ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ನೆಲವೆಲ್ಲ ಸಪಾಟಾದಂತೆ ಎಲ್ಲೆಲ್ಲೂ ಬರೀ ಕೆಂಪು ಕೆಂಪು ನೀರು. ಮಳೆಯ ವಿರುದ್ಧ ಈಜಲು ಹೊರಟ ನೆಲದ ತೋಳು ಕುಸಿದಿದೆ. ಇಂಥ ಜಲಪ್ರಳಯದ ಹೊತ್ತಲ್ಲೂ ಮತ್ತೊಬ್ಬರಿಗೆ ನೆರವಾಗುತ್ತಾ, ಮಳೆಯನ್ನೂ ಲೆಕ್ಕಿಸದೇ ಜೀವನ್ಮರಣದ ನಡುವೆ ಹೋರಾಡುತ್ತಾ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಜಾನುವಾರುಗಳನ್ನು ರಕ್ಷಿಸುತ್ತಾ, ಮಳೆಯಲ್ಲಿ ನಡುಗುವ ಮಕ್ಕಳ ನೆತ್ತಿಯೊರೆಸುತ್ತಾ ಮಾತೃರೂಪಿ ಕೈಯೊಂದು ಎಲ್ಲವನ್ನೂ ಸಲಹುತ್ತಿದೆ.
ರಾಜ್‌ಕುಮಾರ್ ಹೊಳೆ ಆ ಲೂರು
ನಮ್ಮೂರು ಹೊಳೆ ಆಲೂರು ಗ್ರಾಮದಲ್ಲಿ ಸದ್ಯಕ್ಕೀಗ ಹೊಳೆಯಷ್ಟೇ ಇದೆ, ಆಲೂರು ಮುಳುಗಿದೆ. ನಮ್ಮೂರಿನಲ್ಲಿರೋದು ಎಚ್ಚರೇಶ್ವರ ದೇವಸ್ಥಾನ. ಊರಿನ ಜನ ಯಾವುದೇ ಕೆಲಸಕ್ಕೆ ಹೋಗಬೇಕಾದರೂ ‘ಎಚ್ಚರಲೇ ತಮ್ಮಾ ಎಚ್ಚರ’ ಅಂತ ಊರಿನ ಜನ ಕಾಳಜಿ ತೋರೋದು ಸಾಮಾನ್ಯ. ಈಗ ಎಚ್ಚರೇಶ್ವರ ದೇವಸ್ಥಾನ ನೀರಲ್ಲಿ ಮುಳುಗಿದೆ. ಎಚ್ಚರಲೇ ತಮ್ಮಾ ಎನ್ನುತ್ತಾ ಪ್ರೀತಿ ತೋರುವ ಜನ ತಲೆ ಮೇಲೆ ಕೈ ಹೊತ್ತು ದಿಕ್ಕೆಟ್ಟು ಕೂತಿದ್ದಾರೆ.
'ಮಳೆ ನೀಡಿದ ಶಾಪ ನಮ್ಮೂರು ಈಗ ದ್ವೀಪ'!
ಮಲಪ್ರಭಾ ನದಿಯ ದಂಡೆಯ ಮೇಲಿರುವ ಪುಟ್ಟ ಹಳ್ಳಿಯಿದು. ಆಲೂರು ವೆಂಕಟರಾಯರು, ರಂ.ಶ್ರೀ. ಮುಗಳಿ ಅವರು ಬಾಳಿ ಬದುಕಿದ ಊರು. ಇಲ್ಲಿ ಸುಮಾರು 10 ಸಾವಿರದಷ್ಟು ಜನ ಸಂಖ್ಯೆಯಿದೆ. ಮೂರ್ನಾಲ್ಕು ಕಿಲೋಮೀಟರ್ ವಿಸ್ತಾರಕ್ಕೆ ಗ್ರಾಮ ಹಬ್ಬಿದೆ. ಕಾರ್ಪೆಂಟರಿಗೆ ಹೆಸರಾದ ಊರು. ವಿಧಾನಸೌಧದ ಮುಖ್ಯದ್ವಾರದ ನಿರ್ಮಾಣ ಮಾಡಿದವರಲ್ಲಿ ನಮ್ಮೂರಿನ ಕಾರ್ಪೆಂಟರ್‌ಗಳೂ ಇದ್ದಾರೆ. ಆದರೆ ಇವತ್ತು ಪ್ರವಾಹ ಅವರ ಮನೆಯನ್ನೇ ನುಂಗಿ ಹಾಕಿದೆ.
ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಕೆಳಮನೆಯಲ್ಲಿ ನೀರೋ ನೀರು!
ಒಂದು ಕಡೆ ಮಲಪ್ರಭೆ, ಇನ್ನೊಂದೆಡೆ ಇದರದ್ದೇ ಕವಲು ಬೆಣ್ಣಿ ಹಳ್ಳ ‘ವಿ’ ಶೇಪ್‌ನಲ್ಲಿ ನಮ್ಮೂರನ್ನು ಸುತ್ತುವರಿಯುತ್ತವೆ. ಸದ್ಯಕ್ಕೀಗ ನಮ್ಮೂರಿನ ರಸ್ತೆಗಳಲ್ಲಿ ಐದಾರು ಅಡಿ ಎತ್ತರಕ್ಕೆ ನೀರು ಹರಿಯುತ್ತಿದೆ. ನಮ್ಮೂರಿನ ರೈಲ್ವೇ ಸ್ಟೇಶನ್ ತುಸು ಎತ್ತರದಲ್ಲಿರುವುದರಿಂದ ಅಲ್ಲೇ ಗಂಜೀಕೇಂದ್ರಗಳನ್ನು ತೆರೆದಿದ್ದಾರೆ. ನಮ್ಮೂರಿನ ಜನರೆಲ್ಲ ಅಲ್ಲಿ ಸೇರಿದ್ದಾರೆ. ನಮ್ಮ ಮನೆ ತುಸು ಎತ್ತರದಲ್ಲಿದೆ. ಹಾಗಾಗಿ ಕೊನೆಯ ಹಂತದವರೆಗೂ ಮನೆಯಲ್ಲಿ ಅಣ್ಣ ಅತ್ತಿಗೆ ಇದ್ದರು. ಆದರೆ ಊರಿಗೆ ಊರೇ ಖಾಲಿಯಾದ ಮೇಲೆ ಅವರೂ ರೈಲು ಹತ್ತಿ ಸಂಬಂಧಿಕರ ಮನೆ ಸೇರಿದರು. ನಮ್ಮೂರಲ್ಲಿ ಹತ್ತು ವರ್ಷಗಳ ಕೆಳಗೆ ಇಂಥ ಪರಿಸ್ಥಿತಿ ಬಂದಿತ್ತು. ಆದರೆ ಅದರ ತೀವ್ರತೆ ಈ ಪ್ರಮಾಣದಲ್ಲಿ ಇರಲಿಲ್ಲ.
ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ ಪ್ರವಾಹದ ಅಪಾಯ ತಪ್ಪುತ್ತಿತ್ತು!
ಒಣ ಭೂಮಿ, ಕೃಷಿಯೇ ಪ್ರಧಾನ: ನದೀ ದಂಡೆಯಲ್ಲೇ ಇರುವ ಊರಾದರೂ ನಮ್ಮದು ಒಣ ಭೂಮಿ. ಕಪ್ಪು ಮಣ್ಣು. ಜನ ಮಳೆಯಾಶ್ರಿತ ಕೃಷಿ ಮಾಡುತ್ತಾರೆ. ಜೋಳ, ಶೇಂಗಾ ಮೊದಲಾದ ಕೃಷಿ ಮಾಡುತ್ತಾರೆ. ಈ ಬಾರಿ ಮುಂಗಾರು ನಿಗದಿತ ಸಮಯದಲ್ಲಿ ಬರಲೇ ಇಲ್ಲ. ಜನ ನಿರಾಸೆಯಲ್ಲಿದ್ದರು. ಕೆಲವು ದಿನಗಳ ಹಿಂದೆ ಮಂಜು, ಹನಿ ಹನಿ ಮಳೆ ಬರಲಾರಂಭಿಸಿದ್ದು ಕಂಡು ಭರವಸೆ ಹುಟ್ಟಿತ್ತು. ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಈಗ ಆಕಾಶವೇ ಕಳಚಿ ತಲೆಮೇಲೆ ಬಿದ್ದಿದೆ. ಸದ್ಯಕ್ಕೀಗ ಬದುಕುಳಿದರೆ ಸಾಕು ಎಂಬ ಸ್ಥಿತಿ ಇದೆ.