
ಬೆಂಗಳೂರು: ಮೆಜೆಸ್ಟಿಕ್ ನಿಲ್ದಾಣ ರಾಜಧಾನಿ ಬೆಂಗಳೂರಿನ (Bengaluru City) ನಗರದ ಹೃದಯದ ಭಾಗ. ಮೆಜೆಸ್ಟಿಕ್ ನಿಲ್ದಾಣದಿಂದ ನಿಮಗೆ ಬೆಂಗಳೂರಿನ ಮೂಲೆ ಮೂಲೆಗಳು ಬಸ್ ಸೌಲಭ್ಯ ಸಿಗುತ್ತದೆ. ಹಾಗೆಯೇ ಬೆಂಗಳೂರು ನಗರಕ್ಕೆ ಮೊದಲ ಬಾರಿಗೆ ಬರೋ ವ್ಯಕ್ತಿ ಇಲ್ಲಿಯ ಜನಸಾಗರ ನೋಡಿ ಒಂದು ಕ್ಷಣ ಆಶ್ಚರ್ಯಚಕಿತಗೊಳ್ಳುತ್ತಾನೆ. ಬಸ್ ಜೊತೆಯಲ್ಲಿಯೇ ನಿಮಗೆ ರೈಲು ನಿಲ್ದಾಣವೂ ಕೂಗಳತೆ ದೂರದಲ್ಲಿದೆ. ಇಲ್ಲಿಯ ಅಂಡರ್‌ಪಾಸ್ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ನಿಲ್ದಾಣವನ್ನು ಮೇಲ್ಸೇತುವೆ ಸಂಪರ್ಕಿಸುತ್ತದೆ.
ಈ ಎರಡು ಸ್ಥಳಗಳು ಸಾರ್ವಜನಿಕರಿಗೆ ಸಂಪರ್ಕ ಕೊಂಡಿಯಾದ್ರೆ, ವ್ಯಾಪಾರಿಗಳಿಗೆ ವ್ಯಾಪಾರದ ಸ್ಥಳ. ಸಂಜೆಯಾಗ್ತಿದ್ದಂತೆ ಈ ಎರಡು ಸ್ಥಳಗಳು ಸಾರ್ವಜನಿಕರಿಗೆ ಎಷ್ಟು ಸುರಕ್ಷಿತ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿರುತ್ತದೆ. ಅಂಡರ್‌ಪಾಸ್‌ನ ಒಂದು ಭಾಗದಲ್ಲಿ ಮಂಗಳಮುಖಿಯರು ಮತ್ತು ಒಂದಿಷ್ಟು ಮಹಿಳೆಯರ ಗುಂಪು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಮೇಲ್ಸೇತುವೆ ಮೇಲೆಯೂ ಇದೇ ರೀತಿಯ ಗುಂಪುಗಳು ಕಾಣಿಸಿಕೊಳ್ಳುತ್ತವೆ.
ಈ ರೀತಿ ಕಾಣಿಸಿಕೊಳ್ಳುವ ಮಹಿಳೆಯರು ಮತ್ತು ಕೆಲ ಮಂಗಳಮುಖಿಯರು ಈ ಭಾಗದಲ್ಲಿ ಓಡಾಡುವ ಪುರುಷ ಪ್ರಯಾಣಿಕರನ್ನು ಪೀಡಿಸುತ್ತಾರೆ. ಬಹಿರಂಗವಾಗಿಯೇ ವೇಶ್ಯಾವಟಿಕೆ ಇಲ್ಲಿ ನಡೆಯುತ್ತದೆ. ಒಂದು ವೇಳೆ ಇವರನ್ನು ಪ್ರಶ್ನಿಸಿದ್ರೆ ಗುಂಪು ಹಲ್ಲೆಗೆ ಮುಂದಾಗುತ್ತೆ ಎಂಬ ಆರೋಪಗಳಿದ್ದು, ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಅಂದ ಹಾಗೆ ಮೆಜೆಸ್ಟಿಕ್ ನಿಲ್ದಾಣದ ಅಂಡರ್‌ಪಾಸ್‌ಗೆ ಬೆಂಗಳೂರಿನ ರೆಡ್ ಲೈಟ್ ಏರಿಯಾ ಎಂಬ ಕೆಟ್ಟ ಹಣೆಪಟ್ಟಿಯೂ ಇದೆ.
ವಿಡಿಯೋಗಳು ವೈರಲ್ ಆದ ಸಂದರ್ಭದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಹಾಗೆಯೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಆದ್ರೆ ಒಂದಿಷ್ಟು ದಿನಗಳ ಬಳಿಕ ಮತ್ತೆ ಅ ಗುಂಪುಗಳು ಅಂಡರ್‌ಪಾಸ್ ಮತ್ತು ಮೇಲ್ಸೇತುವೆ ಭಾಗಗಳಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತದೆ. ರಾತ್ರಿಯ ಸಮಯದಲ್ಲೂ ಮೆಜೆಸ್ಟಿಕ್ ಪ್ರದೇಶವು ಅತ್ಯಂತ ಜನನಿಬಿಡವಾಗಿರುತ್ತದೆ. ಅಲ್ಲಿಗೆ ಯಾರು ಬಂದರೂ ಅಥವಾ ಎಂತಹ ಬದಲಾವಣೆಗಳನ್ನು ಮಾಡಲು ಬಯಸಿದರೂ, ಮೆಜೆಸ್ಟಿಕ್‌ನಲ್ಲಿ ಮಾತ್ರ ಏನೂ ಬದಲಾಗಿಲ್ಲ ಎಂದು ಅಮಿತ್ ಗೌಡ ಎಂಬವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಅಮಿತ್ ಗೌಡ ಅವರು ಮೆಜೆಸ್ಟಿಕ್ ನಿಲ್ದಾಣದ ಅಂಡರ್‌ಪಾಸ್, ಮೇಲ್ಸೇತುವೆ ಮತ್ತು ಖಾಸಗಿ ಬಸ್‌ಗಳ ನಿಲುಗಡೆ ಸ್ಥಳದಲ್ಲಿ ನಡೆಯುವ ಚಟುವಟಿಕೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಶೇರ್ ಮಾಡಿಕೊಂಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಬಯಲಾಗಿವೆ. ನೀವು ಎಲ್ಲಿಂದಲಾದರೂ ಬೆಂಗಳೂರಿಗೆ ಬಸ್ ಟಿಕೆಟ್ ಪಡೆದು ಬಂದರೂ ಅಂತಿಮವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನೇ ತಲುಪುತ್ತೀರಿ. ಆದರೆ, ಈ ಸಾರ್ವಜನಿಕ ಸ್ಥಳದಲ್ಲಿ ಯಾವೆಲ್ಲಾ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಅಮಿತ್ ಗೌಡ ಆಕ್ರೋಶ ಹೊರ ಹಾಕಿದ್ದಾರೆ.