ಗಣಪತಿ ಮೂರ್ತಿ ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಉರುಳಿ ಬಿದ್ದಿದ್ದು ಇದೇ ಸ್ಥಳದಲ್ಲಿ ಮಹಾ ಗಣಪತಿ ಹೋಮ ನೆರವೇರಿಸಲಾಗಿದೆ.
ಚನ್ನಗಿರಿ [ಸೆ.19]: ಸ್ಥಳೀಯ ಹಿಂದೂ ಏಕತಾ ಗಣಪತಿ ಸಮಿತಿ, ಸೆಪ್ಟೆಂಬರ್ 12ರಂದು ಏರ್ಪಡಿಸಿದ್ದ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಗಣಪತಿಮೂರ್ತಿ ಇದ್ದ ಟ್ರಾಕ್ಟರ್ ಕೊಂಡಿ ಕಳಚಿ ಬಿದ್ದು ಗಣಪತಿ ಮೂರ್ತಿ ಭಗ್ನ ಗೊಂಡಿದ್ದ ಹಿನ್ನಲೆ ಪಟ್ಟಣದ ಹೃದಯ ಭಾಗದ ಗಣಪತಿ ದೇವಾಲಯದಲ್ಲಿ ಸಮಿತಿಯಿಂದ ಮಹಾಗಣಪತಿ ಶಾಂತಿ ಹೋಮ ಶಾಸೊತ್ರೕಕ್ತವಾಗಿ ನಡೆಸಲಾಯಿತು.
ಶಾಂತಿ ಹೋಮದ ಪೂಜಾ ವಿಧಿ-ವಿಧಾನಗಳು ಬೆಳಗ್ಗೆ 7ಗಂಟೆಯಿಂದಲೇ ಆರಂಭಗೊಂಡಿದ್ದು, ಊರ ಮುಂದಿನ ಗಣಪತಿ ಹೊಂಡದಿಂದ ಗಂಗಾಪೂಜೆಯನ್ನು ಮಾಡಿಕೊಂಡು ಗಂಗೆಯನ್ನು ದೇವಾಲಯಕ್ಕೆ ತರಲಾಯಿತು. ದೇವಸ್ಥಾನದ ಆವರಣದಲ್ಲಿ ಸಾಂಕೇತಿಕವಾಗಿ ಮಣ್ಣಿನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಎಲ್ಲಾ ಸಮಾಜಗಳ ಭಕ್ತಾಧಿಗಳ ಸಮ್ಮುಖದಲ್ಲಿ ಶಾಂತಿ ಹೋಮ ಹಾಗೂ ಪೂರ್ಣಾಹುತಿ ನಂತರ ಮಹಾ ಮಂಗಳಾರತಿ ನೆರವೇರಿಸಲಾಯಿತು.
ನಂತರ ರಾಷ್ಟ್ರ ಶ್ರೇಯ ಪ್ರಾರ್ಥನೆ ಸಲ್ಲಿಸಿದರು.
ಗಣಪತಿಮೂರ್ತಿ ಮೆರವಣಿಗೆಯ ಟ್ರಾಕ್ಟರ್ ಬಿದ್ದ ಸ್ಥಳವಾದ ನ್ಯಾಯಾಲಯ ಮತ್ತು ಪೊಲೀಸ್ ಠಾಣೆ ಮುಂಭಾಗದ ವೃತ್ತದಲ್ಲಿ ಪೂಜೆ ಸಲ್ಲಿಸಿ ಬಾಳೆ ಕಂದನ್ನು ಛೇದಿಸಿ ಕುಂಬಳಕಾಯಿ ಒಡೆದು ಶಾಂತಿ ಪೂಜೆಯನ್ನು ಮಾಡಲಾಯಿತು. ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಸಂಜೆ ಊರ ಮುಂದಿನ ಗಣಪತಿ ಹೊಂಡದಲ್ಲಿ ಗಣಪತಿಮೂರ್ತಿ ವಿಸರ್ಜಿಸಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಂದೂ ಏಕತಾ ಗಣಪತಿ ಸಮಿತಿಯ ಪ್ರಮುಖರಾದ ಸಿ.ಎಚ್.ಶ್ರೀನಿವಾಸ್, ಸಿ.ನಾಗರಾಜ್, ಕಾಫಿಪುಡಿ ಶಿವಾಜಿರಾವ್, ಕೆ.ಆರ್. ಮಂಜುನಾಥ್, ಎಚ್.ಧರಣೇಂದ್ರ, ಜಿ.ನಿಂಗಪ್ಪ, ದೀಪು, ಪಿ.ಆರ್.ಮಂಜುನಾಥ್, ನಟರಾಜ್, ಎ.ಸಿ.ಚಂದ್ರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ಶಾಂತಿ ಹೋಮದ ಪೂಜಾ ಕೈಂಕರ್ಯ ದೇವಾಲಯದ ಅರ್ಚಕ ಕಾಶಿನಾಥ ಜೋಯ್ಸ್ ಮತ್ತು ವಿಪ್ರ ಸಮಾಜ ಬಾಂಧವರು ನಡೆಸಿಕೊಟ್ಟರು.