ಗಂಗಾವತಿಯಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ: ಪೌರಾಯುಕ್ತರ ಕ್ರಮಕ್ಕೆ ಜನರಿಂದ ಮೆಚ್ಚುಗೆ

Published : May 05, 2026, 11:25 PM IST
encroachment removal

ಸಾರಾಂಶ

ಹಲವಾರು ವರ್ಷಗಳಿಂದ ನಗರದ ಫುಟ್‌ಪಾತ್‌ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿ, ಡಬ್ಬಾ ಹೊಟೆಲ್ ಸೇರಿದಂತೆ ಬಂಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಒಂದು ವಾರದಿಂದ..

ರಾಮಮೂರ್ತಿ ನವಲಿ

ಗಂಗಾವತಿ (ಮೇ.05): ಹಲವಾರು ವರ್ಷಗಳಿಂದ ನಗರದ ಫುಟ್‌ಪಾತ್‌ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿ, ಡಬ್ಬಾ ಹೊಟೆಲ್ ಸೇರಿದಂತೆ ಬಂಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಒಂದು ವಾರದಿಂದ ಕಾರ್ಯಾಚರಣೆ ನಡೆದಿದ್ದು, ಪ್ರಮುಖವಾಗಿ ಗಾಂಧಿ ವೃತ್ತ, ಮಹಾವೀರ ವೃತ್ತದ ರಸ್ತೆ, ಪಂಪಾನಗರ, ಶ್ರೀಚೆನ್ನಬಸವಸ್ವಾಮಿ ವೃತ್ತ ರಸ್ತೆ, ಬಸವಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆ, ಜುಲೈ ನಗರ ಸೇರಿದಂತೆ ವಿವಿಧ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಿರುವ ಚರಂಡಿಗಳ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೊಟೆಲ್ ಗಳನ್ನು ತೆರವುಗೊಳಿಸಿದ್ದಾರೆ.

ಕೆಲವರು ರಸ್ತೆಯ ಪಕ್ಕದಲ್ಲಿರುವ ಚರಂಡಿ ಮೇಲೆ ನಿರ್ಮಿಸಿರುವ ಫುಟ್‌ಪಾತ್‌ ಮೇಲೆ ತಮ್ಮ ಸ್ವಂತ ಅಂಗಡಿಗಳಂತೆ ನಿರ್ಮಿಸಿಕೊಂಡಿದ್ದರು. ಇದರ ಬಗ್ಗೆ ನಗರಸಭೆಯವರು ಧ್ವನಿವರ್ಧಕ ಮೂಲಕ ಸೂಚನೆ ನೀಡಿದ್ದರು ಸಹ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ನಿರ್ಲಕ್ಷ ಮಾಡಿದ್ದರಿಂದ ನಗರಸಭೆಯ ಸಿಬ್ಬಂದಿಗಳು ಜೆಸಿಬಿ ಮೂಲಕ ಬುಡ ಸಮೇತ ತೆರವುಗೊಳಿಸಿದ್ದಾರೆ.

ಸಂಚಾರಕ್ಕೆ ಅಡ್ಡಿಯಾಗಿದ್ದ ಅಂಗಡಿಗಳು

ವೃದ್ದರಿಗೆ ಮತ್ತು ಮಹಿಳೆಯರು ಸೇರಿದಂತೆ ಮಕ್ಕಳು ಸುಗಮವಾಗಿ ಸಂಚರಿಸುವುದಕ್ಕಾಗಿ ನಗರಸಭೆಯವರು ಅಮೃತಸಿಟಿ ಯೋಜನೆಯಲ್ಲಿ ಕೋಟ್ಯಾಂತ ರು ವೆಚ್ಚ ಮಾಡಿ ಫುಟ್‌ಪಾತ್‌ ಗಳನ್ನು ನಿರ್ಮಿಸಿದ್ದರು. ಇದಕ್ಕೆ ಕೆಲ ಅಂಗಡಿ ಮಾಲಿಕರು ಫುಟ್‌ಪಾತ್‌ ಮೇಲೆ ಸ್ವಂತ ಅಂಗಡಿಗಳಂತೆ ನಿರ್ಮಿಸಿಕೊಂಡಿದ್ದರು. ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.

ಬೀದಿ ವ್ಯಾಪಾರಿಗಳು ಅನಾಥ

ಬೀದಿಯಲ್ಲೆ ವ್ಯಾಪಾರ ಮಾಡುವ ವ್ಯಾಪಾರಿಗಳು ಈಗ ಅನಾಥರಾಗಿದ್ದಾರೆ. ರಸ್ತೆ ಪಕ್ಕ ಮತ್ತು ಫುಟ್‌ಪಾತ್‌ ಮೇಲೆ ಬೀದಿ ವ್ಯಾಪಾರಿಗಳು ವ್ಯವಹಾರ ಮಾಡುತ್ತಿದ್ದರು. ಈಗ ತೆರವು ಕಾರ್ಯಚರಣೆಯಾಗಿದ್ದರಿಂದ ವ್ಯಾಪಾರ ನಡೆಯದೆ ಅನಾಥ ರಾಗಿದ್ದೇವೆ ಎನ್ನುವ ಮಾತುಗಳು ಕೇಳಿ ಬರುತ್ತದೆ. ಆದರೂ ವ್ಯಾಪಾರಿಗಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ನಗರಸಭೆಯವರು ಗುಂಡಮ್ಮ ಕ್ಯಾಂಪ್ ನಲ್ಲಿ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರಕ್ಕೆ ಮಾರುಕಟ್ಟೆ ನಿರ್ಮಿಸಿ ಇದೇ ಸ್ಥಳದಲ್ಲಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದ್ದಾರೆ.

ಸುಂದರೀಕರಣಕ್ಕೆ ಒತ್ತು

ನಗರದಲ್ಲಿ ಸುಗಮ ಸಂಚಾರ, ಪಾದಾಚಾರಿಗಳಿಗೆ ಅನುಕೂಲದ ಜೊತೆಗೆ ನಗರ ಸುಂದರೀಕರಣವಾಗಬೇಕೆಂಬ ಕಾರಣಕ್ಕೆ ನಗರಸಭೆಯವರು ಕೈಗೊಂಡ ಕ್ರಮಕ್ಕೆ ನಾಗರಿಕರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಫುಟ್‌ಪಾತ್‌ ಮೇಲೆ ಅಂಗಡಿಗಳ ತೆರುವು, ರಸ್ತೆ ಮದ್ಯದಲ್ಲಿ ವಿದ್ಯುತ್ ದೀಪಗಳ ಕಂಬಗಳು, ಮಳೆ ನೀರು ಸುಗಮವಾಗಿ ಚರಂಡಿ ಸೇರುವುದರ ಬಗ್ಗೆ ಕ್ರಮ ಕೈಗೊಂಡಿದ್ದು, ಇದಕ್ಕೆ ನಾಗರಿಕರು ಪ್ರಶಂಸಿದ್ದಾರೆ. ಅಲ್ಲದೆ ಕೂಡಲೆ ಫುಟ್‌ಪಾತ್‌ ದುರಸ್ಥಿ ಕಾರ್ಯವಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗಂಗಾವತಿ ನಗರದ ಕೆಲ ರಸ್ತೆಗಳ ಪಕ್ಕದಲ್ಲಿರುವ ಫುಟ್‌ಪಾತ್‌ ಮೇಲೆ ಇರುವ ಅನಧಿಕೃತ ಅಂಗಡಿಗಳನ್ನು ತೆರವುಗಳಿಸಿದೆ. ಈಗಾಗಲೇ ಸೂಚನೆ ನೀಡಿದ್ದರು ಸಹ ತೆರವುಗೊಳಿಸಿಕೊಳ್ಳದೆ ನಿರ್ಲಕ್ಷವಹಿಸಿದ್ದಾರೆ. ತರಕಾರಿ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳು ಗುಂಡಮ್ಮ ಕ್ಯಾಂಪ್ ಬಳಿ ನಿರ್ಮಿಸಿರುವ ಮಾರುಕಟ್ಟೆಗೆ ಹೋಗುವಂತೆ ಸೂಚನೆ ನೀಡಿದೆ. ಸಾರ್ವಜನಿಕರ ಹಿತ ದೃಷ್ಠಿ ಮತ್ತು ನಗರ ಸುಂದರೀಕರಣಕ್ಕೆ ಒತ್ತು ನೀಡಲಾಗಿದೆ.
-ವಿರೂಪಾಕ್ಷಮೂರ್ತಿ, ಪೌರಾಯುಕ್ತರು. ನಗರಸಭೆ

ನಗರದಲ್ಲಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಕ್ಕೆ ಸ್ವಾಗತಿಸುತ್ತೇವೆ. ನಗರದ ಸುಂದರೀಕರಣಕ್ಕೆ ಆದ್ಯೇತೆ ನೀಡಿರುವದು ಪ್ರಶಂಸನೀಯ. ಬೀದಿ ವ್ಯಾಪಾರಿಗಳು ಅನಾಥರಾಗುವುದಕ್ಕಿಂತ ಪೂರ್ವದಲ್ಲಿ ಅವರಿಗೆ ಸ್ಥಳ ಅವಕಾಶ ಕಲ್ಪಿಸಬೇಕು.
-ಗಂಗಪ್ಪ, ಗಂಗಾವತಿ

ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದರಿಂದ ಬೀದಿ ಪಾಲಾಗಿದ್ದೇವೆ. ದಿನ ನಿತ್ಯ ಬಂಡಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತೇವೆ. ಬದುಕಲು ಅವಕಾಶ ನೀಡಿರಿ.
-ಗುಂಡಪ್ಪ, ಬೀದಿ ವ್ಯಾಪಾರಿ

PREV
Read more Articles on
click me!

Recommended Stories

ಶಾಲಾ ಬಾಲಕಿಯ ಪ್ರಾಣ ತೆಗೆದ ಸ್ಕಿಪ್ಪಿಂಗ್ ಹಗ್ಗ! ವಿದ್ಯುತ್ ತಗುಲಿ 9 ವರ್ಷದ ಸಾನ್ವಿ ಕಾಂಬಳೆ ದುರ್ಮರಣ
ಬಿಜೆಪಿ ಮುಚ್ಚುತ್ತಿದ್ದ ಎಪಿಎಂಸಿಗಳಿಗೆ ಕಾಂಗ್ರೆಸ್‌ನಿಂದ ಜೀವಕಳೆ: ಸಚಿವ ಶಿವಾನಂದ ಪಾಟೀಲ್