ಅಂದು ಶೌಚಾಲಯ ತೊಳೆದಿದ್ದ ಕೈಗಳಲ್ಲಿ ಇಂದು ಗುದ್ದಲಿ: ಕಾಯಕವೇ ಕೈಲಾಸ ಎಂದ ಗವಿಮಠ ಶ್ರೀಗಳು..!

By Kannadaprabha NewsFirst Published Jun 26, 2020, 2:29 PM IST
Highlights

ಗುದ್ದಲಿ ಹಿಡಿದು ಕೆಲಸ ಮಾಡಿದ ಗವಿಮಠ ಶ್ರೀಗಳು ದೇವರಂತೆ ಬಂತು ಜೀವ ಉಳಿಸಿದ್ದಾರೆ: ವಿಜ್ಞಾನಿ ಸೈಯದ್‌ ದಸ್ತಗಿರಿ| ಮಠದ ಆವರಣದಲ್ಲಿಯೇ ಇರುವ ಸಸಿ, ಗಿಡಗಳ ಸಂರಕ್ಷಣೆ ಮಾಡುವ ಕಾರ್ಯವನ್ನು ನಿತ್ಯವೂ ಮಾಡುತ್ತಿರುವ ಶ್ರೀಗಳು| 

ಕೊಪ್ಪಳ(ಜೂ.26): ಈಗಾಗಲೇ ಶೌಚಾಲಯ ತೊಳೆದು ರಾಜ್ಯ ಮಟ್ಟದ ಸುದ್ದಿಯಾಗಿದ್ದ ಶ್ರೀ ಗವಿಸಿದೇಶ್ವರ ಮಹಾಸ್ವಾಮಿಗಳು ಈಗ ಕೊರೋನಾ ಸಂಕಷ್ಟದಲ್ಲಿಯೂ ತಮ್ಮ ಕಾಯಕ ಪ್ರಜ್ಞೆ ನಿಲ್ಲಿಸದೆ ಮುಂದುವರಿಸಿದ್ದಾರೆ. ಅದರಲ್ಲೂ ಅವರೇ ಸ್ವತಃ ಗುದ್ದಲಿ, ಸಲಿಕೆಯನ್ನು ಹಿಡಿದು ಮಠದ ಆವರಣದಲ್ಲಿನ ಸಸಿಗಳ ಮಡಿ ಮಾಡುವ ಕಾರ್ಯವನ್ನು ಮಾಡುತ್ತಿರುವ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಲಕ್ಷ ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದರು. ಆದರೆ, ಈ ವರ್ಷ ಕೊರೋನಾ ಇರುವ ಹಿನ್ನೆಲೆಯಲ್ಲಿ ಅದಕ್ಕಿನ್ನು ಚಾಲನೆ ನೀಡಲು ಆಗಿಲ್ಲ. ಆದರೂ ಮಠದ ಆವರಣದಲ್ಲಿಯೇ ಇರುವ ಸಸಿಗಳನ್ನು, ಗಿಡಗಳನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ನಿತ್ಯವೂ ಮಾಡುತ್ತಿದ್ದಾರೆ. ಇಂಥದ್ದೊಂದು ವಿಡಿಯೋವನ್ನು ದೂರದಿಂದಲೇ ಭಕ್ತರೊಬ್ಬರು ಮಾಡಿ ಸೋಶಿಯಲ್‌ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ.
ಸಾಮಾನ್ಯವಾಗಿ ಅವರು ಕೆಲಸ ಮಾಡುವ ವಿಡಿಯೋ ಮಾಡಲು ಅವಕಾಶ ನೀಡುವುದಿಲ್ಲ. ಯಾರಾದರೂ ಮೊಬೈಲ್‌ ತೆಗೆದು, ಫೋಟೋ ಅಥವಾ ವಿಡಿಯೋ ಮಾಡಲು ಮುಂದಾದರೆ ಅದನ್ನು ಕಿತ್ತುಕೊಂಡು ಅವರನ್ನೇ ಕೆಲಸಕ್ಕೆ ಅಣಿಗೊಳಿಸುತ್ತಾರೆ. ಆದರೂ ಈಗ ಅವರ ಕೆಲಸ ಮಾಡುವುದನ್ನು ದೂರದಿಂದಲೇ ವೀಡಿಯೋ ಮಾಡಿ ಹರಿಬಿಡಲಾಗಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಲಾಕ್‌ಡೌನ್‌: ಬಡವರ ಮನೆ ಮನೆಗೆ ಗವಿಮಠ ಶ್ರೀಗಳಿಂದ ದವಸ- ಧಾನ್ಯ

ಜೀವ ಕಾಪಾಡಿದ ಶ್ರೀಗಳು:

ಕಳೆದ ವಾರ ಕೊಪ್ಪಳದತ್ತ ಆಗಮಿಸುವ ವೇಳೆಯಲ್ಲಿ ಸೈಯದ್‌ ಖಾದ್ರಿ ಎನ್ನುವವರು ಬೈಕ್‌ನಲ್ಲಿ ಅಪಘಾತಕ್ಕೆ ಒಳಗಾಗಿ ರಸ್ತೆಯಲ್ಲಿಯೇ ಬಿದ್ದು ಒದ್ದಾಡುತ್ತಿರುತ್ತಾರೆ. ಅಪರಿಚಿತ ಲಾರಿಯೊಂದು ​ಡಿಕ್ಕಿ ಹೊಡೆದು, ನಿಲ್ಲಿಸದೆ ಹೋಗಿತ್ತು. ಅದನ್ನು ನೋಡಿದ ಗವಿಮಠ ಶ್ರೀಗಳು ರಕ್ತದ ಮಡುವಿನಲ್ಲಿದ್ದ ಸೈಯದ್‌ ಖಾದ್ರಿ ಅವರನ್ನು ತಮ್ಮದೇ ವಾಹನದಲ್ಲಿಯೇ ಕರೆದಕೊಂಡು ಬಂದು ಕೆ.ಎಸ್‌. ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಹಾಗೊಂದು ವೇಳೆ ಗವಿಮಠ ಶ್ರೀಗಳು ಕಾಪಾಡದಿದ್ದರೆ ಸೈಯದ್‌ ಖಾದ್ರಿ ಅವರ ಬದುಕುತ್ತಿರಲಿಲ್ಲ ಎಂದೇ ಹೇಳಲಾಗುತ್ತದೆ. ಇದೇ ಮೊದಲಲ್ಲ, ರಸ್ತೆಯಲ್ಲಿ ತೆರಳುವಾಗ ಅಪಘಾತವಾದರೇ ತಕ್ಷಣ ತಾವೇ ಮುಂದೆ ನಿಂತು ಕಾಪಾಡುತ್ತಾರೆ.

ನನ್ನ ಸಹೋದರ ಬೈಕ್‌ ಅಪಘಾತದಲ್ಲಿ ಗಾಯಗೊಂಡಾಗ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಇದರಿಂದ ಆತ ಬದುಕುಳಿಯಲು ಸಾಧ್ಯವಾಯಿತು. ನಮ್ಮ ಪಾಲಿನ ದೇವರು ಅವರು. ಈ ಮಾಹಿತಿಯನ್ನು ನನಗೆ ಅವರೇ ನೀಡಿದ ಮೇಲೆಯೇ ಗೊತ್ತಾಯಿತು ಎಂದು ಪುಣೆಯಲ್ಲಿನ ವಿಜ್ಞಾನಿ ಸೈಯದ್‌ ದಸ್ತಗಿರಿ ಅವರು ಹೇಳಿದ್ದಾರೆ. 
 

click me!