
ಗಂಗಾವತಿ: ತಾಲೂಕಿನ ಪ್ರಾಗೈತಿಹಾಸಿಕ ಸ್ಥಳ ಹಿರೇಬೆಣಕಲ್ ಗ್ರಾಮದಲ್ಲಿ ಶಾಸನ ಸಹಿತ ವಿಶಿಷ್ಟ ವೀರಗಲ್ಲು ಬೆಳಕಿಗೆ ಬಂದಿದೆ ಎಂದು ಹಿರೇಬೆಣಕಲ್ ಅನ್ವೇಷಣಾ ತಂಡದ ಮಂಜುನಾಥ ದೊಡ್ಡಮನಿ ತಿಳಿಸಿದ್ದಾರೆ.
ವೀರಗಲ್ಲನ್ನು ಪರಿಶೀಲಿಸಿದ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ ವೀರಗಲ್ಲು ಸಾಂಸ್ಕೃತಿಕವಾಗಿ ಮಹತ್ವದ್ದಾಗಿದೆ. ಬಿಳಿ ಗ್ರಾನೈಟ್ ಶಿಲೆಯಲ್ಲಿ ರಚಿತವಾಗಿದ್ದು, ವೀರಗಲ್ಲು ರಚನಾ ಶೈಲಿಯಂತೆ ಮೂರು ಹಂತದಲ್ಲಿದೆ. ಮೊದಲ ಹಂತದಲ್ಲಿ (ಭೂಲೋಕ) ಬಲಗೈಯಲ್ಲಿ ಚೂರಿ ಹಿಡಿದು ಹೋರಾಟ ಭಂಗಿಯಲ್ಲಿರುವ ವೀರನೊಬ್ಬನಿದ್ದಾನೆ. ತಲೆಯ ಮೇಲೆ ವಿಶಿಷ್ಟ ರೀತಿಯ ಪೇಟಾ ಇದೆ. ಎರಡನೇ ಹಂತದಲ್ಲಿ (ಅಂತರಿಕ್ಷ ಲೋಕ) ಹೋರಾಟದಲ್ಲಿ ಹುತಾತ್ಮನಾದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯವಿದೆ. ಮೂರನೆಯ ಹಂತದಲ್ಲಿ ( ಸ್ವರ್ಗಲೋಕ) ವೀರನಿಗೆ ಸ್ವರ್ಗಪ್ರಾಪ್ತಿಯಾದ ಸಂಕೇತವಾಗಿ ಆತ ಇಬ್ಬರು ಚಾಮರಧಾರಿಯ ಸೇವೆ ಪಡೆಯುತ್ತ ಸ್ವರ್ಗಸುಖ ಅನುಭವಿಸುತ್ತಿರುವ ದೃಶ್ಯವಿದೆ.
ಕೆಳ ಹಂತದಲ್ಲಿ ವೀರನ ಪಕ್ಕದಲ್ಲಿ ಶಾಸನ ಬರಹವಿದೆ. ಬರಹವು ವೀರನ ಶೌರ್ಯ ಸಾಹಸ ಕೊಂಡಾಡುತ್ತದೆ. ಶ್ರೀಹರಿಯು ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿಯನ್ನು ರಕ್ಷಿಸಿದಂತೆ ಚಂದ ಎಂಬ ಭಟ( ಸೈನಿಕ) ಭೂಮಿಯನ್ನು ( ಗ್ರಾಮವನ್ನು) ರಕ್ಷಿಸಿದನೆಂಬ ಅರ್ಥ ಬರುವಂತಿದೆ. ಏಳು ಪ್ರಕಾರದ ವೀರಗಲ್ಲುಗಳಲ್ಲಿ ಊರರವು ಅಂದರೆ ಗ್ರಾಮದ ಮೇಲೆ ದಾಳಿಯಾದಾಗ ವೀರನೊಬ್ಬ ಶತ್ರುಗಳ ವಿರುದ್ಧ ಹೋರಾಡಿ ಗ್ರಾಮ ರಕ್ಷಿಸಿ ತಾನು ಮಡಿಯಲು ಆತನ ಸ್ಮರಣಾರ್ಥ ಹಾಕಿಸಿದ ವೀರಗಲ್ಲು ಇದಾಗಿದೆ. ಶಿಲ್ಪ ಮತ್ತು ಅಕ್ಷರಗಳ ಶೈಲಿಯಿಂದ ಇದು ಪ್ರಸಕ್ತ ಶಕೆ 9ನೇ ಶತಮಾನದ್ದಾಗಿದ್ದು, ಗಂಗಾವತಿ ಪ್ರದೇಶದ ಅತೀ ಪ್ರಾಚೀನ ಶಾಸನೋಕ್ತ ವೀರಗಲ್ಲು ಇದಾಗಿದೆ ಎಂದು ಡಾ. ಕೋಲ್ಕಾರ ಅಭಿಪ್ರಾಯ ಪಟ್ಟಿದ್ದಾರೆ.
ಶಾಸನ ಬರಹದ ಇನ್ನಷ್ಟು ಸ್ಪಷ್ಟ ಓದಿನಿಂದ ಅದು ಕರ್ನಾಟಕದ ವೀರ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆಯಬಹುದಾಗಿದೆ ಎಂದು ಬೆಂಗಳೂರಿನ ಲಿಪಿತಜ್ಞ ಡಾ.ಜಿ.ಕೆ. ದೇವರಾಜಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ವೀರಗಲ್ಲು ಬೆಳಕಿಗೆ ತರುವಲ್ಲಿ ಹಿರೇಬೆಣಕಲ್ ಅನ್ವೇಷಣಾ ತಂಡದ ಮಂಜುನಾಥ್ ದೊಡ್ಮನಿ, ವೀರೇಶ ಅಂಗಡಿ,ಚಂದ್ರಶೇಖರ ಕುಂಬಾರ, ಮಂಜುನಾಥ ಗುಡ್ಲಾನೂರ, ಹರನಾಯಕ ಮತ್ತು ಹುಸೇನಬಾಷಾ ನೆರವಾಗಿದ್ದಾರೆ ಎಂದು ಡಾ.ಕೋಲ್ಕಾರ ತಿಳಿಸಿದ್ದಾರೆ.