ಗೂಗಲ್ ಮ್ಯಾಪ್ ಹೇಳಿದಲ್ಲಿ ಸ್ಟಾಪ್ ಕೊಟ್ಟಿಲ್ಲ ಅಂತ ಉತ್ತರ ಭಾರತೀಯರ ಕಿರಿಕ್, ಭಾಷಾ ವಿವಾದಕ್ಕೆ ತಿರುಗಿದ ಬಿಎಂಟಿಸಿ ಗಲಾಟೆ!

Published : Sep 08, 2025, 05:16 PM IST
BMTC Vajra bus  dispute rules

ಸಾರಾಂಶ

ಬೆಂಗಳೂರಿನಲ್ಲಿ ಗೂಗಲ್ ಮ್ಯಾಪ್ ತೋರಿಸಿದ ಸ್ಥಳದಲ್ಲಿ ಬಸ್ ನಿಲ್ಲಿಸದ ಕಾರಣ ಪ್ರಯಾಣಿಕರು ಮತ್ತು ಬಿಎಂಟಿಸಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಈ ಘಟನೆ ಭಾಷಾ ವಿವಾದಕ್ಕೂ ತಿರುವು ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಗೂಗಲ್ ಮ್ಯಾಪ್‌ನಲ್ಲಿ ತೋರಿಸಿರುವ ಸ್ಥಳದಲ್ಲಿ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಬಿಎಂಟಿಸಿ ವಾಯುವಜ್ರ ಬಸ್ ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ಬಿರುಸಿನ ವಾಗ್ವಾದ ನಡೆದ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾಷಾ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಮಾಹಿತಿ ಪ್ರಕಾರ, ಇಬ್ಬರು ಉತ್ತರ ಭಾರತೀಯರು ವಾಯುವಜ್ರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಗೂಗಲ್ ಮ್ಯಾಪ್‌ನಲ್ಲಿ ತೋರಿಸಿದ ಸ್ಥಳವೊಂದನ್ನು ಬಸ್ ಸ್ಟಾಪ್ ಎಂದು ಭಾವಿಸಿ, ಅಲ್ಲಿ ಬಸ್ ನಿಲ್ಲಿಸಲು ಒತ್ತಾಯಿಸಿದರು. ಆದರೆ ಡ್ರೈವರ್ ಮತ್ತು ಕಂಡಕ್ಟರ್, “ಇದು ಅಧಿಕೃತ ಬಸ್ ಸ್ಟಾಪ್ ಅಲ್ಲ, ಬಿಎಂಟಿಸಿ ಬಸ್ಸುಗಳು ನಿರ್ದಿಷ್ಟ ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತವೆ” ಎಂದು ಸ್ಪಷ್ಟನೆ ನೀಡಿದರು. ಇದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ತೀವ್ರ ವಾದ-ಪ್ರತಿವಾದ ನಡೆಯಿತು.

ಭಾಷಾ ವಿವಾದಕ್ಕೂ ತಿರುವು

ವಾದವಿವಾದದ ಸಮಯದಲ್ಲಿ “ಕನ್ನಡದಲ್ಲಿ ಮಾತನಾಡಿ” ಎಂದು ಬಸ್ ಸಿಬ್ಬಂದಿ ಹೇಳಿದ ವಿಚಾರವನ್ನು ಪ್ರಯಾಣಿಕರು ಭಾಷಾ ಹಕ್ಕಿನ ಕುರಿತಾಗಿ ವಿವಾದವನ್ನಾಗಿ ತೋರಿಸಲು ಯತ್ನಿಸಿದರು. ಕಂಡಕ್ಟರ್ ಮತ್ತು ಡ್ರೈವರ್ ತಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿರುವ ಪ್ರಯಾಣಿಕರು ತಮ್ಮ ವಿರುದ್ಧ ಅಸಹನೀಯ ವರ್ತನೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.

ವಿಡಿಯೋ ವೈರಲ್ – ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವಾರು ನೆಟ್ಟಿಗರು ಪ್ರಯಾಣಿಕರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಎಂಟಿಸಿ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲಿಸುವುದಿಲ್ಲ, ನಿರ್ದಿಷ್ಟ ನಿಲ್ದಾಣಗಳಲ್ಲೇ ನಿಲ್ಲಿಸಬೇಕು” ಎಂದು ನೆಟ್ಟಿಗರು ಹಾಗೂ ಬಿಎಂಟಿಸಿ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಎಂಟಿಸಿ ಸ್ಪಷ್ಟನೆ

ಬಿಎಂಟಿಸಿ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ವಾಯುವಜ್ರ ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲಿಸುವುದಿಲ್ಲ, ಪ್ರಯಾಣಿಕರ ಸುರಕ್ಷತೆ ಹಾಗೂ ನಿಯಮ ಪಾಲನೆಗಾಗಿ ಮಾತ್ರ ನಿರ್ದಿಷ್ಟ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಗೂಗಲ್ ಮ್ಯಾಪ್ ತೋರಿಸುವ ಸ್ಥಳವನ್ನೇ ಅಧಿಕೃತ ಬಸ್ ಸ್ಟಾಪ್ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಈ ವಾಗ್ವಾದದ ಹಿನ್ನೆಲೆಯಲ್ಲಿ ಇಬ್ಬರು ಉತ್ತರ ಭಾರತೀಯರು ಬಿಎಂಟಿಸಿ ಸಿಬ್ಬಂದಿ ವಿರುದ್ಧ ದೂರು ನೀಡಿದ್ದು, ಮಹದೇವಪುರ ಪೊಲೀಸರು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಲಕ್ಷುರಿ ಮತ್ತು ಎಸಿ ಬಸ್‌ಗಳು ಲಿಮಿಟೆಡ್ ಸ್ಟಾಪ್‌ಗಳನ್ನು ಹೊಂದಿವೆ. ಎಲ್ಲೆಂದರಲ್ಲಿ ಅವರಿಗೆ ನಿಲ್ಲುವ ಅವಕಾಶ ಇಲ್ಲ. ಇದು ಮೂಲದ ನಿಯಮ.

PREV
Read more Articles on
click me!

Recommended Stories

ದಾವಣಗೆರೆ ರಾಟ್‌ವೀಲರ್ ನಾಯಿಗಳ ಡೆಡ್ಲಿ ಅಟ್ಯಾಕ್; 50ಕ್ಕೂ ಹೆಚ್ಚು ಕಡೆ ಕಚ್ಚಿಸಿಕೊಂಡ ಮಹಿಳೆ ದುರ್ಮರಣ
ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ