ದಶಕದ ಬಳಿಕ ಸುಂಟಿಕೊಪ್ಪ ಗಣೇಶ ಚಿತ್ರಮಂದಿರ ಪುನಾರಂಭ| 12 ವರ್ಷಗಳ ನಂತರ ಹೈಟೆಕ್ ಸ್ಪರ್ಶದೊಂದಿಗೆ ನವೀಕರಣ| 10 ಲಕ್ಷ ರುಪಾಯಿ ವೆಚ್ಚದ ಕಾಮಗಾರಿ| 1967ರ ಫೆ. 27ರಂದು ಸುಂಟಿಕೊಪ್ಪದಲ್ಲಿ ಆರಂಭವಾಗಿದ್ದ ಗಣೇಶ್ ಚಿತ್ರ ಮಂದಿರ| ಸುಮಾರು 40 ವರ್ಷಗಳ ಕಾಲ ಸಿನಿಮಾ ಪ್ರಿಯರ ಮನಗೆದ್ದು ಚಿತ್ರಮಂದಿರ ಕಾರ್ಯನಿರ್ವಹಿಸಿತ್ತು|
* ವಿಘ್ನೇಶ್ ಭೂತನಕಾಡು
ಮಡಿಕೇರಿ:(ಸೆ.23) ಸುಂಟಿಕೊಪ್ಪದಲ್ಲಿದ್ದ ಗಣೇಶ್ ಚಿತ್ರ ಮಂದಿರ ಮತ್ತೆ ಆರಂಭಗೊಳ್ಳುತ್ತಿದ್ದು, ಮನರಂಜನೆಯ ಅನುಭವವನ್ನು ಮರುಕಳಿಸುವಂತೆ ಮಾಡಲಿದೆ. ಇದೀಗ ಸುಸಜ್ಜಿತವಾಗಿ ನವೀಕರಣಗೊಂಡಿರುವ ಚಿತ್ರಮಂದಿರ ಹೊಸ ವಿನ್ಯಾಸ ಹಾಗೂ ಸಂಪೂರ್ಣ ಹವಾನಿಯಂತ್ರಿತದಿಂದ ಕೂಡಿದ್ದು, ಹೈಟೆಕ್ ರೂಪದೊಂದಿಗೆ ಪ್ರದರ್ಶನಕ್ಕೆ ಸಜ್ಜಾಗಿದೆ.
1967ರ ಫೆ. 27ರಂದು ಸುಂಟಿಕೊಪ್ಪದಲ್ಲಿ ಗಣೇಶ್ ಚಿತ್ರ ಮಂದಿರ ಆರಂಭವಾಗಿ ಅಂದಿನಿಂದ ಸುಮಾರು 40 ವರ್ಷಗಳ ಕಾಲ ಸುಂಟಿಕೊಪ್ಪ ವ್ಯಾಪ್ತಿಯ ಸಿನಿಮಾ ಪ್ರಿಯರ ಮನಗೆದ್ದು ಚಿತ್ರಮಂದಿರ ಕಾರ್ಯನಿರ್ವಹಿಸಿತ್ತು. ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಆ ದಿನಗಳಲ್ಲಿ ಸಿನಿಮಾಗಳನ್ನು ನೋಡಲು ಚಿತ್ರಮಂದಿಕ್ಕೆ ಕಿಕ್ಕಿರಿದು ಜನ ಸೇರುತ್ತಿದ್ದರು. ಆದರೆ ನಂತರ ಟಿವಿ, ಧಾರಾವಾಹಿ, ಸಾಮಾಜಿಕ ಜಾಲತಾಣಗಳ ಅಬ್ಬರದಿಂದಾಗಿ ಜನರು ಚಿತ್ರಮಂದಿರಗಳಲ್ಲಿ ಕುಳಿತು ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸುತ್ತಿದ್ದರು. ಇದರಿಂದ ನಷ್ಟಕ್ಕೊಳಗಾದ ಗಣೇಶ್ ಚಿತ್ರಮಂದಿರ 2007ರ ಆ. 30ರಂದು ಸ್ಥಗಿತಗೊಳ್ಳುವಂತಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಿತ್ರ ಮಂದಿರ ಸ್ಥಗಿತಗೊಂಡ ಬಳಿಕ ಜನರು ಕುಶಾಲನಗರ ಹಾಗೂ ಮಡಿಕೇರಿಗೆ ತೆರಳಿ ಚಿತ್ರಗಳನ್ನು ವೀಕ್ಷಿಸುವಂತಾಯಿತು. ಆದರೆ ಇದೀಗ 12 ವರ್ಷಗಳ ಬಳಿಕ ಮತ್ತೆ ಸಿನಿಮಾ ಪ್ರಿಯರಿಗೆ ಸಂತಸ ನೀಡಲು ಗಣೇಶ್ ಚಿತ್ರ ಮಂದಿರ ಮುಂದಾಗಿದೆ. 30 ಲಕ್ಷ ರುಪಾಯಿ ವೆಚ್ಚದಲ್ಲಿ ಚಿತ್ರ ಮಂದಿರವನ್ನು ನವೀಕರಣ ಮಾಡಲಾಗಿದ್ದು, ಅತ್ಯಾಧುನಿಕ ಸ್ಪರ್ಶ ನೀಡಲಾಗಿದೆ. ಇಂದಿನ ಹೊಸ ತಲೆಮಾರಿಗೆ ಹೊಂದಿಕೊಳ್ಳುವಂತೆ ಉತ್ತಮ ಡಾಲ್ಬಿ ಸೌಂಡ್ಸ್ ಸಿಟ್ಟಮ್, ಲೈಟಿಂಗ್ಸ್, ಪುಶ್‌ಬ್ಯಾಕ್ ಆಸನ ವ್ಯವಸ್ಥೆ, ಚಿತ್ರ ಮಂದಿರ ಸಮೀಪದಲ್ಲೇ ಕ್ಯಾಂಟೀನ್, ಶೌಚಾಲಯ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ ಚಿತ್ರ ಮಂದಿರ ಸಜ್ಜುಗೊಂಡಿದೆ.
ಈಗಾಗಲೇ ಚಿತ್ರ ಮಂದಿರದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಪರವಾನಗಿಗಾಗಿ ಚಿತ್ರಮಂದಿರ ಕಾಯುತ್ತಿದೆ. ಇದು ದೊರೆತ ಕೂಡಲೇ ದಸರಾದಂದು ಉದ್ಘಾಟನೆಗೊಳ್ಳುವ ಸಾಧ್ಯತೆಗಳಿದೆ. ಇದರಿಂದ ರಾಜ್ಯಾದ್ಯಂತ ತೆರೆ ಕಾಣಲಿರುವ ಚಿತ್ರಗಳನ್ನು ಅಂದೇ ಸುಂಟಿಕೊಪ್ಪ ಗಣೇಶ ಚಿತ್ರಮಂದಿರಲ್ಲಿ ವೀಕ್ಷಿಸಬಹುದಾಗಿದೆ.
ಸರ್ಕಾರದ ಉತ್ತೇಜನ:
ಹತ್ತು ವರ್ಷಗಳ ಕಾಲ ಕನ್ನಡ ಚಿತ್ರಗಳನ್ನು ಮಾತ್ರ ಪ್ರಸಾರ ಮಾಡುವುದರಿಂದ ರಾಜ್ಯ ಸರ್ಕಾರ ಚಿತ್ರ ಮಂದಿರಕ್ಕೆ 25 ಲಕ್ಷದ ವರೆಗೆ ಸಬ್ಸಿಡಿ ನೀಡುತ್ತದೆ. ಇದರಿಂದ ಗಣೇಶ್ ಚಿತ್ರ ಮಂದಿರ ಮತ್ತೆ ಆರಂಭಗೊಳ್ಳಲು ಸಹಕಾರಿಯಾಗಿದೆ.
ಕೊಡಗಿನಲ್ಲಿದ್ದವು 10ಕ್ಕೂ ಹೆಚ್ಚು ಚಿತ್ರಮಂದಿರ!
ಕೊಡಗು ಜಿಲ್ಲೆಯಲ್ಲಿ ಹತ್ತಕ್ಕೂ ಅಧಿಕ ಚಿತ್ರಮಂದಿರಗಳಿದ್ದವು. ಆದರೆ ಟಿ.ವಿ.ಯ ಪ್ರಭಾವದಿಂದಾಗಿ ಹಾಗೂ ಚಿತ್ರ ಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವವರು ಕ್ಷೀಣಗೊಂಡ ಹಿನ್ನೆಲೆಯಲ್ಲಿ ನಷ್ಟವನ್ನು ಎದುರಿಸಿದ ಚಿತ್ರ ಮಂದಿರಗಳು ಅನಿವಾರ್ಯವಾಗಿ ಸ್ಥಗಿತಗೊಳಿಸುವಂತಾಯಿತು. ಮಡಿಕೇರಿಯಲ್ಲಿ 2, ಕುಶಾಲನಗರದಲ್ಲಿ 2, ವಿರಾಜಪೇಟೆಯಲ್ಲಿ 3, ಸೋಮವಾರಪೇಟೆ 2, ಗೋಣಿಕೊಪ್ಪದಲ್ಲಿ 2, ಸುಂಟಿಕೊಪ್ಪದಲ್ಲಿ ಚಿತ್ರ ಮಂದಿರಗಳನ್ನು ಮುಚ್ಚುವಂತಾಯಿತು.
ಈಗ ಎಷ್ಟಿವೆ?
ಮಡಿಕೇರಿಯಲ್ಲಿ ಕಾವೇರಿ ಚಿತ್ರ ಮಂದಿರ, ಕುಶಾಲನಗರದಲ್ಲಿ ಕೂರ್ಗ್ ಸಿನಿಫ್ಲೆಕ್ಸ್, ಸಿದ್ದಾಪುರದಲ್ಲಿ ವುಡ್‌ಲ್ಯಾಂಡ್ ಸಿನಿಫ್ಲೆಕ್ಸ್, ಸುಂಟಿಕೊಪ್ಪದಲ್ಲಿ ಗಣೇಶ್ ಚಿತ್ರಮಂದಿರ
ಈ ಬಗ್ಗೆ ಮಾತನಾಡಿದ ಸುಂಟಿಕೊಪ್ಪ ನಿವಾಸಿ ರಂಜಿತ್, ಸುಂಟಿಕೊಪ್ಪದಲ್ಲಿ ಗಣೇಶ್ ಚಿತ್ರಮಂದಿರ ಮತ್ತೆ ಆರಂಭವಾಗುತ್ತಿರುವುದರಿಂದ ತುಂಬಾ ಸಂತೋಷವಾಗಿದ್ದು, ನಮ್ಮ ಬಾಲ್ಯದ ದಿನಗಳು ಮರುಕಳಿಸಿದಂತಿದೆ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ನೋಡಿದ್ದೇ ಹೆಚ್ಚು. ಚಿತ್ರಮಂದಿರ ಸ್ಥಗಿತಗೊಂಡಿದ್ದರಿಂದ ಬೇರೆ ಕಡೆಗೆ ಹೋಗಿ ಸಿನಿಮಾ ನೋಡುವಂತಾಗಿತ್ತು. ಇದೀಗ ನಮ್ಮ ಊರಿನಲ್ಲೇ ನಾವು ಚಿತ್ರ ವೀಕ್ಷಣೆ ಮಾಡುವ ಮೂಲಕ ಚಿತ್ರಮಂದಿರಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಗಣೇಶ ಥಿಯೇಟರ್ ನ ಗುತ್ತಿಗೆದಾರ ರಾಮರಾಜು ಅವರು, ಗಣೇಶ ಚಿತ್ರ ಮಂದಿರಕ್ಕೆ ಈಗ ಹೊಸ ರೂಪ ನೀಡಲಾಗಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ. 30 ಲಕ್ಷ ರು. ವೆಚ್ಚದಲ್ಲಿ ಚಿತ್ರಮಂದಿರವನ್ನು ನವೀಕರಿಸಲಾಗಿದೆ. ಡಾಲ್ಫಿ ಸೌಂಡ್ಸ್, ಪುಶ್‌ಬ್ಯಾಕ್ ಆಸನ ವ್ಯವಸ್ಥೆ, ಲೆಸರ್ ಪ್ರೊಜಕ್ಷನ್ ಇದೆ. ಕಳೆದ ಒಂದೂವರೆ ವರ್ಷದಿಂದ ನವೀಕರಣ ಕಾರ್ಯ ಮಾಡಲಾಗಿದ್ದು, ಕೆಲಸ ಸಂಪೂರ್ಣವಾಗಿದೆ. ಪರವಾನಗಿ ಬಂದ ಕೂಡಲೆ ದಸರಾ ದಿನ ಚಿತ್ರಮಂದಿರ ಆರಂಭಿಸಲಾಗುವುದು ಎಂದು ತಿಳಿಸಿದರು.