Koppal: ಇತಿಮಿತಿಯಲ್ಲಿ ಯೋಚಿಸಿ ಹೆಜ್ಜೆ ಇಡಿ; ಸಚಿವ ಶಿವರಾಜ್ ತಂಗಡಗಿಗೆ ಸ್ವಪಕ್ಷದ ಹಿರಿಯ ನಾಯಕನ ಖಡಕ್ ಎಚ್ಚರಿಕೆ!

Published : Aug 26, 2026, 04:05 PM IST
Shivaraj Tangadagi

ಸಾರಾಂಶ

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದ ಸಚಿವ ಶಿವರಾಜ್ ತಂಗಡಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ಅವರನ್ನು 'ಸುಳ್ಳಿನ ಗುಡ್ಡ' ಎಂದು ಕರೆದು, 35 ವರ್ಷಗಳ ಹಿಂದಿನ ಫೈನಾನ್ಸ್ ಕಂಪನಿ ವಂಚನೆ ಪ್ರಕರಣವನ್ನು ನೆನಪಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ರಾಜಕಾರಣದಲ್ಲಿ ಭಿನ್ನಮತ ಮತ್ತು ರಾಜಕೀಯ ವಾಗ್ದಾಳಿಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಕೊಪ್ಪಳದ ಗಂಗಾವತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ, ಸ್ವಪಕ್ಷದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಗಂಗಾವತಿಯ ಶಾಸಕರಾದ ಜನಾರ್ದನ ರೆಡ್ಡಿ ಅವರ ವಿರುದ್ಧವೂ ಹಳೆಯ ಪ್ರಕರಣಗಳನ್ನು ನೆನಪಿಸಿ ವಾಗ್ದಾಳಿ ನಡೆಸಿದ್ದಾರೆ.

ಸಚಿವ ಶಿವರಾಜ್ ತಂಗಡಗಿ ವಿರುದ್ಧ ಅಸಮಾಧಾನ!

ತಾವು ಮತ್ತು ಸಚಿವ ಶಿವರಾಜ್ ತಂಗಡಗಿ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇವೆ ಎಂದು ಸ್ಪಷ್ಟಪಡಿಸಿದ ಇಕ್ಬಾಲ್ ಅನ್ಸಾರಿ, ತಂಗಡಗಿ ಅವರು ತಮ್ಮ ಇತಿಮಿತಿಯಲ್ಲಿ ಯೋಚನೆ ಮಾಡಿ ಹೆಜ್ಜೆ ಇಡಬೇಕು ಎಂದು ಎಚ್ಚರಿಸಿದ್ದಾರೆ. ನಾನು ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸೋತಿರಬಹುದು, ಆದರೆ ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಗಂಗಾವತಿಯಲ್ಲಿ ಪಿಯೂನ್‌ನಿಂದ ಹಿಡಿದು ಪ್ರತಿಯೊಬ್ಬ ಅಧಿಕಾರಿಯನ್ನು ತಂಗಡಗಿ ಅವರೇ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅನ್ಸಾರಿ ಹೇಳಿದ್ದೇನು?

ತಮ್ಮ ಕಾರ್ಯಕರ್ತರ ಕೆಲಸಗಳು ಸುಲಭವಾಗಿ ಆಗಲು ಬೇಕಾದ ಅಧಿಕಾರಿಗಳನ್ನು ಹಾಕಿಕೊಳ್ಳುವುದು ತಮ್ಮ ಕರ್ತವ್ಯವಾಗಿದ್ದು, ಇದನ್ನು ದುಡ್ಡು ಮಾಡಲು ಮಾಡುತ್ತಿಲ್ಲ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಅನ್ಸಾರಿ ಹೇಳಿದರು. ಒಂದು ವೇಳೆ ಸಚಿವರು ಈ ವಿಷಯವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಸಾರ್ವಜನಿಕರ ಮುಂದೆ ಬಂದು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜನಾರ್ದನ ರೆಡ್ಡಿ ವಿರುದ್ಧ ಗಂಭೀರ ಆರೋಪ!

ಇದೇ ವೇಳೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧವೂ ಹರಿಹಾಯ್ದ ಅನ್ಸಾರಿ, ರೆಡ್ಡಿ ಅವರನ್ನು "ಸುಳ್ಳಿನ ದೊಡ್ಡ ಗುಡ್ಡ" ಎಂದು ಬಣ್ಣಿಸಿದ್ದಾರೆ. ಜನಾರ್ದನ ರೆಡ್ಡಿ ಬಂದಾಗಲೆಲ್ಲ ದೇವರ ಪೂಜೆ ಮಾಡಿಕೊಂಡು ಹೋಗಿ, ಭಗವಂತನ ಕೃಪೆ ಎಂದು ಹೇಳುತ್ತಾ ಜನರಿಗೆ ಮರಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಂಗಾವತಿಯ ಮುಗ್ಧ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ, ಮರಳು ಮಾಡಿ ಮತ ಪಡೆದು ಗೆದ್ದಿದ್ದಾರೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರದಿಂದ ಮನೆ ಕಟ್ಟಿಸಿಕೊಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು; ಅದನ್ನು ಬಿಟ್ಟು ಈಗ ಕೊಟ್ಟ ಮಾತನ್ನು ನಡೆಸಿಕೊಡಲು ಏನೇನೋ ನೆಪಗಳನ್ನು ಹೇಳಬಾರದು ಎಂದು ಆಗ್ರಹಿಸಿದ್ದಾರೆ.

ಫೈನಾನ್ಸ್ ಕಂಪನಿ ವಂಚನೆ ಪ್ರಕರಣ ನೆನಪಿಸಿದ ಅನ್ಸಾರಿ!

ಜನಾರ್ದನ ರೆಡ್ಡಿ ಅವರ ಗತಕಾಲದ ಹಿನ್ನೆಲೆಯನ್ನು ಪ್ರಸ್ತಾಪಿಸಿದ ಇಕ್ಬಾಲ್ ಅನ್ಸಾರಿ, "ಸುಮಾರು 35 ವರ್ಷಗಳ ಹಿಂದೆ ಜನಾರ್ದನ ರೆಡ್ಡಿ 'ಎನೋಬಲ್ ಇಂಡಿಯಾ' ಎನ್ನುವ ಫೈನಾನ್ಸ್ ಕಂಪನಿಯನ್ನು ತೆರೆದಿದ್ದರು. ಆ ಮೂಲಕ ಸಾರ್ವಜನಿಕರಿಂದ ಹಣ ಹಾಕಿಸಿಕೊಂಡು ರಾತೋರಾತ್ರಿ ಓಡಿ ಹೋಗಿದ್ದರು. ಆ ಕಂಪನಿಯಲ್ಲಿ ಹಣ ಹಾಕಿ ಮೋಸ ಹೋದ ಜನರು ಇಂದಿಗೂ ಗಂಗಾವತಿಯಲ್ಲಿ ಇದ್ದಾರೆ. ಅವರನ್ನು ಕೇಳಿದರೆ ಜನಾರ್ದನ ರೆಡ್ಡಿ ಅವರ ನೈಜ ಬಣ್ಣ ಏನೆಂಬುದು ಗೊತ್ತಾಗುತ್ತದೆ" ಎಂದು ಹೇಳುವ ಮೂಲಕ ರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

Mandya: ಗರ್ಲ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಕೈದಿ; ಕರ್ತವ್ಯ ಲೋಪ ಹಿನ್ನೆಲೆ ಪೊಲೀಸ್ ಪೇದೆ ಸಸ್ಪೆಂಡ್
B Nagendra Resignation: ಬಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದೇಕೆ? ಸಿಎಂ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಏನು?