ಅದೃಷ್ಟದ ಖರೀದಿಗೆ ಅಡ್ಡಿಯಾದ ಮಹಾಮಾರಿ ಕೊರೋನಾ

By Kannadaprabha NewsFirst Published Apr 27, 2020, 3:02 PM IST
Highlights

ಅಕ್ಷಯ ತೃತೀಯ ದಿನ ಬಾಗಿಲು ತೆರೆಯದ ಒಡವೆ ಅಂಗಡಿಗಳು| ಅಕ್ಷಯ ತೃತೀಯ ದಿನ ಕೋಟ್ಯಂತರ ರುಪಾಯಿ ವಹಿವಾಟು ನಡೆಸುತ್ತಿದ್ದ ಚಿನ್ನದಂಗಡಿಗಳು| ಇಂದಿನ ಪರಿಸ್ಥಿತಿ ಮುಂದೆ ಎದುರಾಗುವ ಆರ್ಥಿಕ ಸಂಕಷ್ಟಕ್ಕೆ ನಿರ್ದಶನ| ಕೊರೋನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಎಲ್ಲ ಚಿನ್ನದ ಅಂಗಡಿಗಳು ಬಂದ್‌|
 

ಚಿಕ್ಕಬಳ್ಳಾಪುರ(ಏ.27):ಪ್ರತಿ ವರ್ಷ ಅಕ್ಷಯ ತೃತೀಯ ದಿನ ಕೋಟ್ಯಂತರ ರುಪಾಯಿ ವಹಿವಾಟು ನಡೆಸುತ್ತಿದ್ದ ಚಿನ್ನದಂಗಡಿಗಳು ಪ್ರಸ್ತುತ ಸಾಲಿನಲ್ಲಿ ಶೂನ್ಯ ವಹಿವಾಟಿಗೆ ಕುಸಿದಿದ್ದು, ಇದು ಚಿನ್ನದ ವ್ಯಾಪಾರಿಗಳಿಗೆ ಮಾತ್ರವಲ್ಲದೇ ಮಹಿಳೆಯರಿಗೂ ತೀವ್ರ ನಿರಾಸೆಯನ್ನು ಮೂಡಿಸಿದೆ.

ಜಿಲ್ಲೆಯ ಆರು ತಾಲೂಕುಗಳಲ್ಲಿ ಸುಮಾರು 120 ಕ್ಕೂ ಹೆಚ್ಚು ಚಿನ್ನದ ಅಂಗಡಿಗಳಿದ್ದು, ಪ್ರತಿ ವರ್ಷ ಈ ಎಲ್ಲ ಅಂಗಡಿಗಳಿಂದ ಅಕ್ಷಯ ತೃತೀಯ ದಿನ ಸುಮಾರು 15 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತಿತ್ತು. ಆದರೆ ಪ್ರಸ್ತುತ ಕೊರೋನ ಭೀತಿಯಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಹೇರಲಾಗಿದ್ದು, ಚಿನ್ನದ ಅಂಗಡಿಗಳನ್ನು ಮುಚ್ಚಲಾಗಿದೆ.

ನಾಲ್ವರ ಮೆಕ್ಕಾ ಪ್ರವಾಸ, ಚಿಕ್ಕಬಳ್ಳಾಪುರದ 16 ಮಂದಿಗೆ ಕೊರೋನಾ ಕಂಟಕ!

ಮಹಿಳೆಯರಿಗೆ ಭಾರಿ ನಿರಾಸೆ

ಇದರಿಂದ ಚಿನ್ನ ಖರೀದಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಅತ್ತ ಚಿನ್ನದ ವ್ಯಾಪಾರಿಗಳಿಗೆ, ಇತ್ತ ಮಹಿಳೆಯರಿಗೆ ತೀವ್ರ ಅಸಮಾಧಾನ ಮೂಡಿಸಿದೆ. ದಿನೇ ದಿನೇ ಚಿನ್ನದ ಬೆಲೆ ಏರುತ್ತಿದ್ದರೂ ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವುದರಿಂದ ಅದೃಷ್ಟ ಒಲಿದು ಬರಲಿದೆ ಎಂಬ ನಂಬಿಕೆ ಮಹಿಳೆಯರಲ್ಲಿದೆ. ಚಿನ್ನ ಖರೀದಿಗಾಗಿ ಅಕ್ಷಯ ತೃತೀಯ ದಿನವೇ ಕಾದು ಕೂರುತ್ತಿದ್ದರು. ಅಲ್ಲದೆ ತಮಗೆ ಇಷ್ಟವಾದ ಆಭರಣವನ್ನು ಮುಂಚೆಯೇ ಮಾಡಿಸಿಟ್ಟು, ಅಕ್ಷಯಾ ತೃತೀಯ ದಿನ ಅದನ್ನು ಮನೆಗೆ ಕೊಂಡೊಯ್ಯುತ್ತಿದ್ದರು.

ಇಂದಿನ ಪರಿಸ್ಥಿತಿ ಮುಂದೆ ಎದುರಾಗುವ ಆರ್ಥಿಕ ಸಂಕಷ್ಟಕ್ಕೆ ನಿರ್ದಶನವಾಗಿದೆ. ಕಳೆದ ವರ್ಷ ಅಕ್ಷಯ ತೃತೀಯ ದಿನ ಒಂದು ಗ್ರಾಂ ಆಭರಣ ಚಿನ್ನ 3,300 ರು. ಇದ್ದರೆ ಪ್ರಸ್ತುತ ಅಕ್ಷಯ ತೃತೀಯ ದಿನ ಒಂದು ಗ್ರಾಂ ಚಿನ್ನ 4,480 ರು. ಇದೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಎಲ್ಲ ಚಿನ್ನದ ಅಂಗಡಿಗಳು ಬಂದ್‌ ಮಾಡಿರುವುದರಿಂದ ಅಕ್ಷಯ ತೃತೀಯ ಮೇಲೂ ಕೊರೋನ ಕರಿನೆರಳು ಮೂಡಿದೆ.
 

click me!