ಸಂಸದ ವಿ. ಶ್ರೀನಿವಾಸಪ್ರಸಾದ್ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗುವಂತೆ ಕರೆ ನೀಡಿದರು.
ನಂಜನಗೂಡು (ನ.08): ಸಂಸದ ವಿ. ಶ್ರೀನಿವಾಸಪ್ರಸಾದ್ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗುವಂತೆ ಕರೆ ನೀಡಿದರು.
ಸುದೀರ್ಘ ಎರಡು ತಾಸುಗಳ ಕಾಲ ಪಕ್ಷದ (BJP) ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ ಅವರು, ವಿಧಾನಸಭಾ ಚುನಾವಣೆ (Election) ಹತ್ತಿರವಾಗುತ್ತಿರುವ ಹಿನ್ನೆಲೆ ಪಕ್ಷದ ಸಂಘಟನೆ ಹಾಗೂ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಮತ್ತೊಮ್ಮೆ ನಂಜನಗೂಡಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸನ್ನದ್ಧಗೊಳಿಸಬೇಕು. ಶಾಸಕ ಬಿ. ಹರ್ಷವರ್ಧನ್ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಮುಂದಿನ ದಿನಗಳಲ್ಲಿ ನಂಜನಗೂಡಿಗೆ ಹೆಚ್ಚು ಭೇಟಿ ನೀಡಲಿದ್ದೇನೆ. ಚುನಾವಣಾ ಗೆಲುವಿಗಾಗಿ ಈಗಿಂದಲೇ ಕಾರ್ಯಕರ್ತರನ್ನು ಸಂಘಟನೆಗೊಳಿಸುವ ನಿಟ್ಟಿನಲ್ಲಿ ಮುಖಂಡರು ಮುಂದಾಗುವಂತೆ ಅವರು ಹೇಳಿದರು.
ಸಂಸದ ವಿ. ಶ್ರೀನಿವಾಸಪ್ರಸಾದ್ ಭೇಟಿ ನೀಡುವ ವಿಚಾರ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಪ್ರಥಮ ದರ್ಜೆ ಗುತ್ತಿಗೆದಾರ ಯು.ಎನ್. ಪದ್ಮನಾಭರಾವ್, ಮುಖಂಡರಾದ ಕುಂಬ್ರಹಳ್ಳಿ ಸುಬ್ಬಣ್ಣ, ಸಿಂಧುವಳ್ಳಿ ಕೆಂಪಣ್ಣ, ಬಿ.ಎಸ್. ಮಹದೇವಪ್ಪ, ಮಹದೇವು, ಮಹದೇವಸ್ವಾಮಿ, ಶಿವಣ್ಣ, ಪುಟ್ಟಸ್ವಾಮಿ, ನಿಧಿ ಸುರೇಶ್ ಇದ್ದರು.
ಮೇಲ್ಸೇತುವೆ ಕಾಮಗಾರಿ ವೀಕ್ಷಣೆ
ಪಟ್ಟಣದ ಅಪೋಲೋ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಸಂಸದ ವಿ. ಶ್ರೀನಿವಾಸಪ್ರಸಾದ್ ವೀಕ್ಷಣೆ ಮಾಡಿದರು.
147 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಗುಣಮಟ್ಟಕಾಯ್ದುಕೊಂಡು 18 ತಿಂಗಳ ನಿಗದಿತ ಗಡುವಿನ ಒಳಗಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಮೇಲ್ಸೇತುವೆ ನಿರ್ಮಾಣ ಆಗುವುದರಿಂದ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತಲೆದೋರುತ್ತಿದ್ದ ಸಂಚಾರ ಸಮಸ್ಯೆ ನಿವಾರಣೆ ಆಗಲಿದೆ ಎಂದು ತಿಳಿಸಿದರು.
ಕರಾವಳಿಯಿಂದ ಕಣಕ್ಕೆ ಮುತಾಲಿಕ್
ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಕರಾವಳಿಯ ಯಾವುದಾದರೂಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿವೆ. ಹಿಂದೂ ಕಾರ್ಯಕರ್ತರ ಭಾವನೆಗಳಿಗೆ ಗೌರವ ನೀಡುವುದು ಮತ್ತು ಯೋಗಿ ಆದಿತ್ಯನಾಥ್ ಮಾದರಿಯ ಆಡಳಿತ ನೀಡುವ ಸಲುವಾಗಿ ಪ್ರಮೋದ್ ಮುತಾಲಿಕ್ ಶಾಸಕರಾಗಿ ಆಯ್ಕೆ ಆಗಲೇಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಸೆ ಪ್ರಕಟಿಸಿವೆ. ನವರಾತ್ರಿಯ ಸಂದರ್ಭದಲ್ಲಿ ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲೆಯಾದ್ಯಂತ ಎರಡು ದಿನಗಳ ಪ್ರವಾಸ ಕೈಗೊಂಡಿದ್ದರು. ವಿವಿಧ ಸಂಘಟನೆಗಳ ಒತ್ತಾಯದ ಮೇರೆಗೆ ಅವರ ಪ್ರವಾಸ ಐದು ದಿನಗಳ ಕಾಲ ವಿಸ್ತರಣೆಗೊಂಡಿತು. ಈ ವೇಳೆ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದಾಗ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುತಾಲಿಕ್ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ಪ್ರಮೋದ್ ಮುತಾಲಿಕ್ ರನ್ನು ದ.ಕ ಜಿಲ್ಲೆಯಲ್ಲಿ ನಿರ್ಬಂಧಿಸಲಾಗಿತ್ತು. ಗಂಗೊಳ್ಳಿ ಸಮಾವೇಶದ ವೇಳೆ ಉಡುಪಿ ಜಿಲ್ಲೆಗೆ ಬಾರದಂತೆ ಪ್ರಮೋದ್ ಮುತಾಲಿಕರಿಗೆ ತಡೆಯೊಡ್ಡಲಾಗಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ನೊಂದಿರುವ ಹಿಂದು ಸಂಘಟನೆಗಳ ಕಾರ್ಯಕರ್ತರು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವಂತೆ ಮುತಾಲಿಕರಿಗೆ ಬೆಂಬಲ ನೀಡಿದ್ದಾರೆ. ಕರಾವಳಿ ಜಿಲ್ಲೆಯಿಂದಲೇ ಮುತಾಲಿಕ್ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು, ಅಥವಾ ಪಕ್ಷೇತರವಾಗಿ ನಿಂತು ಬಿಜೆಪಿಗೆ ಸಡ್ಡು ಹೊಡೆಯಬೇಕು ಎಂದು ಹೇಳುತ್ತಿದ್ದಾರೆ.
ಗುರುದಕ್ಷಿಣೆ ನೀಡಲು ಇದು ಸಕಾಲ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಲು ಪ್ರಮೋದ್ ಮುತಾಲಿಕ್ ಅವರ ಕೊಡುಗೆ ಅಪಾರವಿದೆ. ಬಜರಂಗದಳದ ದಕ್ಷಿಣ ಭಾರತ ಪ್ರಾಂತದ ಮುಖಂಡರಾಗಿದ್ದ ವೇಳೆ, ಮುತಾಲಿಕ್ ಈ ಭಾಗದಲ್ಲಿ ಹಿಂದೂಗಳನ್ನು ಸಂಘಟಿಸಿದ ಫಲವಾಗಿ ಇಂದು ಈ ಪ್ರದೇಶಗಳಲ್ಲಿ ಬಿಜೆಪಿ ನೆಲೆಯೂರಿದೆ ಎಂದು ಶ್ರೀರಾಮ ಸೇನೆಯ ಮುಖಂಡ ಮೋಹನ್ ಭಟ್ ಹೇಳಿದ್ದಾರೆ.
ಹಿಂದುತ್ವ ಮತ್ತು ಹಿಂದೂ ಕಾರ್ಯಕರ್ತರಿಗೆ ಕರಾವಳಿ ಭಾಗದಲ್ಲಿ ತೊಂದರೆ ಆಗಿದೆ. ಕಾರ್ಯಕರ್ತರಿಗೆ ಬಿಜೆಪಿ ನಾಯಕರು ಮಹತ್ವ ನೀಡುತ್ತಿಲ್ಲ. ಚುನಾವಣೆಗೆ ಸ್ಪರ್ಧಿಸುವಂತೆ ಹಿಂದೂ ಕಾರ್ಯಕರ್ತರು ಹೇಳಿರುವುದರಿಂದ ಪ್ರಮೋದ್ ಮುತಾಲಿಕ್ ಕೂಡ ಭಾವುಕರಾಗಿದ್ದರು. ಚುನಾವಣೆಗೆ ಸ್ಪರ್ಧಿಸಲ್ಲ ಎಂದಿರುವ ಮುತಾಲಿಕ್ ಮನಪರಿವರ್ತನೆಯಾಗುವ ರೀತಿ ಕಂಡು ಬಂದಿದೆ.
ಪ್ರಮೋದ್ ಮುತಾಲಿಕ್ ಗೆ ಆದ ಅನ್ಯಾಯ, ದ್ರೋಹ ಕ್ಕೆ ಪರಿಹಾರ ಸಿಗಬೇಕು. 47 ವರ್ಷಗಳ ಕಾಲ ಮನೆ ಮಠ ಬಿಟ್ಟು ಹಿಂದೂ ಸಮಾಜಕ್ಕಾಗಿ ಕೆಲಸ ಮಾಡಿದ್ದಾರೆ. ಪ್ರಮೋದ್ ಮುತಾಲಿಕ್ ಅವರು ಯಾವುದೇ ಆಸ್ತಿಪಾಸ್ತಿ ಮಾಡಿಕೊಂಡಿಲ್ಲ. ಹಿಂದೂ ಸಮಾಜ ಕಟ್ಟುವಲ್ಲಿ ತನ್ನ ಇಡೀ ಜೀವನ ಸವೆಸಿದ್ದಾರೆ. ಅವರಿಂದ ಬೆಳೆದ ಎಲ್ಲಾ ವ್ಯಕ್ತಿಗಳು ದ್ರೋಹ ಮಾಡಿದ್ದಾರೆ. ಸರಕಾರದ ನೀಚ ಕೆಲಸಗಳಿಂದ ಕಾರ್ಯಕರ್ತರಿಗೆ ನೋವಾಗಿದೆ. ಬಿಜೆಪಿ ಹಿಂದೂ ಕಾರ್ಯಕರ್ತರು ಕಟ್ಟಿದ ಪಕ್ಷ.ಕಾರ್ಯಕರ್ತರಿಂದಲೇ ಆಗಿರುವ ಪಕ್ಷ ಬಿಜೆಪಿ. ಕರಾವಳಿಯಲ್ಲಿ ಬಿಜೆಪಿ ಶಾಸಕರು ಇದ್ದರೆ ಅದಕ್ಕೆ ಮುತಾಲಿಕರೇ ಕಾರಣ ಎಂದು ಮೋಹನ್ ಭಟ್ ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್ ಉಡುಪಿ ಜಿಲ್ಲಾ ಪ್ರವಾಸದ ವೇಳೆ ಎಸ್ಕಾರ್ಟ್ ನೀಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಮುತಾಲಿಕ್ ಅವರಿಗೆ ಬೆದರಿಕೆ ಇದ್ದರೂ ಎಸ್ಕಾರ್ಟ್ ನೀಡಿಲ್ಲ. ಮುತಾಲಿಕ್ ಅವರ ತಲೆ ಕಡಿದು ಕೊಟ್ಟವರಿಗೆ 10 ಲಕ್ಷ ಘೋಷಿಸಲಾಗಿತ್ತು. ಹೀಗಿದ್ದರೂ ಪ್ರವಾಸದ ವೇಳೆ ಎಸ್ಕಾರ್ಟ್ ನೀಡಿಲ್ಲ ಎಂದು ಕಿಡಿ ಕಾರಿದ್ದಾರೆ. ಜನರ ಬೇಡಿಕೆಯಿಂದ ಬಾವುಕನಾಗಿದ್ದೇನೆ ಸದ್ಯ ನಾನು ಗೊಂದಲದಲ್ಲಿ ಇದ್ದೇನೆ ಎಂದು ಮುತಾಲಿಕ್ ಹೇಳಿದ್ದಾರೆ.