ಬೆಳಿಗ್ಗೆ 11 ಗಂಟೆಯ ಬಳಿಕ ದಿನಸಿ, ಹಾಲು, ತರಕಾರಿ, ಮಾಂಸದ ಅಂಗಡಿಗಳು ಸಹ ಬಂದ್| ನಗರದ ಭಾಗಶಃ ಹೋಟೆಲ್‌ಗಳು ಮುಚ್ಚಿದ್ದವು. ಪಾರ್ಸಲ್ ಕೊಡಲು ಅವಕಾಶವಿತ್ತಾದರೂ ಗ್ರಾಹಕರು ಇಲ್ಲದ ಹಿನ್ನಲೆಯಲ್ಲಿ ಹೋಟೆಲ್‌ಗಳು ವ್ಯಾಪಾರ ವಹಿವಾಟು ನಡೆಸಲಿಲ್ಲ| ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಿದವಾದರೂ ಗ್ರಾಹಕರು ಕಂಡು ಬರಲಿಲ್ಲ|
ಬಳ್ಳಾರಿ(ಜು.06): ಕೊರೋನಾ ವೈರಸ್‌ಗೆ ಅಂಕುಶ ಹಾಕಲು ರಾಜ್ಯಾದ್ಯಂತ ಭಾನುವಾರ ಲಾಕ್‌ಡೌನ್ ಮಾಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ನಗರ ಸೇರಿದಂತೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ಗೆ ಸಹಕರಿಸಿ ಯಶಸ್ವಿಗೊಳಿಸಿದ್ದಾರೆ. ನಗರದಲ್ಲಿ ಬೆಳಗ್ಗೆ ಮಾತ್ರ ಅಗತ್ಯ ವಸ್ತುಗಳ ಖರೀದಿ ಕಂಡು ಬಂತು.
ಸಾರ್ವಜನಿಕರ ಓಡಾಟ ಸಂಪೂರ್ಣ ನಿಂತು ಹೋಗಿದ್ದರಿಂದ 11 ಗಂಟೆಯ ಬಳಿಕ ದಿನಸಿ, ಹಾಲು, ತರಕಾರಿ, ಮಾಂಸದ ಅಂಗಡಿಗಳು ಸಹ ಬಂದ್ ಆದವು. ನಗರದ ಭಾಗಶಃ ಹೋಟೆಲ್‌ಗಳು ಮುಚ್ಚಿದ್ದವು. ಪಾರ್ಸಲ್ ಕೊಡಲು ಅವಕಾಶವಿತ್ತಾದರೂ ಗ್ರಾಹಕರು ಇಲ್ಲದ ಹಿನ್ನಲೆಯಲ್ಲಿ ಹೋಟೆಲ್‌ಗಳು ವ್ಯಾಪಾರ ವಹಿವಾಟು ನಡೆಸಲಿಲ್ಲ. ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸಿದವಾದರೂ ಗ್ರಾಹಕರು ಕಂಡು ಬರಲಿಲ್ಲ. ಲಾಕ್‌ಡೌನ್ ಯಶಸ್ವಿಗೊಳಿಸಲು ಶನಿವಾರ ರಾತ್ರಿಯಿಂದಲೇ ಪೊಲೀಸ್ ನಿಯೋಜನೆ ಕಂಡು ಬಂತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯಾ ಏರಿಯಾ ಜವಾಬ್ದಾರಿ ನೀಡಲಾಗಿತ್ತು.
ಬಳ್ಳಾರಿಯಲ್ಲಿ ಮತ್ತೆ ಶತಕ ಬಾರಿಸಿದ ಕೊರೋನಾ: ಒಂದೇ ದಿನದಲ್ಲಿ 104 ಪ್ರಕರಣ ಪತ್ತೆ
ವಾಹನಗಳು ರಸ್ತೆಗಿಳಿಯಲಿಲ್ಲ:
ಲಾಕ್‌ಡೌನ್‌ನಿಂದಾಗಿ ಬಸ್ ಸೇರಿದಂತೆ ಇತರೆ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಆಟೋಗಳು ರಸ್ತೆಗಿಳಿಯಲಿಲ್ಲ. ಅಲ್ಲಲ್ಲಿ ಕಾರ್‌ಗಳ ಓಡಾಟವಿತ್ತು. ಆಸ್ಪತ್ರೆ, ಔಷಧಿ ಖರೀದಿ ಮತ್ತಿತರ ಕೆಲಸಕ್ಕಾಗಿ ಕೆಲವರು ಬೈಕ್‌ನಲ್ಲಿ ಓಡಾಡುತ್ತಿರುವುದು ಕಂಡು ಬಂತು. ಲಾಕ್‌ಡೌನ್ ವೀಕ್ಷಿಸಲು ಬೈಕ್‌ಗಳೊಂದಿಗೆ ವಿನಾಕಾರಣ ಹೊರಗಡೆ ಬರುತ್ತಿದ್ದ ಯುವಕರನ್ನು ತಡೆದು ನಿಲ್ಲಿಸುತ್ತಿದ್ದ ಪೊಲೀಸರು, ‘ದಂಡ’ಪ್ರಯೋಗದ ಮೂಲಕ ಲಾಕ್‌ಡೌನ್‌ನ ರುಚಿ ತೋರಿಸುತ್ತಿರುವ ದೃಶ್ಯಗಳು ಕಂಡು ಬಂದವು. ನಗರದ ಪ್ರಮುಖ ವೃತ್ತವಾದ ಗಡಗಿಚನ್ನಪ್ಪ ವೃತ್ತದ ನಾಲ್ಕು ರಸ್ತೆಗಳಲ್ಲಿ ಜನರು ಓಡಾಡದಂತೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನಿ ನಿಯೋಜಿಸಲಾಗಿತ್ತು. ಸದಾ ಜನರಿಂದ ಗಿಜಿಗುಡುತ್ತಿದ್ದ ನಗರದ ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣ ಬೀದಿ, ಕೆ.ಸಿ. ರಸ್ತೆ, ಟ್ಯಾಂಕ್‌ಬಂಡ್ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಹೊರಗಡೆಯಿಂದ ಕೈ ಮುಗಿದರು:
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಹಿಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಸೇರಿದಂತೆ ಖಾಸಗಿ ದೇವಾಲಯಗಳು ಸಹ ಬಂದ್ ಆಗಿದ್ದವು. ದೇವಾಲಯಗಳ ಬಂದ್ ಹಿನ್ನಲೆಯಲ್ಲಿ ಭಕ್ತರು ಹೊರಗಡೆಯಿಂದಲೇ ದರ್ಶನ ಪಡೆದರು. ಗುರುಪೌರ್ಣಮಿ ಹಿನ್ನೆಲೆಯಲ್ಲಿ ನಗರದ ಸಾಯಿಬಾಬಾ ದೇವಸ್ಥಾನ ಬಳಿ ಬೆಳಿಗ್ಗೆ ಭಕ್ತರು ಕಂಡು ಬಂದರು. ದೇವಸ್ಥಾನ ಬಾಗಿಲು ಮುಚ್ಚಿದ್ದರಿಂದ ಹೊರಗಡೆಯಿಂದ ಕೈ ಮುಗಿದು ತೆರಳಿದರು.
ಜಿಲ್ಲೆಯಲ್ಲಿ ಲಾಕ್‌ಡೌನ್ ಆಗಿದ್ದರಿಂದ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿದಂತೆ ಕಂಡು ಬರಲಿಲ್ಲ. ಲಾಕ್‌ಡೌನ್‌ಗೆ ಮಾನಸಿಕವಾಗಿ ಸಿದ್ಧವಾಗಿದ್ದ ಜನರು, ಭಾನುವಾರ ಮನೆಯಿಂದ ಹೊರಗಡೆ ಬರದೆ ಜನ ಸುರಕ್ಷತೆಯ ಹಿನ್ನಲೆಯಲ್ಲಿ ಸರ್ಕಾರ ಕೈಗೊಂಡಿರುವ ನಿಲುವಿಗೆ ಸ್ಪಂದಿಸಿದರು.
ಎಸ್ಪಿ ಸೈಕಲ್ ಸವಾರಿ
ಲಾಕ್‌ಡೌನ್‌ನಲ್ಲಿ ನಿಯೋಜನೆ ಮಾಡಿರುವ ಬಂದೋಬಸ್‌್ತ ವೀಕ್ಷಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಸೈಕಲ್ ಮೇಲೆ ಸವಾರಿ ನಡೆಸಿ, ನಗರ ಹಾಗೂ ಗ್ರಾಮೀಣ ಭಾಗದ ಚೆಕ್‌ಪೋಸ್ಟ್‌ಗಳನ್ನು ವೀಕ್ಷಿಸಿದರು. ಬೆಳಗ್ಗೆಯೇ ಸೈಕಲ್ ಏರಿದ ಎಸ್ಪಿ 55 ಕಿಮೀವರೆಗೆ ಸೈಕಲ್ ಮೇಲೆ ಓಡಾಡಿ ಖುದ್ದು ಬಂದೋಬಸ್‌್ತ ವೀಕ್ಷಣೆ ಮಾಡಿದರು. ನಗರ ಸೇರಿದಂತೆ ಮೋಕಾ, ಆಂಧ್ರಪ್ರದೇಶದ ಗಡಿ ಭಾಗದಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳನ್ನು ವೀಕ್ಷಣೆ ಮಾಡಿದ ಎಸ್ಪಿ ಸಿ.ಕೆ. ಬಾಬಾ, ದಾರಿ ಮಧ್ಯೆದಲ್ಲಿ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮಾತನಾಡಿಸಿ, ಅವರ ಕಷ್ಟ-ಸುಖಗಳನ್ನು ಆಲಿಸಿದರು. ಇದೇ ವೇಳೆ ಮಾಸ್ಕ್ ಇಲ್ಲದೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮಾಸ್ಕ್‌ಗಳನ್ನು ನೀಡಿ, ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಈ ಕುರಿತು ಕನ್ನಡಪ್ರಭ ಜತೆ ಮಾತನಾಡಿದ ಎಸ್ಪಿ ಸಿ.ಕೆ. ಬಾಬಾ, ಪೊಲೀಸ್ ಸಿಬ್ಬಂದಿಗೆ ಗೊತ್ತಾಗದಂತೆ ಅವರ ಕಾರ್ಯವೈಖರಿಗೆ ವೀಕ್ಷಿಸಬೇಕು ಎಂಬ ಕಾರಣಕ್ಕೆ ಸೈಕಲ್ ಮೇಲೆ ಹೋಗಿದ್ದೆ. ಶಿವಪುರ, ಮೋಕಾದಿಂದ ಆಂಧ್ರ ಗಡಿವರೆಗೆ ಸೈಕಲ್ ಸವಾರಿ ಮಾಡಿದೆ. ದಾರಿ ಮಧ್ಯೆದಲ್ಲಿ ರೈತ ಕಾರ್ಮಿಕರನ್ನು ಮಾತನಾಡಿಸಿದೆ. ಈ ರೀತಿಯಾಗಿ ಆಗಾಗ್ಗೆ ನಾನು ಹೋಗುತ್ತಿರುತ್ತೇನೆ ಎಂದರು.