ಕೋವಿಡ್‌ ಆತಂಕದಲ್ಲಿ ಮಕ್ಕಳ ಸರ್ವೆಗಿಳಿದ ಶಿಕ್ಷಕರ ಗೋಳು..!

By Kannadaprabha News  |  First Published Jun 4, 2021, 3:21 PM IST

* ಮುನ್ನೆಚ್ಚರಿಕೆ ಕೈಗೊಳ್ಳದೆ ಶಿಕ್ಷಕರನ್ನು ಮನೆ ಮನೆಗೆ ತಳ್ಳಿದ ಆಡಳಿತ
* ಮನೆ ಮನೆ ಸುತ್ತುತ್ತಿರುವುದೇ ಸೋಂಕು ಹರಡುವುದಕ್ಕೆ ದಾರಿಯಾದೀತು
* ಮಕ್ಕಳ ಮಾಹಿತಿಯನ್ನು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ನೀಡಿದ್ದಾಗಿದೆ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.04): ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಯಿಂದ ಮಕ್ಕಳ ಸರ್ವೆ ಕಾರ್ಯ ಆಗಿದೆ. ಆದರೂ ಈಗ ಕೊಪ್ಪಳ ಜಿಲ್ಲಾಡಳಿತ ಮಾತ್ರ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ಮೂಲಕ ಮನೆ ಮನೆಗೆ ಹೋಗಿ ಮಕ್ಕಳ ಸರ್ವೆ ಮಾಡಿಸಲು ಮುಂದಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

Latest Videos

undefined

ಕೋವಿಡ್‌ ಆರ್ಭಟದ ವೇಳೆಯಲ್ಲಿ ಹೀಗೆ ಸುತ್ತಾಡುವುದು ಎಷ್ಟುಸರಿ? ಇದುವೇ ಕೋವಿಡ್‌ ಹರಡುವುದಕ್ಕೆ ರಹದಾರಿಯಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಶಿಕ್ಷಕರು. ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಕೊರೋನಾ ಅಟ್ಟಹಾಸ ಸ್ವಲ್ಪಮಟ್ಟಿಗೆ ತಗ್ಗಿದೆ. ಈ ವೇಳೆಯಲ್ಲಿ ಜಿಲ್ಲಾಡಳಿತದ ಈ ಕ್ರಮ ಮಾತ್ರ ಅನಾಹುತಕ್ಕೆ ದಾರಿ ಮಾಡುವ ಎಲ್ಲ ಸಾಧ್ಯತೆಗಳು ಇವೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.

ಸಚಿವರ ಆದೇಶದಂತೆ:

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರು ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆಯನ್ನು ತಡೆಯಲು ಮಕ್ಕಳ ಸಂಖ್ಯೆಯನ್ನು ಸರ್ವೆ ಮಾಡಲು ಮುಂದಾದರು. ಇದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರನ್ನು ತಕ್ಷಣ ಸರ್ವೆ ಕಾರ್ಯಕ್ಕೆ ಇಳಿಸಿ ಎಂದು ಸೂಚಿಸಿದರು.

ಕೊಪ್ಪಳ: ಗವಿಮಠ ಕೋವಿಡ್‌ ಆಸ್ಪತ್ರೆಗೆ ಎನ್‌ಆರ್‌ಐ ನೆರವು

ಸಚಿವರ ಆದೇಶದಂತೆ ಜಿಲ್ಲಾಡಳಿತ ಈಗ ಜಿಲ್ಲೆಯಲ್ಲಿ ಶಿಕ್ಷಕರ ಮೂಲಕ ಮಕ್ಕಳ ಸರ್ವೆ ಕಾರ್ಯವನ್ನು ಪ್ರಾರಂಭಿಸಿದೆ. ಶಿಕ್ಷಕರು ತಮಗೆ ಹಂಚಿಕೆಯಾಗಿರುವ ವಾರ್ಡ್‌ ಮತ್ತು ಊರುಗಳಿಗೆ ಹೋಗಿ ಸರ್ವೆಯನ್ನು ಆತಂಕದಿಂದಲೇ ಮಾಡುತ್ತಿದ್ದಾರೆ. ನಮ್ಮಿಂದಾಗಿ ಅವರಿಗೆ ಅಥವಾ ಅವರಿಂದಾಗಿ ನಮಗೆ ಹರಡುವ ಸಾಧ್ಯತೆ ಇರುತ್ತದೆ. ಪ್ರತಿ ಮನೆ ಮನೆಗೆ ಹೋಗಿ ಸರ್ವೆ ಮಾಡುವುದರಿಂದ ಇದು ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

ಯಾಕೆ ಬೇಕಿತ್ತು ಈ ಸರ್ವೆ?:

ಅಷ್ಟಕ್ಕೂ ಈ ಸರ್ವೆ ಯಾಕೆ ಬೇಕಿತ್ತು ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆ. ಶಾಲಾ ದಾಖಲಾತಿ ಮತ್ತು ಅಂಗನವಾಡಿಯಲ್ಲಿನ ದಾಖಲಾತಿಯಲ್ಲಿ ಎಲ್ಲವೂ ಲಭ್ಯವಿದೆ. ಅಲ್ಲದೆ ಈಗಾಗಲೇ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಮೂಲಕ ಮಕ್ಕಳ ಅಂಕಿ-ಸಂಖ್ಯೆಯನ್ನು ಸಂಗ್ರಹಿಸಲಾಗಿದೆ. ಪ್ರತಿ ವಾರ್ಡ್‌ ಮತ್ತು ಊರುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇದ್ದೇ ಇರುತ್ತಾರೆ. ಅವರ ಬಳಿ ಪ್ರತಿಯೊಂದು ಮಗು ಜನ್ಮತಳೆಯುತ್ತಿದ್ದಂತೆ ದಾಖಲಾಗುತ್ತದೆ. ಅಲ್ಲದೆ ಅವರಿಗೆ ಹೇಳಿದ್ದರೂ ಎರಡು ದಿನಗಳಲ್ಲಿ ಮಕ್ಕಳ ಮಾಹಿತಿ ದೊರೆಯುತ್ತಿತ್ತು. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ಅವರು ಸೂಚಿಸಿದ್ದಾರೆಂದು ಏಕಾಏಕಿ ಸರ್ವೆ ಮಾಡಲು ಪ್ರಾರಂಭಿಸಿರುವುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.

ವಾರಿಯರ್ಸ್‌ ಘೋಷಣೆ ಮಾಡಿ:

ನಾವು ಸರ್ವೆ ಮಾಡುವುದಿಲ್ಲ ಎಂದು ಹೇಳುವುದಿಲ್ಲ. ಆದರೆ, ನಮ್ಮನ್ನು ವಾರಿಯರ್ಸ್‌ ಎಂದು ಘೋಷಣೆ ಮಾಡಿ. ಅಲ್ಲದೆ ನಮಗೆ ಕನಿಷ್ಠ ಸೌಕರ್ಯಗಳನ್ನು ನೀಡಿ. ಮಾಸ್ಕ್‌, ಸ್ಯಾನಿಟೈಸರ್‌ ಹಾಗೂ ಗ್ಲೌಸ್‌ಗಳನ್ನು ನೀಡಿದರೆ ನಾವೇ ಆಗ ಉತ್ಸಾಹದಿಂದ ಸರ್ವೆ ಮಾಡುತ್ತೇವೆ. ಆದರೆ, ಇದ್ಯಾವುದನ್ನು ಮಾಡದೆ ಏಕಾಏಕಿ ಸರ್ವೆ ಮಾಡಿ ಎಂದರೆ ಏನು ಮಾಡುವುದು ಎಂದು ಪ್ರಶ್ನೆ ಮಾಡುತ್ತಾರೆ.

ಜಿಲ್ಲೆಯಲ್ಲಿ ಮೂರನೇ ಅಲೆಯನ್ನು ತಡೆಯಲು ಮತ್ತು ಮಕ್ಕಳ ಮೇಲೆಯೇ ಪರಿಣಾಮ ಬೀರುತ್ತದೆಯಾದ್ದರಿಂದ ಈಗಲೇ ಮಕ್ಕಳ ಅಂಕಿ-ಸಂಖ್ಯೆಯನ್ನು ಸಂಗ್ರಹಿಸಿ, ಇದಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರನ್ನು ನಿಯೋಜನೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ. 

ಶಿಕ್ಷಕರನ್ನು ನಿಯೋಜನೆ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಅದಕ್ಕೂ ಮುಂಚೆ ಅವರನ್ನು ಕೋವಿಡ್‌ ವಾರಿಯರ್ಸ್‌ ಎಂದು ಘೋಷಣೆ ಮಾಡಿ. ಅವರಿಗೆ ಮುಂಜಾಗ್ರತಾ ಕ್ರಮಕ್ಕಾಗಿ ಸೌಲಭ್ಯಗಳನ್ನು ನೀಡಿ. ಆಗ ನಾವೇ ಸರ್ವೆ ಮಾಡುತ್ತೇವೆ. ಅಷ್ಟಕ್ಕೂ ಈಗಾಗಲೇ ಮಕ್ಕಳ ಮಾಹಿತಿ ಇದ್ದೇ ಇದೆ. ಈಗ ಯಾಕೆ ಸರ್ವೆ ಮಾಡಬೇಕು. ಮುಂದೂಡುವಂತೆ ಮನವಿಯನ್ನು ಸಲ್ಲಿಸಿದ್ದೇವೆ ಎಂದು ಕೊಪ್ಪಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್‌ ತಿಳಿಸಿದ್ದಾರೆ. 
 

click me!