಹಾರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.

ಮಾ. 19 ರಿಂದ 30ರವರೆಗೆ ನಡೆಯುವ ಧಾರ್ಮಿಕ ಕಾರ್ಯವನ್ನು ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿ ಹಾಗೂ ದೇವಾಲಯದಲ್ಲಿ ನಡೆಯುವ ಸಾಂಪ್ರದಾಯ ಬದ್ಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಥಳೀಯರ ಸಹಯೋಗದೊಂದಿಗೆ ದೇವಾಲಯದ ಒಳಾವರಣದಲ್ಲಿ ನಡೆಸಲು ಅನುಮತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಕೊರೋನಾ ಆತಂಕ: 24 ಗಂಟೆಗಳಲ್ಲಿ ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ ...

ಮಾ. 26ರಂದು ನಡೆಯಬೇಕಾಗಿದ್ದ ಗೌತಮ ಪಂಚಮಹಾರಥೋತ್ಸವವನ್ನು ರದ್ದುಗೊಳಿಸಿದ್ದು, ಅದರ ಬದಲಾಗಿ ದೇವಾಲಯದ ಹೊರ ಆವರಣದಲ್ಲಿ ದೇವಾಲಯದ ಅರ್ಚಕರು, ಸಿಬ್ಬಂದಿ ಮಾತ್ರ ಮಾಸ್ಕ್‌ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಷರತ್ತಿಗೊಳಪಡಿಸಿ ಸಾಂಕೇತಿಕವಾಗಿ ಚಿಕ್ಕ ತೇರಿನಲ್ಲಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ದೇವಾಲಯಕ್ಕೆ ಪ್ರವೇಶ ನಿಷೇಧ​: ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಲ್ಪಟ್ಟಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು, ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು, ತುರ್ತು ಸೇವಾ ವಾಹನಗಳನ್ನು ಹಾಗೂ ನಂಜನಗೂಡಿನ ಸ್ಥಳೀಯ ಗ್ರಾಮಸ್ಥರನ್ನು ಹೊರತುಪಡಿಸಿ ಹೊರ ರಾಜ್ಯ, ಹೊರ ಜಿಲ್ಲೆ ಮತ್ತು ಹೊರ ತಾಲೂಕಿನಿಂದ ಬರುವ ಸಾರ್ವಜನಿಕರಿಗೆ ಮೇಲ್ಕಂಡ ದಿನಾಂಕಗಳಂದು ದೇವಾಲಯಕ್ಕೆ ಪ್ರವೇಶ ನಿಷೇಧಿಸಿ ಆದೇಶಿಸಿದ್ದಾರೆ.

click me!