ಕರ್ನಾಟಕ ರಾಜ್ಯದಲ್ಲಿ 2019ರಲ್ಲಿ ಸಂಭವಿಸಿದ ಮಳೆ ಪ್ರವಾಹದಿಂದ ಮನೆಯನ್ನು ಕಳೆದುಕೊಂಡವರಿಗೆ ಈವರೆಗೂ ಸರ್ಕಾರದಿಂದ ಮನೆ ಹಾಗೂ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.15): ರಾಜ್ಯದಲ್ಲಿ 2019ರ ಮಹಾಮಳೆ ಮಲೆನಾಡಿಗರ ಬಹುತೇಕ ಜನರ ಬದುಕನ್ನೇ ಅಲ್ಲೋಲ-ಕಲ್ಲೋಲವಾಗಿಸಿತ್ತು. ಪ್ರವಾಹ ಬೆನ್ನಟ್ಟಿದ್ದಾಗ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟು ಓಡಿ ಬಾರದೇ ಬೇರೇನೂ ಉಳಿದಿರಲಿಲ್ಲ. ಜನ ಉಟ್ಟ ಬಟ್ಟೆಯಲ್ಲೇ ಓಡಿಬರುವಾಗ ಬದುಕು ಬಾಳಿದ್ದ ಮನೆಗಳು ಕಣ್ಣೆದುರೇ ಕೊಚ್ಚಿ ಹೋಗಿದ್ದವು. ಮಳೆಯಿಂದ ಬೀದಿಗೆ ಬಂದಿದ್ದ ನಿರಾಶ್ರಿತರಿಗೆ ಸರ್ಕಾರ ಬದುಕು ಕಟ್ಟಿಕೊಡುವ ಜವಾಬ್ದಾರಿ ಹೊತ್ತಿತ್ತು. ಕೆಲವರಿಗೆ ಮನೆ ಕಟ್ಟಿ ಕೊಡಲು ಜಾಗವನ್ನ ನೀಡಿತ್ತಾದರೂ ಈವರೆಗೆ ಅಲ್ಲಿ ವಾಸ ಮಾಡ್ತಿರೋ ಜನರಿಗೆ ಮೂಲಸೌಕರ್ಯವನ್ನೇ ನೀಡಿಲ್ಲ.
undefined
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿರೋ ಆಶ್ರಯ ಬಡಾವಣೆಗೆ ಹೋದ್ರೆ ಕುಗ್ರಾಮಕ್ಕಿಂತ ಕಡೆಯಾದ ಅನುಭವವಾಗುತ್ತೆ.ಪಾಳುಬಿದ್ದಂತಿರೋ ಮನೆಗಳು. ಕುಡಿಯೋಕೆ ನೀರೂ ಇಲ್ಲ. ನೀರನ್ನ ಹೊತ್ತು ತರುತ್ತಿರೋ ವೃದ್ದೆ. ನಮ್ ಹಣೆಬರಹ ಅಂತ ಕಂಗಾಲಾಗಿರೋ ಸಂತ್ರಸ್ಥರು. ಇದು ಯಾವ್ದೋ ಕುಗ್ರಾಮವಲ್ಲ. ಪ್ರವಾಹದಿಂದ ನಿರ್ಗತಿಕರಾದ ಜನರಿಗೆ ಸರ್ಕಾರ ಮನೆ ಕಟ್ಟಿಕೊಳ್ಳಲು ಕೊಟ್ಟಿರುವ ಜಾಗ ಇಂದಿನ ದುಸ್ಥಿತಿ ಕಂಡುಬರುತ್ತದೆ.
VIJAYAPURA: ಸ್ಕೂಟಿಗಾಗಿ ಯುವತಿಯ ಕುತ್ತಿಗೆ ಕೊಯ್ದ ಹಂತಕರು
2019ರಲ್ಲಿ ಮನೆಯನ್ನ ಕಳೆದುಕೊಂಡ ಮಧುಗುಂಡಿ, ದುರ್ಗದಹಳ್ಳಿ, ಬಿದರುತಳ, ಸುಂಕಸಾಲೆ ಗ್ರಾಮದ 40 ಸಂತ್ರಸ್ಥರಿಗೆ ಈ ಬಡಾವಣೆಯಲ್ಲಿ ಸರ್ಕಾರ ನಿವೇಶನ ನೀಡಿದೆ. 5 ಲಕ್ಷ ರೂಪಾಯಿ ಕೊಟ್ಟು ಮನೆ ಕಟ್ಟಿಕೊಳ್ಳಲು ನೆರವಾಗಿದೆ. ಅದೇನೋ ಸರಿ. ಆದ್ರೆ, ಮನೆ ಕಟ್ಟಿಕೊಳ್ಳಲು 5 ಲಕ್ಷ ಸಾಲದಿದ್ರು ಹೇಗೋ ಸಾಲ-ಸೋಲ ಮಾಡಿ ಸಂತ್ರಸ್ಥರು ಮನೆ ಕಟ್ಟಿ ಕೊಂಡಿದ್ದಾರೆ. ಆದ್ರೆ, ಮನೆ ಕಟ್ಟಿಕೊಂಡರೂ ಅಲ್ಲಿ ನೆಮ್ಮದಿಯಾಗಿ ವಾಸ ಮಾಡಲು ಆಗುತ್ತಿಲ್ಲ. ಯಾಕಂದ್ರೆ, ನೀರಿನ ಸೌಲಭ್ಯವಿಲ್ಲ, ಚರಂಡಿ ವ್ಯವಸ್ಥೆಯೂ ಇಲ್ಲ. ಯಾವುದೇ ಮೂಲ ಸೌಕರ್ಯವಿಲ್ಲದೇ ಮನೆ ಕಟ್ಟಿಕೊಂಡಿಡೋ ಜನ ನಿತ್ಯ ಪರದಾಡುವಂತಾಗಿದೆ.
ದಾನಿಗಳ ನೆರೆವಿನಿಂದ ವಿದ್ಯುತ್ ಸೌಲಭ್ಯ : ಇಲ್ಲಿನ ಜನರ ಪರಿಸ್ಥಿತಿಯನ್ನು ಅರಿತ ಸಮಾಜ ಸೇವಕ ವಿಜಯ್ ಕುಮಾರ್ ನೇತೃತ್ವದಲ್ಲಿ ಸ್ನೇಹಿತರ ಬಳಗ ತಮ್ಮ ಸ್ವಂತ ಹಣದಲ್ಲಿ ಬಡಾವಣೆಗೆ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಇನ್ನು ಉಳಿದಂತೆ ಇಲ್ಲಿ ಕುಡಿಯೋಕು ನೀರಿಲ್ಲ. ಸ್ನಾನಕ್ಕೂ ನೀರಿಲ್ಲ,ಅಡಿಗೆ ಮಾಡಿದ ಪಾತ್ರೆ ತೊಳೆಯೋಕು ನೀರಿಲ್ಲ. ಹೀಗಾದ್ರೆ ನಾವು ಹೇಗೆ ಬದುಕೋದು ಅಂತ ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ. ಬದುಕುವ ಅನಿವಾರ್ಯತೆ ಜನ ದೂರದ ಪ್ರದೇಶಗಳಿಂದ ನೀರನ್ನ ಕೊಡದಲ್ಲಿ ಹೊತ್ತು ತರುತ್ತಿದ್ದಾರೆ. ಇಲ್ಲಿ ಮನೆ ಕಟ್ಟಿಕೊಂಡಿರುವ ಬಹುತೇಕರು ಅಂದೇ ದುಡಿದು ಅಂದೇ ತಿನ್ನುವ ಜನ. ಒಂದು ದಿನ ಕೆಲಸಕ್ಕೆ ಹೋಗಲಿಲ್ಲ ಅಂದ್ರೆ ಇವರ ಜೀವನ ನಡೆಯಲ್ಲ. ಇಂತಹ ಸಂಕಷ್ಟದ ಜೀವನದ ನಡುವೆಯೂ ಪ್ರತಿದಿನ ಯಾವುದೇ ಮೂಲ ಸೌಕರ್ಯವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಗ್ಗಿಸಿದ ಚಿತ್ರದುರ್ಗ ಪೊಲೀಸರು: ಸಿಸಿಟಿವಿ ಪ್ರಯೋಗ ಯಶಸ್ವಿ
ಕೂಡಲೇ ಇಲ್ಲಿಗೆ ಮೂಲಭೂತ ಸೌಲಭ್ಯ ಕಲ್ಪಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಒಟ್ಟಾರೆ, ತಮ್ಮ ಪರಿಸ್ಥಿತಿ ಬಗ್ಗೆ ಜನ ಸಂಬಂಧಪಟ್ಟವರ ಗಮನಕ್ಕೆ ತಂದ್ರು ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದಾರೆ ಅಂತ ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ. ಪ್ರಕೃತಿಯ ಮುನಿಸಿಂದ ನಮ್ಮ ಜೀವನವೇ ಮೂರಬಟ್ಟೆಯಾಗಿದೆ. ಕೊನೆಪಕ್ಷ ಇಲ್ಲಾದ್ರು ನೆಮ್ಮದಿ ಜೀವನ ಮಾಡಬಹುದು ಅಂದ್ರೆ ಅದೂ ಸಾಧ್ಯವಾಗುತ್ತಿಲ್ಲವೆಂದು ಸಂತ್ರಸ್ಥರು ಅಸಹಾಯಕತೆ ತೋಡಿಕೊಂಡಿದ್ದಾರೆ. ಈ ಬಡಾವಣೆ ನಿವಾಸಿಗಳ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿರೋದಂತು ಸತ್ಯ. ಇನ್ನಾದ್ರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮೂಲಭೂತ ಸೌಲಭ್ಯ ಒದಗಿಸುತ್ತಾರಾ ಕಾದುನೋಡ್ಬೇಕು.