* ಕಾಫಿನಾಡಿನಲ್ಲಿ 11 ಸಾವಿರ ಹೆಕ್ಟೇರ್ ಗೂ ಅಧಿಕ ಭೂ ಒತ್ತುವರಿ
* ಗುತ್ತಿಗೆ ಆಧಾರದಲ್ಲಿ ರೈತರಿಗೆ ಜಮೀನು ನೀಡಲು ಮುಂದಾದ ಕಂದಾಯ ಇಲಾಖೆ ?
* ಭೂ ಒತ್ತುವರಿದಾರಲ್ಲಿ ಹರ್ಷ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.25) : ಇಡೀ ರಾಜ್ಯದಲ್ಲೇ ಒತ್ತುವರಿ ಭೂತ ಹೆಚ್ಚಾಗಿ ಕಾಡ್ತಿರೋದೇ ಕಾಫಿನಾಡನ್ನ. ಹಲವು ದಶಕಗಳಿಂದ ಕಂದಾಯ ಭೂಮಿಯನ್ನ ಆಸೆ ಹಾಗೂ ಬದುಕಿಗಾಗಿ ಸಾವಿರಾರು ಎಕರೆಯನ್ನ ಒತ್ತುವಾರಿ ಮಾಡಿದ್ದಾರೆ. ಅಕ್ರಮ ಒತ್ತುವರಿಯನ್ನ ಒಕ್ಕಲೆಬ್ಬಿಸೋ ಪ್ರಯತ್ನ ನಡೆಯಿತಾದ್ರು ಅಲ್ಲೊಂದು-ಇಲ್ಲೊಂದು ಬಿಟ್ರೆ ಸಮರ್ಪಕವಾಗಿ ಜಾರಿಯಾಗಿಲ್ಲ. ಹಾಗಾಗಿ, ಸರ್ಕಾರವೇ ಒತ್ತುವರಿದಾರರಿಗೆ ಗುಡ್ ನ್ಯೂಸ್ ಕೊಡಲು ಮುಂದಾಗಿದ್ದು, ದಶಕಗಳಿಂದ ಆತಂಕದಲ್ಲೇ ಬದುಕುತ್ತಿದ್ದ ಒತ್ತುವರಿದಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಫಿನಾಡಿನಲ್ಲಿ 11 ಸಾವಿರ ಹೆಕ್ಟೇರ್ ಗೂ ಅಧಿಕ ಭೂ ಒತ್ತುವರಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಣ್ಣಿಗೆ ಕಂಡಷ್ಟು ಬೆಟ್ಟಗುಡ್ಡ. ದೃಷ್ಠಿ ಮುಗಿಯದ ಹಸಿರ ಕಾನನ ಇಲ್ಲಿದೆ. ಇಂತಹಾ ಪ್ರಾಕೃತಿಕ ಸೊಬಗಿನ ಕಾಫಿನಾಡಲ್ಲಿ ಸುಮಾರು 11 ಸಾವಿರ ಹೆಕ್ಟೇರ್ಗೂ ಅಧಿಕ ಒತ್ತುವರಿಯಾಗಿದೆ ಎನ್ನುವ ದಾಖಲೆಗಳಿವೆ. ಅದರಲ್ಲಿ ಬದುಕಿಗಾಗಿ ಮಾಡಿದ ಒತ್ತುವರಿಯಷ್ಟೆ ಭೂಮಿ ಆಸೆಗೆ ಮಾಡಿದ್ದೂ ಇದೆ. ಹಾಗಾಗಿ, ಅರಣ್ಯ ಹಾಗೂ ಕಂದಾಯ ಇಲಾಖೆ ಹಲವು ಬಾರಿ ಒತ್ತುವರಿ ತೆರವಿಗೆ ಮುಂದಾದರೂ ಕೂಡ ಸಾಧ್ಯವಾಗಲಿಲ್ಲ. ಆದರೂ, ಒತ್ತುವರಿದಾರರು ನಾಳೆ-ನಾಡಿದ್ದು ನಮ್ಮ ಬದುಕು ಏನಾಗುತ್ತೋ ಎಂದು ಆತಂಕದಲ್ಲೆ ಬದುಕುತ್ತಿದ್ದರು. ಅದರಲ್ಲೂ ಕಾಫಿ ಬೆಳೆಯುವ ಮಲೆನಾಡು ಭಾಗದಲ್ಲೇ ಒತ್ತುವರಿ ಒಂದು ದೊಡ್ಡ ಸಮಸ್ಯೆಯಾಗಿತ್ತು.
ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು: ಶೃಂಗೇರಿಯಲ್ಲಿ ಬೊಮ್ಮಾಯಿಗೆ ಸ್ವಾಗತಿಸಿದ ಪರಿ
ಮೂರು ಜಿಲ್ಲೆಯ ಬೆಳೆಗಾರರಿಗೆ ಅನುಕೂಲ
ಭೂ ಒತ್ತುವರಿ ಹಾಸನ, ಮಡಿಕೇರಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀಹೆಚ್ಚು ಇಲ್ಲಿನ ಬದುಕಿಗಾಗಿ ಭೂಮಿಯನ್ನು ಒತ್ತುವರಿ ಜೀವನ ನಡೆಸುತ್ತಿದ್ದಾರೆ. ಕಂದಾಯ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.ಇದನ್ನ ಮನಗೊಂಡಿರುವ ಸರ್ಕಾರ ಒಂದು ನಿರ್ಧಾರಕ್ಕೆ ಬಂದಿದೆ. ಅದಕ್ಕಾಗಿ ಕಂದಾಯ ಇಲಾಖೆ ಒತ್ತುವರಿಗೊಂದು ಫುಲ್ಸ್ಟಾಪ್ ಇಡೋದಕ್ಕೆ ಮುಂದಾಗಿರೋದು ಒತ್ತುವರಿದಾರರ ನಿರಾಳತೆಗೆ ಕಾರಣವಾಗಿದೆ.
ಗುತ್ತಿಗೆ ಆಧಾರದಲ್ಲಿ ರೈತರಿಗೆ ಜಮೀನು ನೀಡಲು ಮುಂದಾದ ಕಂದಾಯ ಇಲಾಖೆ ?
ರೈತರು ಒತ್ತುವರಿ ಮಾಡಿರುವ ಭೂಮಿಯನ್ನು ರೈತರಿಗೆ ಗುತ್ತಿಗೆ ಆಧಾರ ಮೇಲೆ ನೀಡಲು ಕಂದಾಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ. 10 ಎಕರೆಯೊಳಗಿನ ಜಮೀನನ್ನ ಒತ್ತುವರಿ ಮಾಡಿರುವ ರೈತರಿಗೆ ಅದೇ ಜಮೀನನ್ನ ಗುತ್ತಿಗೆ ಆಧಾರದಲ್ಲಿ ನೀಡುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎನ್ನಲಾಗಿದ್ದು, ಒತ್ತುವರಿದಾರರು ನಿಟ್ಟುಸಿರು ಬಿಡುವಂತಾಗಿದೆ. ಕೇರಳ ಮಾದರಿಯಲ್ಲೇ ಎಕರೆಗೆ ವಾರ್ಷಿಕ 3 ಸಾವಿರ ವಿಧಿಸಲು ಮುಂದಾಗಿರೋದು ಸರ್ಕಾರದ ಬೊಕ್ಕಸಕ್ಕೂ ಲಾಭ ತರಲಿದೆ ಎಂದು ಹೇಳಲಾಗ್ತಿದೆ. ಸರ್ಕಾರದ ನಿರ್ಧಾರಕ್ಕೆ ಜಿಲ್ಲೆಯ ಶಾಸಕರಾದ ಸಿ.ಟಿ ರವಿ, ಕುಮಾರಸ್ವಾಮಿ , ಟಿ ಡಿ ರಾಜೇಗೌಡ ಸೇರಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಸ್ವಾಗತ ಮಾಡಿದ್ದಾರೆ. ಇನ್ನು ಬೆಳೆಗಾರಾದ ವಿಜಯ್ ಕುಮಾರ್ , ಕಲ್ಮಕಿ ಉಮೇಶ್ ಸಂತಸವನ್ನು ಹೊರಹಾಕಿದ್ದಾರೆ. ಸರ್ಕಾರ ನಿರ್ಧಾರದಿಂದ ಸಾವಿರಾರು ಬೆಳೆಗಾರರಿಗೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಏಪ್ರಿಲ್ 29ರಂದು ಕಂದಾಯ ಸಚಿವರಿಂದ ಘೋಷಣೆ
ದಶಕಗಳಿಂದ ಒತ್ತುವರಿ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತರು ಆತಂಕದಿಂದಲೇ ಜೀವಿಸುತ್ತಿದ್ದರು. ಆದ್ರೀಗ, ಸರ್ಕಾರದ ಈ ನಿರ್ಧಾರ ರೈತರಿಗೆ ಕೊಂಚ ರಿಲೀಫ್ ತಂದಿದೆ. ಏಪ್ರಿಲ್ 29ಕ್ಕೆ ಚಿಕ್ಕಮಗಳೂರಿಗೆ ಆಗಮಿಸುವ ಕಂದಾಯ ಸಚಿವರು ಅದೇ ದಿನ ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆಯನ್ನ ಘೋಷಣೆ ಮಾಡುವುದು ಬಹುತೇಕ ಖಚಿತವಾಗಿದ್ದು, ಸರ್ಕಾರ ರೈತರಿಗೆ ಭೂಮಿಯನ್ನ ಲೀಸ್ ಕೊಡೋದು ಪಕ್ಕಾ ಆದಂತಾಗಿದೆ. ಕೊಡಲಿ ಅನ್ನೋದು ಬಹುತೇಕ ಜನರ ಅಭಿಪ್ರಾಯವಾಗಿದೆ.
ಕಂದಾಯ ಭೂಮಿ ಮಾತ್ರ ಲೀಸ್
ಚಿಕ್ಕಮಗಳೂರು 45 ಸಾವಿರ, ಹಾಸನ 25 ಸಾವಿರ ಹೆಕ್ಟೇರ್ ಹಾಗೂ ಕೊಡಗಿನಲ್ಲೂ ಕೂಡ ಕಂದಾಯ ಭೂಮಿಯನ್ನ ರೈತರು ಒತ್ತುವರಿ ಮಾಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ರಿಲೀಫ್ ಸಿಕ್ಕಿದಂತಾಗಿದೆ. ಆದರೆ, ಈ ಆಫರ್ ಅರಣ್ಯವನ್ನ ಒತ್ತುವರಿ ಮಾಡಿದವರಿಗೆ ಇಲ್ಲ. ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವವರ ಜಮೀನನ್ನ ತೆರವು ಮಾಡುವುದು ಅನಿವಾರ್ಯವಾಗಿದೆ. ಕಂದಾಯ ಭೂಮಿಯನ್ನ ಒತ್ತುವರಿ ಮಾಡಿದವರಿಗೆ ಲೀಸ್ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಗುತ್ತಿಗೆ ಭೂಮಿ ಬಗ್ಗೆ ಜನನಾಯಕರು ಹೇಳಿಕೆ ಕೊಡ್ತಿದ್ದಾರೆ. ಆದರೆ, ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿ ಈ ಬಗ್ಗೆ ಮಾಹಿತಿ ಬಿಟ್ಟುಕೊಡ್ತಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಿರಬಹುದು. ಸದ್ಯಕ್ಕೆ ನಮ್ಮ ಗಮನಕ್ಕೆ ಬಂದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಒತ್ತುವರಿ ಭೂಮಿ ಗುತ್ತಿಗೆಗೆ ನೀಡಿಕೆಗೆ ವಿರೋಧ
ಸರ್ಕಾರ ಒತ್ತುವರಿ ಭೂಮಿಯ್ನು ಗುತ್ತಿಗೆ ಆಧಾರಮೇಲೆ ನೀಡುವ ನಿರ್ಧಾರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದೆ. ಜನಶಕ್ತಿ ಸಂಘಟನೆ ಮುಖಂಡ ಕೆ ಎಲ್ ಅಶೋಕ್ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಒತ್ತುವರಿ ಭೂಮಿಯನ್ನು ಗುತ್ತಿಗೆಗೆ ನೀಡುವುದು ಎಂದರೆ ಭೂಮಿಯ ಖಾಸಗೀಕರಣಕ್ಕೆ ಮುನ್ನುಡಿ ಹಾಕಿದಂತೆ ಎನ್ನುವ ಅಭಿಪ್ರಾಯ ಹೊರಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.