* ಹಾವೇರಿ ಜಿಲ್ಲೆಗೆ ಬಂಪರ್ ರಾಜಕೀಯ ಪ್ರಾತಿನಿಧ್ಯ, ಸಿಎಂ ಹುದ್ದೆ ಬಳಿಕ ಈಗ ಮಂತ್ರಿ,
* ಬೊಮ್ಮಾಯಿ ಸಂಪುಟದಲ್ಲಿ ಕೌರವ ಖ್ಯಾತಿಯ ಬಿ.ಸಿ. ಪಾಟೀಲ್‌ಗೆ ಸ್ಥಾನ
* ಅನರ್ಹ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದ ಪಾಟೀಲ್
ಹಾವೇರಿ(ಆ.05): ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮುಖ್ಯಮಂತ್ರಿ ಸ್ಥಾನದೊಂದಿಗೆ ಈಗ ಸಚಿವ ಸಂಪುಟದಲ್ಲೂ ಜಿಲ್ಲೆಗೆ ಬಂಪರ್ ರಾಜಕೀಯ ಪ್ರಾತಿನಿಧ್ಯ ಸಿಕ್ಕಂತಾಗಿದೆ.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಬಿ.ಸಿ. ಪಾಟೀಲ ಅವರು ಈಗ ಜಿಲ್ಲೆಯವರೇ ಆದ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪೊಲೀಸ್ ಇನ್ಸಪೆಕ್ಟರ್ ಆಗಿ, ಬಳಿಕ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಬಿ.ಸಿ. ಪಾಟೀಲ ಅವರು ಎರಡು ವರ್ಷಗಳ ಅವಧಿಯಲ್ಲಿ ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಜು. 26ರಂದು ಜಿಲ್ಲೆಯ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ನಡೆದಿತ್ತು. ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರಿಗೆ ಮಂತ್ರಿ ಪಟ್ಟಕೈತಪ್ಪಿದ್ದರೆ, ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭುಗಿಲೆದ್ದ ಅಸಮಾಧಾನ: ಸಿಎಂವಿರುದ್ಧ ಸಂಘ ಪರಿವಾರಕ್ಕೆ ದೂರು ನೀಡಲು ನಿರ್ಧರಿಸಿದ ಶಾಸಕ
2 ವರ್ಷದಲ್ಲಿ 2ನೇ ಬಾರಿಗೆ ಪ್ರಮಾಣ:
2020ರ ಫೆ. 6ರಂದು ಯಡಿಯೂರಪ್ಪ ಸಂಪುಟ ಸೇರಿದ್ದ ಬಿ.ಸಿ. ಪಾಟೀಲ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈಗ ಒಂದೂವರೆ ವರ್ಷದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯಾಗಿ ಸೇರ್ಪಡೆಯಾಗಿದ್ದಾರೆ. ಕೃಷಿ ಸಚಿವರಾಗಿ ಕೋವಿಡ್ ಸಂದರ್ಭದಲ್ಲಿ, ಅತಿವೃಷ್ಟಿವೇಳೆ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದರು. ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮದ ಮೂಲಕ ಗ್ರಾಮ ವಾಸ್ತವ್ಯ ಮಾಡಿ ರೈತರ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿದ್ದರು. ರೈತರಿಂದಲೇ ಬೆಳೆ ವಿಮೆ ಸಮೀಕ್ಷೆ ನಡೆಸುವ ವಿನೂತನ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದರು.
ಅದಕ್ಕೂ ಮುನ್ನ ಬಿ.ಸಿ. ಪಾಟೀಲ ಅವರಿಗೆ ಮಂತ್ರಿ ಪದವಿ ಸುಗಮವಾಗೇನೂ ಸಿಕ್ಕಿರಲಿಲ್ಲ. ಕಾಂಗ್ರೆಸ್‌ನಿಂದ ಗೆದ್ದು ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ, ಸ್ಪೀಕರ್‌ರಿಂದ ಅನರ್ಹತೆ ಶಿಕ್ಷೆಗೊಳಗಾಗಿ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹೀಗೆ ವಿವಿಧ ರೀತಿಯ ಹೋರಾಟ ನಡೆಸಿ ಬಳಿಕ 2019ರ ನವೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಚಿವರಾದರು.
ರಾಜಕೀಯ ಹಾದಿ:
ತಮ್ಮ ಜೀವನಕ್ಕಾಗಿ ಹಿರೇಕೆರೂರು ಕ್ಷೇತ್ರ ಆಯ್ಕೆ ಮಾಡಿಕೊಂಡ ಬಿ.ಸಿ. ಪಾಟೀಲ 2004ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾದರು. 2008ರಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಆಯ್ಕೆಯಾದರು. ದುರಾದೃಷ್ಟಎಂಬಂತೆ 2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಬಿ.ಸಿ. ಪಾಟೀಲ ಪರಾಭವಗೊಂಡರು. 2018ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಿಲ್ಲೆಯಿಂದ ಗೆದ್ದ ಪಕ್ಷದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿದ್ದರಿಂದ ಬಿ.ಸಿ. ಪಾಟೀಲ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದರು. ಆದರೆ, ಒಂದು ವರ್ಷ ಕಳೆದರೂ ಮಂತ್ರಿಯಾಗುವ ಯಾವ ಸಾಧ್ಯತೆಯೂ ಕೈಗೂಡದ್ದರಿಂದ ಬಿಜೆಪಿ ನಾಯಕರ ಸಂಪರ್ಕಕ್ಕೆ ಬಂದರು. 2019ರ ಜುಲೈನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಪಕ್ಷಾಂತರ ನಿಷೇಧ ಕಾಯ್ದೆ ಮೇರೆಗೆ ಅನರ್ಹಗೊಂಡರು. ಅಲ್ಲಿಂದ ಅನರ್ಹ ಶಾಸಕ ಎಂಬ ಹಣೆಪಟ್ಟಿ ಕಟ್ಟಿಕೊಂಡರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು. ಬಳಿಕ ಬಿಜೆಪಿ ಸೇರಿದ್ದ ಅವರು ಉಪಚುನಾವಣೆಯಲ್ಲಿ 29 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ನಿರೀಕ್ಷೆಯಂತೆ ಮಂತ್ರಿ ಸ್ಥಾನ ದೊರೆತಿತ್ತು.
ವೈಯಕ್ತಿಕ ವಿವರ:
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಯಲಿವಾಳ ಗ್ರಾಮದಲ್ಲಿ 1956ರ ನ. 14ರಂದು ಶಿವಮ್ಮ ಮತ್ತು ಚನ್ನಬಸಣ್ಣಗೌಡ ದಂಪತಿಗೆ ಜನಿಸಿದ ಬಿ.ಸಿ. ಪಾಟೀಲ ಪ್ರೌಢ ಶಿಕ್ಷಣದವರೆಗೆ ಸ್ವಗ್ರಾಮದಲ್ಲಿಯೇ ಶಿಕ್ಷಣ ಪೂರೈಸಿ, ದಾವಣಗೆರೆಯಲ್ಲಿ ಪಿಯುಸಿ ಮುಗಿಸಿ, ಪದವಿಯನ್ನು ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಮುಗಿಸಿದರು.
1979ರಲ್ಲಿ ರಾಜ್ಯ ಪೊಲೀಸ್ ಸೇವೆಗೆ ಸೇರಿದ ಅವರು ಪಿಎಸ್‌ಐ ಆಗಿ ಕುರುಗೋಡು, ಕಂಪ್ಲಿ, ಬಳ್ಳಾರಿ, ದಾವಣಗೆರೆ ಇನ್ನಿತರ ನಗರಗಳಲ್ಲಿ ಕಾರ್ಯನಿರ್ವಹಿಸಿದರು. ಬಳಿಕ ಪೊಲೀಸ್ ಇನ್ಸಪೆಕ್ಟರ್ ಆಗಿ ಪದೋನ್ನತಿ ಹೊಂದಿದ ಅವರು, ಬೆಂಗಳೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. 1979ರಿಂದ 2003ರವರೆಗೂ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಬಳಿಕ ಸಿನಿಮಾ ಕ್ಷೇತ್ರದಲ್ಲಿ ಮಿಂಚಿದ ಅವರು, ಹತ್ತಾರು ಸಿನಿಮಾಗಳಲ್ಲಿ ಅಭಿನಯಿಸಿ ನಾಡಿನ ಜನರಿಗೆ ಚಿರಪರಿಚಿತರಾದರು. ಒಟ್ಟು 40 ಚಲನಚಿತ್ರಗಳಲ್ಲಿ ನಟಿಸಿದ ಅವರು, 16 ಸಿನಿಮಾಗಳನ್ನು ನಿರ್ಮಾಣ, ನಿರ್ದೇಶನ ಮಾಡಿದ್ದಾರೆ. ಪತ್ನಿ ಪನಜಾಕ್ಷಿ, ಪುತ್ರಿಯರಾದ ಸೌಮ್ಯ, ಸೃಷ್ಟಿ, ಅಳಿಯ ಅವರೊಂದಿಗೆ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ.
ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಅವರಿಗೆ ನಾನು ಆಭಾರಿಯಾಗಿರುತ್ತೇನೆ. ಪ್ರಧಾನಿ ಮೋದಿ, ಕೇಂದ್ರದ ನಾಯಕರು, ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರ ಸಹಕಾರದಿಂದ, ಕಾರ್ಯಕರ್ತರ ಶ್ರಮದಿಂದ ಎರಡನೇ ಬಾರಿಗೆ ಮಂತ್ರಿಯಾಗಿದ್ದೇನೆ. ಜನರ ನಿರೀಕ್ಷೆ ಮುಟ್ಟುವ ರೀತಿಯಲ್ಲಿ, ಸರ್ಕಾರಕ್ಕೆ ಗೌರವ ಬರುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.