ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿರುವ ಬಡಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ಭಾಗ್ಯ ಒದಗಿ ಬಂದಿದೆ.
ರವಿ ಕಾಂಬಳೆ
ಹುಕ್ಕೇರಿ(ಡಿ.08): ಅಂತು ಇಂತೂ ಆದ್ಯತಾ ಪಡಿತರ ಚೀಟಿ(ಬಿಪಿಎಲ್)ಗಳ ವಿತರಣೆಗೆ ಇದೀಗ ಕಾಲ ಕೂಡಿ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿರುವ ಬಡಕುಟುಂಬಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವ ಭಾಗ್ಯ ಒದಗಿ ಬಂದಿದೆ.
ಎಲ್ಲ ವರ್ಗದ ಕುಟುಂಬಗಳಿಗೆ ಆಹಾರ ಭದ್ರತೆ ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಆಸರೆ ಎನಿಸಿರುವ ಆದ್ಯತಾ ಪಡಿತರ ಚೀಟಿ(ಬಿಪಿಎಲ್)ಗಳನ್ನು ಪಾರದರ್ಶಕವಾಗಿ, ಸಲ್ಲಿಕೆಯಾಗಿರುವ ಅರ್ಜಿಗಳ ಹಿರಿತನದ ಆಧಾರದ ಮೇಲೆ ವಿತರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ 2022 ಆ.25ರವರೆಗೂ ಆದ್ಯತಾ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ಬರೋಬ್ಬರಿ 73,772 ಕುಟುಂಬಗಳ ಅರ್ಜಿಗಳಲ್ಲಿ 47911 ವಿಲೇವಾರಿಗೆ ಅರ್ಹವೆಂದು ಗುರುತಿಸಲಾಗಿದೆ. 30861 ಅರ್ಜಿಗಳ ಪರಿಶೀಲನೆ ಬಾಕಿಯಿದ್ದು ಇಲ್ಲಿಯವರೆಗೆ 20151 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
Mysuru ಎಪಿಎಲ್, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆಹಾರ ಧಾನ್ಯ ವಿತರಣೆ
ಸದ್ಯ ಜಿಲ್ಲೆಗೆ ಒಟ್ಟು 10874 ಹೊಸ ಬಿಪಿಎಲ್ ಕಾರ್ಡ್‌ಗಳನ್ನು ಮಂಜೂರು ಮಾಡಲು ಅನುಮತಿ ನೀಡಲಾಗಿದೆ. ತಾಲೂಕುವಾರು ಆಹಾರ ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಿರುವ ಪ್ರಕಾರ ಒಟ್ಟು 9787 ಕಾರ್ಡ್‌ಗಳನ್ನು ವಿತರಿಸಲು ಸೂಚಿಸಲಾಗಿದೆ. ಇನ್ನುಳಿದ 1087 ಪಡಿತರ ಚೀಟಿ ಮಂಜೂರಿಸುವ ಗುರಿಯನ್ನು ಕೇಂದ್ರ ಕಚೇರಿಯವರು ವಿವಿಧ ತುರ್ತು ಕಾರಣಗಳಿಗೆ ಶೇ.10ರಷ್ಟುಕಾಯ್ದಿರಿಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಲಾಗಿದೆ.
ಅರ್ಹರಿಗೆ ಮಾತ್ರ ವಿತರಿಸಿ:
ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗೆ 2017-18 ರಿಂದ 2021-22ನೇ ಸಾಲಿನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದು ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಅರ್ಜಿಗಳ ಹಿರಿತನದ ಆಧಾರದ ಮೇಲೆ ಅಂದರೆ 2017-18 ನೇ ಸಾಲಿನಲ್ಲಿ ಸಲ್ಲಿಕೆ ಅಗಿರುವ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚಿಸಿದೆ. ಪ್ರಥಮ ಆದ್ಯತೆಯಾಗಿ ತೀವ್ರ ಆಹಾರ ಅಭದ್ರತೆಗೆ ಒಳಗಾಗಿರುವ ಕುಟುಂಬಗಳು ಮತ್ತು ಇದುವರೆಗೂ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ಕುಟುಂಬಗಳನ್ನು ಪರಿಗಣಿಸುವಂತೆ ಸೂಚಿಸಿದೆ. ಅಲ್ಲದೇ ಎರಡನೇ ಅದ್ಯತೆಯಾಗಿ ಮೂಲ ಬುಡಕಟ್ಟು, ಅಲೆಮಾರಿ ಕುಟುಂಬಗಳು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗಗಳ ಹಾಗೂ ಕಾಡಿನಲ್ಲಿ ವಾಸ ಮಾಡುವ ಕುಟುಂಬಗಳಿಗೆ ಈ ಪಡಿತರ ಚೀಟಿ ವಿತರಿಸಬೇಕು. ವಿತರಿಸುವ ಹೊಸ ಪಡಿತರ ಚೀಟಿಗಳ ಬಗ್ಗೆ ಇಲಾಖೆ ತಂತ್ರಾಂಶದಲ್ಲಿ ಅಥವಾ ಬೋರ್ಡ್‌ನಲ್ಲಿ ಪ್ರಕಟಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.
ಅಥಣಿ 725
ಬೈಲಹೊಂಗಲ 308
ಬೆಳಗಾವಿ(ನಗರ) 987
ಬೆಳಗಾವಿ(ಗ್ರಾ) 1454
ಚಿಕ್ಕೋಡಿ 555
ಗೋಕಾಕ 1130
ಹುಕ್ಕೇರಿ 777
ಖಾನಾಪುರ 417
ರಾಮದುರ್ಗ 389
ರಾಯಭಾಗ 1015
ಸವದತ್ತಿ 654
ಕಿತ್ತೂರ 185
ಮೂಡಲಗಿ 354
ನಿಪ್ಪಾಣಿ 428
ಕಾಗವಾಡ 408
ಒಟ್ಟು 9787
ಬೆಳಗಾವಿ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಆದ್ಯತಾ ಪಡಿತರ ಚೀಟಿಗಳ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ತಾಲೂಕು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೆ ಅನರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆಯಾಗದಂತೆ ನೋಡಿಕೊಳ್ಳಲಾಗುವುದು ಅಂತ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.