ಗಾಂಧಿ ಗ್ರಾಮ ಸ್ವರಾಜ್ಯ ಕಲ್ಪನೆ ಈಗ ಪ್ರಸ್ತುತ : ಗ್ರಾಮಗಳ ಪುನುರುತ್ಥಾನವಾಗದೇ ಭವಿಷ್ಯವಿಲ್ಲ

By Kannadaprabha News  |  First Published Oct 3, 2023, 7:19 AM IST

ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಗೆ ಇವತ್ತಿಗೆ ಹೆಚ್ಚು ಪ್ರಸ್ತುತವಾಗಿದೆ. ಗ್ರಾಮಗಳ ಪುನುರುತ್ಥಾನವಾಗದೇ ಭವಿಷ್ಯವಿಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಟಿ.ನರಸೀಪುರ ತಾಲೂಕು ಬೈರಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ.ಬಿ.ಪಿ.ಇಂದಿರಾ ತಿಳಿಸಿದರು.


  ಮೈಸೂರು :  ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆಗೆ ಇವತ್ತಿಗೆ ಹೆಚ್ಚು ಪ್ರಸ್ತುತವಾಗಿದೆ. ಗ್ರಾಮಗಳ ಪುನುರುತ್ಥಾನವಾಗದೇ ಭವಿಷ್ಯವಿಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಟಿ.ನರಸೀಪುರ ತಾಲೂಕು ಬೈರಾಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕಿ ಡಾ.ಬಿ.ಪಿ.ಇಂದಿರಾ ತಿಳಿಸಿದರು.

ಮೈಸೂರು ವಿಶ್ವ ವಿದ್ಯಾನಿಲಯದ ಅಧ್ಯಯನ ಕೇಂದ್ರ, ಜ್ಞಾನ ದೀಪ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ 115ನೇ ಗಾಂಧಿ ಜಯಂತಿ ಪ್ರಯುಕ್ತ ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಅಹಿಂಸಾ ದಿನಾಚರಣೆಯಲ್ಲಿ ಅವರು ಗಾಂಧೀಜಿ ಕನಸಿನ ಭಾರತ ಕುರಿತು ವಿಶೇಷ ಉಪನ್ಯಾಸ ನೀಡಿದರು.

Latest Videos

undefined

ಗಾಂಧೀಜಿ ಅವರಿಗೆ ಎರಡು ಕನಸುಗಳಿದ್ದವು. ಸ್ವತಂತ್ರ ಭಾರತ ಮತ್ತು ಭಾರತೀಯರು ಅನ್ಯಾಯ, ಶೋಷಣೆ, ಅಸಮಾನತೆ ಮತ್ತು ಅಸಮತೆಯಿಂದ ಬಿಡುಗಡೆಯ ಕನಸು ಕಂಡಿದ್ದರು. ಅವರ ಕನಸು ಈವರೆಗೂ ಈಡೇರಿಲ್ಲ ಎಂಬುದು ವಿಷಾದನಿಯ. ಅದನ್ನು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗಾಂಧಿಯ ಸ್ವರಾಜ್ಯವೆಂದರೆ ರೈತರು, ಅಂಗಹೀನರು, ಶ್ರಮಿಕರು ಒಳಗೊಂಡ ಎಲ್ಲರ ಅಭ್ಯುದಯ. ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ, ನೈತಿಕ ಸಾಮಾಜಿಕ ಗುರಿಯಿರಬೇಕು ಎಂದು ಪ್ರತಿಪಾದಿಸಿದ್ದರು. ಸ್ವರಾಜ್ಯ ಎಲ್ಲರನ್ನೂ ಒಳಗೊಳ್ಳುವ ಪಾಲಿಸಿ. ಪ್ರತಿ ಗ್ರಾಮ ಸ್ವಾವಲಂಬಿಯಾಗಬೇಕು. ಹಳ್ಳಿಗಳು ನಾಶವಾದರೆ ಭಾರತ ಕೂಡ ನಾಶವಾಗುತ್ತದೆ ಎಂದು ಗಾಂಧಿ ಎಚ್ಚರಿಸಿದ್ದರು. ಹೀಗಾಗಿ, ಗಾಂಧಿ ಯುಗದಿಂದ ಇವತ್ತಿನವರೆಗೆ ಪುನರ್ ಅವಲೋಕನ ಮಾಡಬೇಕು. ಗಾಂಧಿ ಆಶಯಗಳನ್ನು ಪುನರ್ ಪ್ರತಿಪಾದನೆ ಮಾಡಬೇಕಾದ ಅವಶ್ಯವಿದೆ ಎಂದರು.

ಸಾಮಾಜಿಕ ಅಸಮಾನತೆ ನಿವಾರಣೆಗೆ ಒತ್ತು ಕೊಟ್ಟಿದ್ದ ಗಾಂಧಿಯು ತಾರತಮ್ಯವಿಲ್ಲದ ಸಮ ಸಮಾಜದ ನಿರ್ಮಾಣದೊಂದಿಗೆ ಭವ್ಯ ಭಾರತದ ಕನಸು ಕಂಡಿದ್ದರು. ಅದಕ್ಕಾಗಿ ಸರ್ವರ ಉದಯ ಬಯಸುವ ಸರ್ವೋದಯ ಮಂತ್ರವನ್ನು ಜಪಿಸಿದ್ದರು. ಗಾಂಧಿ ಚಿಂತನೆಯಲ್ಲಿ ಶಿಕ್ಷಣ ಅಂದರೆ ಮಗುವಿಗೆ ಶ್ರಮದ ಮಹತ್ವ ಕಲಿಸುವುದಾಗಿತ್ತು. ಮಹಿಳಾ ಸಮಾನತೆ ಹರಿಕಾರರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಮಾಡಿ ನಾಯಕಿಯರನ್ನು ರೂಪಿಸಿದರು. ಆರೋಗ್ಯ ನೈರ್ಮಲ್ಯದ ವಿಷಯದಲ್ಲಿ ಗಾಂಧಿ ಮಹಾವೈದ್ಯ ಎಂದು ಅವರು ಬಣ್ಣಿಸಿದರು.

ಕೊಳ್ಳುಬಾಕ ಮಾರುಕಟ್ಟೆ ಸಂಸ್ಕೃತಿ ಯುಗವಿದು. ಖರೀದಿಸುವ ಹಪಾಹಪಿ ತುಂಬಾ ತೀವ್ರವಾಗಿದೆ. ಮೊಬೈಲ್ ಆಪ್ ಗಳಿಂದ ಮೋಸವಾಗುವವರ ಸಂಖ್ಯೆ ಹೆಚ್ಚಿದೆ. ಈಗ ಬೇಕಿಲ್ಲದ್ದನ್ನು ನಿರಾಕರಿಸುವ ಮನಸ್ಥಿತಿ ನಮ್ಮದಾಗಬೇಕು ಎಂದರು.

ಇದೇ ವೇಳೆ ಲಲಿತ ಕಲೆಗಳ ಕಾಲೇಜು ವಿದ್ಯಾರ್ಥಿನಿಯರು ಗಾಂಧಿ ಭಜನ್ ಹಾಡಿದರು. ಸ್ವಾತಂತ್ರ್ಯ ಹೋರಾಟಗಾರ ಡಾ.ಎಂ. ಸೋಮಶೇಖರಯ್ಯ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಗಾಂಧಿ ಭವನದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಜ್ಞಾನದೀಪ ಎಜುಕೇಷನಲ್ ಟ್ರಸ್ಟ್ ಖಜಾಂಚಿ ಎನ್. ಸಂತೋಷಕುಮಾರ್, ಪ್ರಾಂಶುಪಾಲ ಸಿ.ಆರ್. ಸಿದ್ಧಲಿಂಗಸ್ವಾಮಿ ಇದ್ದರು.

ದೇಶದಲ್ಲಿ ಆತಂಕವಾದಿಗಳು ವಿಪರೀತವಾಗಿದ್ದಾರೆ. ಇದರಿಂದ ಆತಂಕದಲ್ಲಿ ಬದುಕುವಂತಾಗಿದೆ. ಇಲ್ಲಿ ತಿಂದು ಉಂಡು ದ್ರೋಹ ಬಗೆಯುವುದು ಸರಿಯಲ್ಲ. ಶಿವಮೊಗ್ಗದಲ್ಲಿ ಮೆರವಣಿಗೆ ಹೋಗಲು ಸಹ ಕಷ್ಟದ ಪರಿಸ್ಥಿತಿ ಇದೆ. ವೈಷಮ್ಯ ಮರೆತು ಸಹೋದರ ಭಾವನೆಯಿಂದ ಬದುಕಬೇಕು.

- ಡಾ.ಎಂ. ಸೋಮಶೇಖರಯ್ಯ, ಸ್ವಾತಂತ್ರ್ಯ ಹೋರಾಟಗಾರರು

click me!