ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ

By Kannadaprabha News  |  First Published Oct 7, 2023, 8:25 AM IST

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ತಡೆಗಟ್ಟಲು ಗ್ರಾಮ ಪಂಚಾಯತಿ ವತಿಯಿಂದ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸಭಾ ನೋಡಲ್‌ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಚ್‌.ಎನ್‌. ದೀಪ ತಿಳಿಸಿದರು.


  ನುಗ್ಗೇಹಳ್ಳಿ : ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಯನ್ನು ತಡೆಗಟ್ಟಲು ಗ್ರಾಮ ಪಂಚಾಯತಿ ವತಿಯಿಂದ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸಭಾ ನೋಡಲ್‌ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಚ್‌.ಎನ್‌. ದೀಪ ತಿಳಿಸಿದರು.

ಗ್ರಾಮ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ವಿಶೇಷ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕಿನ 41 ಗ್ರಾಮ ಪಂಚಾಯತಿಗಳ ಪೈಕಿ ನುಗ್ಗೇಹಳ್ಳಿ ಗ್ರಾಮ ಪಂಚಾಯತಿಗೆ 22 ಮತ್ತು 23ನೇ ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ.

Latest Videos

undefined

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸ್ವಚ್ಛತೆ, ನರೇಗ ಯೋಜನೆಯ ಮೂಲಕ ಹೆಚ್ಚು ಅಭಿವೃದ್ಧಿಗೆ ಆದ್ಯತೆ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಿಟಲ್‌ ಗ್ರಂಥಾಲಯ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಈ ಪ್ರಶಸ್ತಿ ಲಭಿಸಿದ್ದು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿ, ಪಂಚಾಯತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಶೌಚಾಲಯ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮತ್ತು ನರೇಗಾ ಯೋಜನೆಯ ಮೂಲಕ 5 ಲಕ್ಷದ 20 ಸಾವಿರ ಅನುದಾನ ಬಂದಿದ್ದು, ಈ ಶಾಲೆಗಳಲ್ಲಿ ಶೌಚಾಲಯವಿಲ್ಲದೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಅತಿ ತುರ್ತಾಗಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವರಾಮ ಜೆ. ಎ. ಮಾತನಾಡಿ, ಗ್ರಾಮ ಪಂಚಾಯತಿಗೆ ದೊರೆತಿರುವ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಜೊತೆಗೆ ಸುಮಾರು 5 ಲಕ್ಷ ರು. ಅನುದಾನ ದೊರೆತಿದ್ದು ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸ್ವಚ್ಛತೆ ಕಸ ವಿಲೇವಾರಿ ವಾಹನ ಖರೀದಿ ಶಾಲೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಈ ಅನುದಾನವನ್ನು ಬಳಸಬಹುದಾಗಿದೆ ಎಂದರು. ಗ್ರಾಮ ಪಂಚಾಯತಿ ಸದಸ್ಯರು ತೆರಿಗೆ ವಸೂಲಾತಿಗೆ ಹೆಚ್ಚಿನ ಸಹಕಾರ ನೀಡಬೇಕು. ಇದರಿಂದ ಪಂಚಾಯತಿಗೆ ಹೆಚ್ಚು ತೆರಿಗೆ ಸಂಗ್ರವಾಗುತ್ತದೆ ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಬಹುದಾಗಿದೆ ಎಂದರು.

ವಿಶೇಷ ಗ್ರಾಮ ಸಭೆಯಲ್ಲಿ ಗ್ರಾಮದ ಯುವ ಮುಖಂಡ ಜಿತೇಂದ್ರ ಕುಮಾರ್‌, ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್‌ ಅಕ್ಕಪಕ್ಕದಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು ಇದರಿಂದ ಹಾವು ಸೇರಿದಂತೆ ವಿಷ ಜಂತುಗಳು ಹೆಚ್ಚಾಗಿದ್ದು, ಇದರಿಂದ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರಾಣಭಯದಲ್ಲಿ ಇದ್ದಾರೆ ಹಾಗೂ ಗ್ರಾಮದ ಐತಿಹಾಸಿಕ ಜೋಡಿ ಕಲ್ಯಾಣಿ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಹೆಚ್ಚು ಕಸ ಹಾಕುವುದರಿಂದ ಕಸ ಕಲ್ಯಾಣಿ ನೀರಿನೊಳಗೆ ಬಿದ್ದು ನೀರು ಕಲ್ಮಶಗೊಳ್ಳುತ್ತಿದೆ ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಪ್ರವೀಣ್‌ ಮಾತನಾಡಿ, ಗ್ರಾಮದ ಕೆಂಗಟ್ಟೆ ಅಕ್ಕ ಪಕ್ಕದಲ್ಲಿ ಸಾರ್ವಜನಿಕರು ಮನಸೋ ಇಚ್ಛೆ ಕಸ ತಂದು ಸುರಿಯುತ್ತಿದ್ದು, ಇದರಿಂದ ದುರ್ವಾಸನೆ ಹೆಚ್ಚಾಗಿದ್ದು ಜನರು ಓಡಾಡಲು ಕಷ್ಟವಾಗುತ್ತಿದೆ ಮತ್ತು ಕೆಂಗಟ್ಟೆ ರಸ್ತೆಯಿಂದ ಅರೇಕಲಮ್ಮ ದೇವಿ ದೇವಾಲಯದ ಹೊರಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಅನೇಕ ವರ್ಷಗಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸುತ್ತಿದ್ದು, ಆದರೂ ಇದುವರೆಗೂ ಯಾರು ಈ ಬಗ್ಗೆ ಗಮನಹರಿಸುತ್ತಿಲ್ಲ ನರೇಗಾ ಯೋಜನೆ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು. ವಿಶೇಷ ಸಭೆಯಲ್ಲಿ ಕುಡಿಯುವ ನೀರು ರಸ್ತೆ, ಸ್ವಚ್ಛತೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ವಿಶೇಷ ಗ್ರಾಮ ಸಭೆಯಲ್ಲಿ ದೂರು ಹೇಳಿಕೊಂಡರು.

ಸಭೆಯಲ್ಲಿ ಸದಸ್ಯರಾದ ಶಿವಕುಮಾರ್‌, ಮಂಜುನಾಥ್, ರಮ್ಯಾ ಲೋಕೇಶ್‌, ಹೊನ್ನೇಗೌಡ, ಗ್ಯಾಸ್‌ ರಾಜು, ರಾಧಾ ಮಂಜುನಾಥ್‌, ಸವಿತಾ, ಮುಖಂಡರಾದ ಯಲ್ಲಪ್ಪ, ರಂಗಸ್ವಾಮಿ, ಸುಹೀಲ್‌, ಗೋಪಾಲ್‌, ಅಲಿ, ಪುಟ್ಟರಾಮೇಗೌಡ, ಗೋವಿಂದಪ್ಪ, ನಾರಾಯಣಗೌಡ, ಕಾರ್ಯದರ್ಶಿ ಭವಾನಿ, ಸಿಬ್ಬಂದಿಯಾದ ರಾಜಕುಮಾರ್‌, ಜಗದೀಶ್‌, ಬಿಲ್ ಕಲೆಕ್ಟರ್‌ ನಾಗರಾಜ್‌, ಸೋಮು, ಕಸ ವಿಲೇವಾರಿ ಘಟಕದ ಉಸ್ತುವಾರಿ ದೇವರಾಜ್‌ ಸೇರಿದಂತೆ ಅನೇಕರು ಹಾಜರಿದ್ದರು.

click me!