
ಗದಗ: ಪ್ರತಿಭಟನೆ, ಮನವಿ ಪತ್ರ ಹಾಗೂ ಸಭೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಸೇರಿದಂತೆ ಹಲವಾರು ರೈತರ ಒತ್ತಡಕ್ಕೆ ಮಣಿದು ಕೊನೆಗೂ ಐತಿಹಾಸಿಕ ಲಕ್ಕುಂಡಿ ಕೆರೆಗಳನ್ನು ತುಂಬಿಸಲು ಕಾಲುವೆ ಮೂಲಕ ತುಂಗಾಭದ್ರಾ ನೀರು ಹರಿಸುವ ಕಾರ್ಯ ಕಳೆದ ಎರಡು ದಿನಗಳಿಂದ ಆರಂಭವಾಗಿದೆ.
ಗ್ರಾಮದ ಎರಡು ಪ್ರಮುಖ ಕೆರೆಗಳಾದ ಹಾಲಗೊಂಡ ಬಸವೇಶ್ವರ ಹಾಗೂ ದಂಡಿನ ದುರ್ಗಾದೇವಿ ಕೆರೆಗೆ ತುಂಗಾಭದ್ರಾ ಏತ ನೀರಾವರಿ ಯೋಜನೆಯಿಂದ ಕಾಲುವೆ ಮೂಲಕ ನೀರು ಹರಿಯುತ್ತಿದೆ. ಈ ಕಾಲುವೆಯಿಂದ ಎರಡು ಕೆರೆಗಳಿಗೆ ಅಳವಡಿಸಿರುವ ಪೈಪ್‌ಲೈನ್ ಮೂಲಕ ಕೆರೆಗಳಿಗೆ ನೀರು ಹರಿಯುತ್ತಿರುವುದು ರೈತರಲ್ಲಿ ಸಂತಸವನ್ನುಂಟು ಮಾಡಿದೆ.
ಜಾನುವಾರುಗಳಿಗೆ ಕಾಲುವೆ ನೀರು ಸಹಾಯ
ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಗ್ರಾಮದ ಬಹುತೇಕ ಕೆರೆ ಹಾಗೂ ಭಾವಿಗಳು ಬತ್ತುತ್ತಿದ್ದವು. ಈಗ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ವೃದ್ಧಿಸಲಿದೆ. ಅಧಿಕವಾಗಿ ಕೆರೆ ಸಮೀಪದ ಭಾವಿಗಳು ಹಾಗೂ ಕೊಳವೆ ಭಾವಿಗಳು ತುಂಬಲಿವೆ. ಇನ್ನೂ ಹಳ್ಳ, ಕೊಳ್ಳಗಳಲ್ಲಿ ಮೇಯಲಿಕ್ಕೆ ಸಂಚರಿಸುತ್ತಿರುವ ಜಾನುವಾರುಗಳಿಗೆ ಕಾಲುವೆ ನೀರು ಸಹಾಯಕವಾಗಲಿದೆ.
ದುರ್ಗಾದೇವಿ ಕೆರೆಯ ಸುತ್ತಲೂ ಬೃಹತ್ ಆಕಾರವಾಗಿ ಬೆಳೆದು ನಿಂತಿರುವ ಮುಳ್ಳು ಕಂಟಿಗಳನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಒತ್ತಾಯಿಸಿದ್ದಾರೆ.