ಸಕ್ಕರೆ ಕಾರ್ಖಾನೆಗಳ ಎದುರು ಸರ್ಕಾರವೇ ವೇಬ್ರಿಜ್ ನಿರ್ಮಿಸಲಿ: ಶ್ರೀಮಂತ ಪಾಟೀಲ

By Kannadaprabha NewsFirst Published Dec 15, 2023, 12:00 AM IST
Highlights

2003ರಲ್ಲಿ ಕಬ್ಬು ಬೆಳೆಗಾರರ ಸಂಘದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಮೋಹನರಾವ್ ಶಹಾರಿಗೆ ಮನವಿ ನೀಡಿ ತೂಕದ ಯಂತ್ರ ಸ್ಥಾಪಿಸಿ, ಅದಕ್ಕೆ ತಗಲುವ ವೆಚ್ಚ ನಾನು ಭರಿಸುತ್ತೇನೆ ಎಂದು ಆಗ್ರಹಿಸಿದ್ದೆ. ಆದರೆ, ಇಲ್ಲಿಯವರೆಗೂ ಅದು ಕಾರ್ಯ ರೂಪಕ್ಕೆ ಬರಲಿಲ್ಲ. 2005ರಲ್ಲಿ ಅಂದಿನ ಸಕ್ಕರೆ ಸಚಿವ ಅಮರೇಗೌಡ ಬೈಯ್ಯಾಪುರ ಅವರಿಗೆ ಮನವಿ ಮಾಡಿದ್ದೆ. ಪರಿಣಾಮ ಜಿಲ್ಲೆಯ ಕೆಲ ಭಾಗಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ, ಅವು ಪರಿಣಾಮಕಾರಿ ಕಾರ್ಯನಿರ್ವಹಿಸಿಲ್ಲ: ಶ್ರೀಮಂತ ಪಾಟೀಲ 

ಕಾಗವಾಡ(ಡಿ.15): ರಾಜ್ಯದಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಸರ್ಕಾರವೇ ತೂಕದ ಯಂತ್ರಗಳನ್ನು ಅಳವಡಿಸಿ, ನಿರ್ವಹಿಸಬೇಕು ಎಂದು ಮಾಜಿ ಸಚಿವ ಹಾಗೂ ಅಥಣಿ ಶುಗರ್ಸ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಆಗ್ರಹಿಸಿದರು.

ಗುರುವಾರ ತಾಲೂಕಿನ ಕೆಂಪವಾಡ ಗ್ರಾಮದ ತಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸುಮಾರು 78 ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಸರ್ಕಾರದಿಂದ ಅಧಿಕೃತ ತೂಕದ ಯಂತ್ರ(ವೇಬ್ರಿಜ್)ಗಳನ್ನು ಅಳವಡಿಸಿದಲ್ಲಿ ಮಾತ್ರ ರೈತರಿಗೆ ಕಬ್ಬಿನ ತೂಕದಲ್ಲಾಗುವ ಮೋಸ ತಡೆಯಲು ಸಾಧ್ಯ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸದ ಬಗ್ಗೆ ಚರ್ಚೆಗೆ ಬಂದಿದೆ. ಆದರೆ, ಇಂದಿನವರೆಗೂ ಪರಿಹಾರ ಸಿಕ್ಕಿಲ್ಲ. ರೈತರಿಗೆ ಆಗುತ್ತಿರುವ ಮೋಸ ತಡೆಯಲು ನನ್ನ ಸಕ್ಕರೆ ಕಾರ್ಖಾನೆ ಪ್ರಾರಂಭಕ್ಕೂ ಮುನ್ನದಿಂದಲೂ ಹೋರಾಡುತ್ತಿದ್ದೇನೆ ಎಂದು ಹೇಳಿದ ಅವರು, 2001 ರಿಂದ ಇಲ್ಲಿಯವರೆಗೆ ಮಾಡಿದ ಹೋರಾಟದ ದಾಖಲೆ ಬಿಡುಗಡೆ ಮಾಡಿದರು.

Latest Videos

BELAGAVI SESSION: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು?: ಸದನದಲ್ಲಿ ಗದ್ದಲ

2003ರಲ್ಲಿ ಕಬ್ಬು ಬೆಳೆಗಾರರ ಸಂಘದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಮೋಹನರಾವ್ ಶಹಾರಿಗೆ ಮನವಿ ನೀಡಿ ತೂಕದ ಯಂತ್ರ ಸ್ಥಾಪಿಸಿ, ಅದಕ್ಕೆ ತಗಲುವ ವೆಚ್ಚ ನಾನು ಭರಿಸುತ್ತೇನೆ ಎಂದು ಆಗ್ರಹಿಸಿದ್ದೆ. ಆದರೆ, ಇಲ್ಲಿಯವರೆಗೂ ಅದು ಕಾರ್ಯ ರೂಪಕ್ಕೆ ಬರಲಿಲ್ಲ. 2005ರಲ್ಲಿ ಅಂದಿನ ಸಕ್ಕರೆ ಸಚಿವ ಅಮರೇಗೌಡ ಬೈಯ್ಯಾಪುರ ಅವರಿಗೆ ಮನವಿ ಮಾಡಿದ್ದೆ. ಪರಿಣಾಮ ಜಿಲ್ಲೆಯ ಕೆಲ ಭಾಗಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ, ಅವು ಪರಿಣಾಮಕಾರಿ ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದರು.

2009ರಲ್ಲಿ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ಹಾಕಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿದ್ದೆ. ಆದರೆ, ಇದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಆದರೂ ತೂಕದಲ್ಲಾಗುತ್ತಿರುವ ಮೋಸ ತಡೆಯಲು ಕ್ರಮ ಕೈಕೊಳ್ಳಬೇಕು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ಕೊಟ್ಟಿತ್ತು ಎಂದರು.

ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ ರೈತರಿಗೆ ಆಗುತ್ತಿರುವ ಮೋಸ ತಪ್ಪಿಸಲು ಜಿಲ್ಲೆಯ ಅನೇಕ ಪ್ರಮುಖ ಸ್ಥಳಗಳಲ್ಲಿ ತೂಕದ ಯಂತ್ರಗಳನ್ನು ಸ್ಥಾಪಿಸಿದರು. ಆದರೆ, ಇಲ್ಲಿ ತೂಕ ಮಾಡಿಸುವ ಕೊಂಡು ವಾಹನಗಳಿಗೆ ಸಕ್ಕರೆ ಕಾರ್ಖಾನೆಗಳು ಪ್ರವೇಶ ನಿರಾಕರಿಸಿದವು. ಇದರ ಪರಿಣಾಮ ಈ ತೂಕದ ಯಂತ್ರಗಳು ಅನೇಕ ವರ್ಷಗಳಿಂದ ನಿರುಪಯುಕ್ತವಾಗಿವೆ. 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಹೇಳಿದ್ದೇವು. ಅವರು ಸಹ ತಕ್ಷಣ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಚುನಾವಣೆ ಬಂದಿದ್ದರಿಂದ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗಲಿಲ್ಲ ಎಂದರು.

ಕಬ್ಬು ಬೆಳೆಗಾರರ ಸಂಘದ ಮುಖಂಡ ದಾದಾಗೌಡ ಪಾಟೀಲ ಮಾತನಾಡಿ, ಕಬ್ಬಿನ ತೂಕದಲ್ಲಿ ಮೋಸ ತಡೆಯುವ ಸಂಬಂಧ ರಾಜ್ಯದಲ್ಲಿ ಹೋರಾಟ ಮಾಡಿದವರು ಯಾರಾದರು ಇದ್ದರೆ ಅದು ಮಾಜಿ ಸಚಿವ ಶ್ರೀಮಂತ ಪಾಟೀಲ ಮಾತ್ರ. ಅವರು ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಹೋರಾಟ ಮಾಡಿರುವುದು ವಿಶೇಷ. ಇವರು ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿ ರಾಜಕಾರಣಕ್ಕೆ ಬಂದಿದ್ದಾರೆ ಹೊರತು ರಾಜಕಾರಣಕ್ಕೆ ಬಂದು ಸಕ್ಕರೆ ಕಾರ್ಖಾನೆ ಕಟ್ಟಿದವರಲ್ಲ ಎಂದರು.

click me!