ಐದಾರು ತಿಂಗಳ ಬಳಿಕ ಗಡ್ಡಧಾರಿ ವ್ಯಕ್ತಿ ಸಿಎಂ: ಗೊರವಯ್ಯ ಹೇಳಿದ್ದಿಷ್ಟು

By Kannadaprabha News  |  First Published Aug 5, 2021, 8:25 AM IST

* ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪಜ್ಜ
*  ಡಿಕೆಶಿಗೂ ಹೀಗೆ ಸುಳ್ಳು ಹೇಳಿ ಬೆಳ್ಳಿ ಹೆಲಿಕ್ಯಾಪ್ಟರ್‌ ತರಿಸಿಕೊಂಡಿದ್ದ ಒಡೆಯರ 
*  ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿರುವ ವೆಂಕಪ್ಪಯ್ಯನವರ ಹೇಳಿಕೆ ಯಾರೂ ನಂಬಬಾರದು


ಹಾವೇರಿ(ಆ.05): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರವಧಿ ಪೂರ್ಣಗೊಳಿಸುವುದಿಲ್ಲ ಎಂದು ಮೈಲಾರದ ಮೈಲಾರಲಿಂಗೇಶ್ವರ ದೇವರ ಪ್ರಧಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ ಹೇಳಿರುವ ಭವಿಷ್ಯ ಶುದ್ಧ ಸುಳ್ಳು. ಪ್ರಚಾರದ ಗೀಳಿಗಾಗಿ ಅವರು ಸುಳ್ಳು ಹೇಳಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಮೈಲಾರದ ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪಜ್ಜ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಐದಾರು ತಿಂಗಳ ಬಳಿಕ ಗಡ್ಡಧಾರಿಯೊಬ್ಬರು ಸಿಎಂ ಆಗಲಿದ್ದಾರೆ ಎಂದು ಒಡೆಯರ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿ ಅಧಿಕಾರವಧಿ ಪೂರ್ಣಗೊಳಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿರುವ ವೆಂಕಪ್ಪಯ್ಯನವರ ಹೇಳಿಕೆಯನ್ನು ಯಾರೂ ನಂಬಬಾರದು ಎಂದರು.

Latest Videos

undefined

ಮೈಲಾರದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕವನ್ನು ವರ್ಷಕ್ಕೊಮ್ಮೆ ನವರು ನುಡಿಯುವುದು ಹಿಂದಿನಿಂದಿಲೂ ಬಂದಿರುವ ಪದ್ಧತಿ. 11 ದಿನ ಕಠಿಣ ಉಪವಾಸ ಮಾಡಿ ಭರತ ಹುಣ್ಣಿಮೆ ಸಂದರ್ಭದಲ್ಲಿ ರಥಸಪ್ತಮಿ ದಿನ ಮೈಲಾರಲಿಂಗೇಶ್ವರನ ಬಿಲ್ಲನ್ನು ಏರಿ ಮೈಲಾರ ಲಿಂಗೇಶ್ವರ ದೇವರು ಕೊಟ್ಟವಾಣಿಯನ್ನು ಕಾರ್ಣಿಕವಾಗಿ ನಾನೇ ನುಡಿಯುತ್ತೇನೆ. ನಾನು ಏನು ಕಾರ್ಣಿಕ ಹೇಳಿದ್ದೇನೆ ಎಂಬುದು ನನಗೆ ಗೊತ್ತಿರುವುದಿಲ್ಲ. ಅರ್ಧ ಗಂಟೆ ಬಳಿಕ ವಿಷಯ ತಿಳಿದುಕೊಳ್ಳುತ್ತೇನೆ. ಹೀಗಿರುವಾಗ ವೆಂಕಪ್ಪಯ್ಯ ಒಡೆಯರ ಅವರು ನಾನು ನುಡಿಯನ್ನು ಹೇಳಿಕೊಟ್ಟಹಾಗೆ ಗೊರಯ್ಯ ನುಡಿಯುತ್ತಾರೆ ಎಂದು ಹೇಳಿರುವುದೂ ಸುಳ್ಳು ಎಂದು ಹೇಳಿದರು.

ಮಾರ್ಚ್‌ನಲ್ಲಿ ​ ಗಡ್ಡಧಾರಿ ವ್ಯಕ್ತಿ ಸಿಎಂ-ಮೈಲಾರಲಿಂಗೇಶ್ವರನ ಭವಿಷ್ಯ: ಯಾರು ಆ ಗಡ್ಡಧಾರಿ?

ಪ್ರತಿವರ್ಷ ನಡೆಯುವ ಕಾರ್ಣಿಕಕ್ಕೆ ಸಾಕಷ್ಟು ಮಹತ್ವವಿದೆ. ನಾಡಿನ ಜನತೆ ಕಾರ್ಣಿಕದ ಆಧಾರದ ಮೇಲೆ ಮಳೆ, ಬೆಳೆ, ರಾಜಕೀಯ ಲೆಕ್ಕಾಚಾರ ನಡೆಸುತ್ತಾರೆ. ಆದರೆ, ಇತ್ತೀಚೆಗೆ ವೆಂಕಪ್ಪಯ್ಯ ಒಡೆಯರ ಈ ಕಾರ್ಣಿಕಕ್ಕೆ ಹಾಗೂ ಮೈಲಾರಲಿಂಗೇಶ್ವರ ಕ್ಷೇತ್ರಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕಾರಣ ಮುಜರಾಯಿ ಇಲಾಖೆಯವರು ವೆಂಕಪ್ಪಯ್ಯನವರು ನೀಡುವ ಹೇಳಿಕೆಗಳು ಅಧಿಕೃತ ಅಲ್ಲ ಎಂಬ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ದೇವಸ್ಥಾನದ ಬಾಬುದಾರ ನಿಂಗಪ್ಪ ಜಜ್ಜೂರಿ ಮಾತನಾಡಿ, ಪ್ರಚಾರಕ್ಕೋಸ್ಕರ ಸುಳ್ಳು ಹೇಳಿಕೆ ನೀಡುತ್ತಿರುವ ವೆಂಕಪ್ಪಯ್ಯನವರಿಗೆ ಭವಿಷ್ಯ ಹೇಳುವ ಹುಚ್ಚು ಇದ್ದರೆ ಅರ್ಚಕ ಹುದ್ದೆ ಬಿಟ್ಟು ಬೇರೆ ಕಡೆ ಬೋರ್ಡ್‌ ಹಾಕಿಕೊಂಡು ಭವಿಷ್ಯ ಹೇಳಲಿ. ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೂ ಹೀಗೆ ಸುಳ್ಳು ಹೇಳಿ ಬೆಳ್ಳಿ ಹೆಲಿಕ್ಯಾಪ್ಟರ್‌ ತರಿಸಿಕೊಂಡಿದ್ದ ಒಡೆಯರ ಅದನ್ನು ತಮ್ಮ ಮನೆಗೆ ಒಯ್ದಿದ್ದರು. ಆಗ ಭಕ್ತರು ಪ್ರಶ್ನಿಸಿದ ಬಳಿಕ ಈಗ ತಂದು ದೇವಸ್ಥಾನದಲ್ಲಿ ಇಟ್ಟಿದ್ದಾರೆ. ಕಾರಣ ಇವರ ಸುಳ್ಳು ಹೇಳಿಕೆಗಳನ್ನು ಮುಜುರಾಯಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಅವರನ್ನು ದೇವಸ್ಥಾನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.
 

click me!