
ಬೀದರ್, (ಜುಲೈ.06): ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಅಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಆದ್ರೆ, ಕಲ್ಯಾಣ ಕರ್ನಾಟಕದಲ್ಲಿ ಮಳೆ ನಿರೀಕ್ಷಿಸಿದಷ್ಟು ಮಳೆಯಾಗಿಲ್ಲ. ಇದರಿಂದ ಬಿತ್ತಿದ ಸೂರ್ಯಕಾಂತಿ, ಜೋಳ ಒಣಗುತ್ತಿವೆ.
ಅದರಲ್ಲೂ ಗಡಿ ಜಿಲ್ಲೆ ಬೀದರ್ ನಲ್ಲಿ ಮಳೆಯೇ ಇಲ್ಲ. ಮುಂಗಾರು ಮಳೆ ಪ್ರಾರಂಭದಲ್ಲಿ ಕೈಕೊಟ್ಟ ಕೊಟ್ಟರೇ ರೈತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಭಜನೆ, ಸಪ್ತಾಹ, ಕಪ್ಪೆಗಳ ಮದುವೆ ಮಾಡುವುದು ಸಹಜ. ಆದರೆ ಈ ವರುಣಮ ಕೃಪೆಗಾಗಿ ಗಂಡು-ಹೆಣ್ಣು ಗೊಂಬೆ ಜೋಡಿ ಮಾಡಿ ಮದುವೆ ಮಾಡಿದಾರೆ,..
ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ, ರಕ್ಷಣೆ ಪರಿಹಾರ ಕಾರ್ಯಚರಣೆಗೆ SDRF ತಂಡ ಸಜ್ಜು
ಹೌದು... ಬೀದರ್ ಜಿಲ್ಲೆಯ ಚಿಟ್ಟಗುಪ್ಪಾ ತಾಲ್ಲೂಕಿನ ಮೀನಕೇರಾ ಗ್ರಾಮದಲ್ಲಿ ಉತ್ತಮ ಮಳೆಯಾಗಲೆಂದು ಗ್ರಾಮದ ಜನರು ಸೇರಿ ವಿಜೃಂಭಣೆಯಿಂದ ಗೊಂಬೆಗಳ ಮದುವೆ ಮಾಡಿದ್ದಾರೆ. ಈ ಗ್ರಾಮದಲ್ಲಿ ಮಳೆಗಾಗಿ ಮದುವೆಯ ಸಡಗರವಿತ್ತು, ಮದುವೆಯ ಸಂದರ್ಭದಲ್ಲಿ ಮಾಡಬೇಕಾದ ಎಲ್ಲ ಕೈಂಕರ್ಯಗಳು ನಡೆಸಲಾಯಿತು. ಗ್ರಾಮದ ಎಲ್ಲರೂ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರು.
ವರನ ಕಡೆಯಿಂದ ಸ್ಥಳೀಯ ನಿವಾಸಿ ಒಂದು ಓಣಿಯ ನಿವಾಸಿಗಳು ವಧು ಕಡೆಯಿಂದ ಇನ್ನೊಂದು ಓಣಿಯವರು ಬಂದರು. ಬಳಿಕ ಎರಡು ಕುಟುಂಬಗಳ ನಡುವೆ ವಿವಾಹ ಕುರಿತು ಮಾತುಕತೆ ನಡೆದು, ಎರಡು ಮನೆಗಳಲ್ಲಿ ಮದುವೆ ಸಮಾರಂಭಕ್ಕೆ ಆರಂಭಗೊಂಡಿತು.
ರಾಮಲಿಂಗಶ್ವರ ದೇವಸ್ಥಾನದ ಮುಂದೆ ಹಾಲಕಂಬ ನೆಟ್ಟರು. ಮಹಿಳೆಯರು ಮನೆ ಮನೆಗೆ ಹೋಗಿ ಓಣಿ ನಿವಾಸಿಗಳನ್ನು ಮದುವೆಗೆ ಆಹ್ವಾನಿಸಿದ್ದರು. ಸಮಾರಂಭಕ್ಕೆ ಬಂದಿದ್ದ ಮುತ್ತೈದೆಯರಿಗೆ ಕಂಕಣ ಕಟ್ಟಲಾಯಿತು. ನೆರೆದಿದ್ದವರು ಪರಸ್ಪರ ಅರಿಶಿಣ ಹಚ್ಚಿಕೊಂಡರು.
ಸಂಪ್ರದಾಯ ಪ್ರಕಾರ ವಧು-ವರರಿಗೆ ಸುರಗಿ ನೀರು ಹಾಕಿದರು. ಒಂದೆಡೆ ಹಿರಿಯರು ಜನಪದ ಹಾಡುತ್ತಿದ್ದರೆ, ಮತ್ತೊಂದೆಡೆ ಚಿಕ್ಕ ಮಕ್ಕಳು ಕುಣಿದು ಸಂತೋಷಪಟ್ಟರು. ಹೆಣ್ಣಿನ ಕಡೆಯವರು ವಧು ಗೊಂಬೆಗೆ ಶೃಂಗಾರ ಮಾಡುವುದರಲ್ಲಿ ನಿರತರಾಗಿದ್ದರು. ವರ ಗೊಂಬೆಗೂ ಅಲಂಕಾರ ಮಾಡಲಾಯಿತು. ಸಂಪ್ರದಾಯದಂತೆ ವಧು ಮತ್ತು ವರ ಗೊಂಬೆಗೆ ಬಾಸಿಂಗ ಕಟ್ಟಲಾಯಿತು.
ಗಟ್ಟಿಮೇಳದ ನಡುವೆ ವರ ಗೊಂಬೆಯಿಂದ ವಧು ಗೊಂಬೆಗೆ ತಾಳಿ ಕಟ್ಟಿಸಲಾಯಿತು.
ಸಂಬಂಧಿಕರು ನವ ಜೋಡಿಗೆ ಅಕ್ಕಿಕಾಳು ಹಾಕಿ ಆರ್ಶಿವದಿಸಿದರು. ಬಂದಿದ್ದವರು ಹುಗ್ಗಿ , ಪಲ್ಲೆ, ಅನ್ನ, ಸಾರು, ಹಪ್ಪಳ, ಶೇಂಗಾ ಚಟ್ನಿ, ಸಾಂಬಾರು ಸೇರಿದಂತೆ ವಿವಿಧ ತರಹದ ಅಡುಗೆ ಸವಿದರು. ಬಳಿಕ ವಧುವಿಗೆ ವರನ ಮನೆಗೆ ಕಳುಹಿಸಲು ರಾಮಲಿಂಗಶ್ವೆರ ದೇವಸ್ಥಾನದಿಂದ ಹನುಮಾನ ದೇವಸ್ಥಾನಕ್ಕೆ ತೆರಳಿದಾಗ ಅಲ್ಪಸ್ವಲ್ಪ ಮಳೆಯಾಗಿ ರೈತರಲ್ಲಿ ಹರ್ಷ ಮೂಡಿಸಿತು.
ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಹೈರಾಣಾಗಿದ್ದಾರೆ ಹೀಗಾಗಿ ನಮ್ಮ ಗ್ರಾಮದಲ್ಲಿ ಗೊಂಬೆಗಳ ಮದುವೆ ಹಮ್ಮಿಕೊಳ್ಳಲಾಗಿದೆ. ಈಗಲಾದರೂ ವರುಣ ಕೃಪೆ ತೋರಲಿ’ ಎಂದು ಗ್ರಾಮಸ್ಥ ರಾಚಪ್ಪ ರೋಡ್ಡಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.