ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಿದ ಸರ್ಕಾರ: ನಂದಿಬೆಟ್ಟ, ದೇವರಾಯನದುರ್ಗಕ್ಕೆ ಪ್ರವೇಶ ನಿಷೇಧ

By Sathish Kumar KHFirst Published Dec 28, 2023, 6:05 PM IST
Highlights

ಬೆಂಗಳೂರಿನ ನೆರೆಹೊರೆ ಪ್ರವಾಸಿ ತಾಣಗಳಾದ ಜಿಲ್ಲೆಯ ನಂದಿ ಬೆಟ್ಟ, ದೇವರಾಯನದುರ್ಗ, ನಾಮದಚಿಲುಮೆ, ಬಸದಿ ಬೆಟ್ಟಕ್ಕೆ ಡಿ.31ರ ರಾತ್ರಿಯಿಂದ ಜ.1ರವರೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಬೆಂಗಳೂರು/ ಚಿಕ್ಕಬಳ್ಳಾಪುರ/ ತುಮಕೂರು (ಡಿ.28): ಹೊಸ ವರ್ಷಾಚರಣೆಗೆ ಈಗಾಗಲೇ ಜನರು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಲವರು ಸಿಂಪಲ್‌ ಆಗಿ ಅಚರಣೆ ಮಾಡಿದರೆ, ಬಹುತೇಕರು ಮೋಜು-ಮಸ್ತಿ ಮೂಲಕ ಹೊಸ ವರ್ಷ ಸ್ವಾಗತಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಹತ್ತಿರದ ಸ್ಥಳಗಳಿಗೆ ಒನ್‌ಡೇ ಟ್ರಿಪ್‌ಗೂ ಯೋಜನೆ ರೂಪಿಸಿರುತ್ತಾರೆ. ಇಂಥವರಿಗೆ ಸರ್ಕಾರ ಈಗ ಶಾಕ್‌ ನೀಡಿದೆ. ಬೆಂಗಳೂರಿನ ನೆರೆಹೊರೆ ಪ್ರವಾಸಿ ತಾಣಗಳಾದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಹಾಗೂ ತುಮಕೂರು ಜಿಲ್ಲೆಯ ದೇವರಾಯನದುರ್ಗ, ನಾಮದಚಿಲುಮೆ, ಬಸದಿ ಬೆಟ್ಟ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಡಿ.31ರ ರಾತ್ರಿಯಿಂದ ಜ.1ರವರೆಗೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಚಿಕ್ಕಬಳ್ಳಾಪುರದ ಐತಿಹಾಸಿಕ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಹೊಸವರ್ಷಾಚರಣೆಗೆ ಜಿಲ್ಲಾಡಳಿತದಿಂದ ಬ್ರೇಕ್‌ ಹಾಕಲಾಗಿದೆ. ಇಲ್ಲಿ ಡಿಸೆಂಬರ್ 31 ರ ಸಂಜೆಯಿಂದ ಜನವರಿ 1ರ ಬೆಳಿಗ್ಗೆ  6 ಗಂಟೆವರೆಗೂ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ‌ ಅವಧಿಯಲ್ಲಿ ಬೆಟ್ಟದ ಮೇಲೆ‌ ಕೊಠಡಿಗಳು ಕಾಯ್ದಿರುಸುವಿಕೆಯನ್ನೂ  ನಿರ್ಬಂಧಿಸಲಾಗಿದೆ. ನಂದಿಬೆಟ್ಟದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಷೇಧಿಸಿ ‌ಜಿಲ್ಲಾಧಿಕಾರಿ‌ ಪಿ.ಎನ್. ರವೀಂದ್ರ ಆದೇಶ ಹೊರಡಿಸಿದ್ದಾರೆ.

Latest Videos

ಕೋವಿಡ್‌ ಮಾರ್ಗಸೂಚಿ: ಪಾಸಿಟಿವ್‌ ಉದ್ಯೋಗಿಗಳಿಗೆ 7 ದಿನ ವೇತನ ಸಹಿತ ರಜೆ: ನೆಗಡಿ, ಜ್ವರವಿರುವ ಮಗುವಿಗೆ ಶಾಲೆ ರಜೆ

ತುಮಕೂರಿನ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೂ ಕೂಡ ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ದೇವರಾಯನದುರ್ಗ, ನಾಮದಚಿಲುಮೆ, ಬಸದಿ ಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ ಹೊರಡಿಸಿದ್ದಾರೆ. ಡಿ.31ರ ಬೆಳಗ್ಗೆ 8 ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಹೊಸ ವರ್ಷಾಚರಣೆ ವೇಳೆ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಜನರು ಸೇರಲಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿವೆ. ಇನ್ನು ಬೆಟ್ಟದ ರಸ್ತೆಗಳಲ್ಲಿ ತಿರುವುಗಳು ಹೆಚ್ಚಾಗಿದ್ದು ಅಪಘಾತಗಳು ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಇನ್ನು ಕಾನೂನು ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳೊದಾಗಿ ಎಚ್ಚರಿಕೆ ನೀಡಲಾಗಿದೆ.

ಸ್ನೇಹಿತನ ಜೊತೆ ಚಾರಣಕ್ಕೆ ಬಂದು ನಾಪತ್ತೆ ಪ್ರಕರಣ; 4 ದಿನಗಳ ಬಳಿಕ ಶವವಾಗಿ ಪತ್ತೆ!

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಭದ್ರತೆ: ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಮಾತನಾಡಿ, ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಆದರೆ, ಈಗಾಗಲೇ ಕೋವಿಡ್‌ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ನಗರದಾದ್ಯಂತ‌ ಕಟ್ಟೆಚ್ಚರ ವಹಿಸಲಾಗಿದೆ. ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಕೂಡ ಮಾಡಲಾಗ್ತಿದೆ. ಡಿ.31 ರಂದು ಪೊಲೀಸ್ ಭದ್ರತೆ ಕೈಗೊಳ್ಳಲಿದ್ದಾರೆ. ಎಂಜಿ ರಸ್ತೆ, ಬ್ರಿಗೆಡ್ ರಸ್ತೆ, ಕಬ್ಬನ್ ಪಾರ್ಕ್ ನಲ್ಲಿ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. 400 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಸ್ಕೈ ಸೆಂಟ್ರಿ ಕೂಡ ಭದ್ರತೆಯಲ್ಲಿ ಇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

click me!