ಅಪರೂಪದ ಮತ್ತು ಭಾರಿ ಸಮಸ್ಯೆಗಳಲ್ಲಿ ಬೆನ್ನು ಮೂಳೆ ಸ್ನಾಯು ಕ್ಷೀಣತೆಯೂ ಒಂದು, ಇದರಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ಒದಗಿಸುವ ಮೂಲಕ ಪರಿವರ್ತಕ ಆರೋಗ್ಯ ಚಿಕಿತ್ಸಾ ವಿಧಾನವನ್ನು ಹಾಗೂ ಉಚಿತ ಔಷಧವನ್ನು ವಿತರಿಸುವ ಮೂಲಕ ಸಮಾಜ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದು ಸ್ವಾಗತಾರ್ಹ.
ಬೆಂಗಳೂರು (ನ.14): ಅಪರೂಪದ ಮತ್ತು ಭಾರಿ ಸಮಸ್ಯೆಗಳಲ್ಲಿ ಬೆನ್ನು ಮೂಳೆ ಸ್ನಾಯು ಕ್ಷೀಣತೆಯೂ ಒಂದು, ಇದರಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ಒದಗಿಸುವ ಮೂಲಕ ಪರಿವರ್ತಕ ಆರೋಗ್ಯ ಚಿಕಿತ್ಸಾ ವಿಧಾನವನ್ನು ಹಾಗೂ ಉಚಿತ ಔಷಧವನ್ನು ವಿತರಿಸುವ ಮೂಲಕ ಸಮಾಜ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದು ಸ್ವಾಗತಾರ್ಹ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಕೇರ್ ಅಂಡ್ ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಟ್ರಸ್ಟ್ ಆಯೋಜಿಸಿದ್ದ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವವರಿಗೆ ಉಚಿತ ಔಷಧ ನೀಡುವ ವಿಶೇಷ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಸಚಿವರು ಮಾತನಾಡಿದರು.
ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಂಥ ಅಪರೂಪದ ಹಾಗೂ ಭಾರಿ ಅಪಾಯ ತಂದೊಡ್ಡುವ ರೋಗಗಳನ್ನು ನಿಯಂತ್ರಿಸುವುದಕ್ಕೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ. ಈ ರೀತಿಯ ಚಿಕಿತ್ಸಾ ವ್ಯವಸ್ಥೆಗಳು ಅಗಾಧವಾದ ಪ್ರಭಾವವನ್ನು ಬೀರುತ್ತವೆ. ಪ್ರಸವಪೂರ್ವ ರೋಗನಿರ್ಣಯ, ಆರಂಭಿಕ ರೋಗನಿರ್ಣಯಕ್ಕೆ ನಾವು ಈಗ ಹೆಚ್ಚು ಗಮನಹರಿಸಬೇಕಾಗಿದೆ. ಚಿಕಿತ್ಸೆ, ಮತ್ತು ಸಮಗ್ರ ಬೆಂಬಲ ವ್ಯವಸ್ಥೆಗಳು ಭರವಸೆಯನ್ನು ನೀಡುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಅಪರೂಪದ ಅನುವಂಶಿಕ ಕಾಯಿಲೆಗೆ ಔಷಧಿಗಳು ದೊರೆಯುವಂತೆ ಮಾಡುವುದು.
ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ನಮ್ಮ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ಅಪರೂಪದ ಕಾಯಿಲೆಗಳ ರೋಗಿಗಳಿಗೆ ಸರ್ಕಾರ ಸದಾ ಬೆಂಬಲ ನೀಡುತ್ತಿದೆ, ಹೆಚ್ಚುವರಿಯಾಗಿ ಒಟ್ಟು ಸುಮಾರು 75 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಅಪರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ವಿಶೇಷ ನಿಧಿಯನ್ನು ಆರಂಭಿಸಲಾಗಿದೆ. ಅಪರೂಪದ ಕಾಯಿಲೆಗಳಿಗಾಗಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಿದ್ದೇವೆ (COERD). ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಇದು ಆರಂಭಿಸಲಾಗಿದ್ದು, ಇದು ದೇಶದ ಮೊದಲ ಕೇಂದ್ರವಾಗಿದೆ ಎಂದು ಪಾಟೀಲರು ವಿವರಿಸಿದರು. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪಾಲುದಾರಿಕೆಯಲ್ಲಿ ಉಚಿತ ಚಿಕಿತ್ಸೆ ಒದಗಿಸಲು ಹೆಚ್ಚು ಆದ್ಯತೆ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಬೆನ್ನುಮೂಳೆ ಸ್ನಾಯು ಕ್ಷೀಣತೆಗೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ.
ಹಳ್ಳಿಯಲ್ಲಿ ನಾವು ಅಡ್ವೆಂಚರ್ ಹೀರೋಗಳು: ಬಾಲ್ಯದ ಕತೆ ಹಂಚಿಕೊಂಡ ಡಾಲಿ ಧನಂಜಯ್
ಆರೋಗ್ಯ ಕ್ಷೇತ್ರದಲ್ಲಿಯೇ ಇದೊಂದು ಮೈಲಿಗಲ್ಲಾಗಿದೆ ಎಂದು ಸಚಿವರು ತಿಳಿಸಿದರು. ನಮ್ಮ ಸರ್ಕಾರ ಸರ್ವರ ಆರೋಗ್ಯ ರಕ್ಷಣೆಗೆ ಸದಾ ಬದ್ಧವಾಗಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿಯೂ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸ್ವಸ್ಥ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಭವಿಷ್ಯದಲ್ಲಿಯೂ ಹಲವು ಯೋಜನೆಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಮತ್ತು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ಸಂಜಯ್ ಉಪಸ್ಥಿತರಿದ್ದರು.