ಅಧಿಕಾರ ಹಿಡಿಯಲು ಕಾಂಗ್ರೆಸ್‌ ತೆರೆಮರೆ ಕಸರತ್ತು: ಬಿಜೆಪಿ ಸದಸ್ಯೆ ಕಿಡ್ನ್ಯಾಪ್‌?

By Kannadaprabha News  |  First Published Oct 25, 2020, 11:19 AM IST

ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ| ಪೊಲೀಸ್‌ ಠಾಣೆಯಲ್ಲಿ ಐವರ ಮೇಲೆ ದೂರು ದಾಖಲು| ಕೊಪ್ಪಳ ಜಿಲ್ಲೆಗ ಗಂಗಾವತಿ ನಗರಸಭೆ| 
 


ಗಂಗಾವತಿ(ಅ.25): ಇಲ್ಲಿಯ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ತೆರೆಮರೆ ಕಸರತ್ತು ನಡೆಸುತ್ತಿದೆ.

ಸದ್ಯ 26ನೇ ವಾರ್ಡಿನ ಬಿಜೆಪಿ ಸದಸ್ಯೆ ಮತ್ತು ಅವರ ಪತಿಯನ್ನು ಕಿಡ್ನ್ಯಾಪ್‌ ಮಾಡಿರುವ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾ​ಗಿ​ದೆ. ಸದಸ್ಯೆ ಸುಧಾ ಸೋಮನಾಥ ಅವರನ್ನು ಕಿಡ್ನ್ಯಾಪ್‌ ಮಾಡಲಾಗಿದೆ ಎಂದು ಸೋಮನಾಥರ ತಾಯಿ ಬಾಲಮ್ಮ ನಗರ ಪೊಲೀಸ್‌ ಠಾಣೆಗೆ ತೆರಳಿ ಐದು ಜನರ ಮೇಲೆ ದೂರು ಸಲ್ಲಿಸಿದ್ದಾರೆ.

Tap to resize

Latest Videos

ನ. 2ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಸೋಮನಾಥ ಭಂಡಾರಿ, ಶ್ಯಾಮೀದ್‌ ಮನಿಯಾರ, ಮನೋಹರಸ್ವಾಮಿ, ಸೈಯದ್‌ ಅಲಿ, ಮಲ್ಲಿಕಾರ್ಜನ ದೇವರಮನಿ ಅವರು ತಮ್ಮ ಮಗ ಸೋಮನಾಥ ಮತ್ತು ಸೊಸೆ, ನಗರಸಭೆ ಸದಸ್ಯೆ ಸುಧಾ ಅವರನ್ನು ನ. 11ರಂದು ಸಭೆ ಇದೆ ಎಂದು ಹೇಳಿ ಕಿಡ್ನ್ಯಾಪ್‌ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ ಎಂದು ಪಿಐ ವೆಂಕಟಸ್ವಾಮಿ ತಿಳಿಸಿದ್ದಾರೆ.

ಕೊಪ್ಪಳ: ಕೊಲೆ ಪ್ರಕ​ರಣ ಭೇದಿಸುವ ನೆಪ​ದಲ್ಲಿ ಅಮಾ​ಯ​ಕ​ರಿಗೆ ಥಳಿ​ತ?

ಕಿಡ್ನ್ಯಾಪ್‌ ಮಾಡಿಲ್ಲ: ಬಿಜೆಪಿ ಸದಸ್ಯೆ ಪತಿ ಹೇಳಿಕೆ

ನನ್ನನ್ನು ಮತ್ತು ನನ್ನ ಪತ್ನಿ ಬಿಜೆಪಿ ಸದಸ್ಯೆ ಸುಧಾ ಅವರನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ ಎಂದು ಸದಸ್ಯೆಯ ಪತಿ ಸೋಮನಾಥ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಹಬ್ಬ ಇರುವದರಿಂದ ತಾವು ದೇವಸ್ಥಾನಗಳ ದರ್ಶನಕ್ಕೆ ಬಂದಿದ್ದೇವೆ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿರುವುದು ನನಗೆ ಗೊತ್ತಿಲ್ಲ. ದಿನ ನಿತ್ಯ ನಮ್ಮ ತಾಯಿ ಜೊತೆ ಸಂಪರ್ಕದಲ್ಲಿದ್ದೇನೆ. ಕಾಂಗ್ರೆಸ್‌ನ ಸೈಯದ್‌ ಅಲಿ, ಮನೋಹರಸ್ವಾಮಿ, ಶ್ಯಾಮೀದ್‌ ಮನಿಯಾರ ಸೇರಿ ಯಾರು ಕಿಡ್ನಾಪ್‌ ಮಾಡಿಲ್ಲ. ಬಿಜೆಪಿ ಪಕ್ಷದವರು ಸಹ ಕಿಡ್ನ್ಯಾಪ್‌ ಮಾಡಿಲ್ಲ. ಆದರೆ, ನನ್ನ ವಾರ್ಡ್‌ ಅಭಿವೃ​ದ್ಧಿಯಾಗಿಲ್ಲ ಎಂಬ ನೋವು ಇದೆ. ಈ ಕಾರಣಕ್ಕೆ ನೊಂದು ಪ್ರವಾಸಕ್ಕೆ ಬಂದಿದ್ದು, ನ. 2ರಂದು ನಗರಸಭೆ ಚುನಾವಣೆ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮತ್ತು ಡಿವೈಎಸ್ಪಿ, ಪಿಐಗೆ ಭೇಟೆಯಾಗಿ ಕೂಲಂಕಷವಾಗಿ ವಿಷಯ ತಿಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸೋಮನಾಥ ವಿವರಿಸಿದ್ದಾರೆ.
 

click me!