
ಗಂಗಾವತಿ (ಮೇ.20): ಇಲ್ಲಿಯ ಯುವ ವಕೀಲ ಕನಕೇಶ್ ಮುರುಡಿ (25) ಅವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ಜರುಗಿದ ನ್ಯಾಯಾಧೀಶರ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗಿಯಾದ ನಂತರ ಏರ್ಪಡಿಸಿದ್ದ ಭೋಜನಕೂಟದ ನಂತರ ಈ ಘಟನೆ ನಡೆದಿದೆ. ಮೂಲತ ಕನಕಗಿರಿ ತಾಲೂಕಿನ ಚಿಕ್ಕ ಮಾದಿನಾಳ ಗ್ರಾಮದ ಕನಕೇಶ ಮುರುಡಿ ಅವರು ಕಳೆದ ಒಂದು ವರ್ಷದ ಹಿಂದೆ ಕಾನೂನು ಪದವಿ ಮುಗಿಸಿ ಪ್ರಾಕ್ಟಿಸ್ ಮಾಡುತ್ತಿದ್ದರು.
ನ್ಯಾಯಾಲಯದ ಆವರಣದಲ್ಲಿದ್ದ ಕ್ಯಾಂಟಿನ್ ಬಳಿ ನೀರು ಕುಡಿದ ಕನಕೇಶ ಮುರುಡಿ ಅವರಿಗೆ ವಾಂತಿ ಪ್ರಾರಂಭವಾಗಿದೆ. ನಂತರ ಕುಸಿದು ಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಲೆ ಕಾರ್ಯಕ್ರಮದಲ್ಲಿದ್ದ ನ್ಯಾಯಾಧೀಶರು, ನ್ಯಾಯವಾದಿಗಳು ಆಗಮಿಸಿ ಕೂಡಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರೊಳಗೆ ಕನಕೇಶ ಮೃತಪಟ್ಟಿದ್ದಾರೆ. ಕನಕೇಶ್‌ಗೆ ತಾಯಿ, ಸೇರಿದಂತೆ ಅಪಾರ ಬಳಗ ಇದೆ.
ಸದ್ಯ ಮೃತದೇಹವನ್ನು ಸ್ವಗ್ರಾಮ ಚಿಕ್ಕಮಾದಿನಾಳ ಗ್ರಾಮಕ್ಕೆ ಕಳಿಸಿಕೊಡಲಾಯಿತು. ಕನಕೇಶ್ ಮುರುಡಿ ನಿಧನಕ್ಕೆ ನ್ಯಾಯಾಧೀಶರು, ನ್ಯಾಯವಾದಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್ನು ಕಳೆದ ಎರಡು ತಿಂಗಳ ಹಿಂದೆ ಕುಷ್ಟಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ ತಾವರಗೇರೆಯ ಯುವ ನ್ಯಾಯವಾದಿ ಸುದ್ದಿ ವಕೀಲರು ಹೃದಯಘಾತದಿಂದ ಮೃತಪಟ್ಟಿದ್ದರು.