
ಗದಗ (ಮಾ.12): ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ, ಗದಗದ ಜಗದ್ಗುರು ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಅವರು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಂತ ವಿಶಿಷ್ಟ ಹಾಗೂ ಸಮಯೋಚಿತ ಸಲಹೆಗಳನ್ನು ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಉಳಿತಾಯಕ್ಕಾಗಿ ಜನರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.
ನಗರದ ತೋಂಟದಾರ್ಯ ಮಠದಲ್ಲಿ ಮಾತನಾಡಿದ ಶ್ರೀಗಳು, ‘ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಗ್ಯಾಸ್ ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಗ್ಯಾಸ್ ಉಳಿತಾಯ ಮಾಡಲು ಜನರು ಬೇಯಿಸಿದ ಆಹಾರದ ಸೇವನೆಯನ್ನು ತುಸು ಕಡಿಮೆ ಮಾಡಬೇಕು. ಬದಲಾಗಿ, ಆರೋಗ್ಯಕ್ಕೂ ಉತ್ತಮವಾಗಿರುವ ನೆನೆಸಿದ ಕಾಳುಗಳು ಹಾಗೂ ಹಸಿ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಇದರಿಂದ ಇಂಧನ ಉಳಿತಾಯವಾಗುವುದಲ್ಲದೆ, ಆರೋಗ್ಯವೂ ವೃದ್ಧಿಸುತ್ತದೆ’ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಸಾವಿರಾರು ಮಠಗಳು ನಿತ್ಯವೂ ದಾಸೋಹ (ಅನ್ನದಾನ) ನಡೆಸುತ್ತವೆ. ಆದರೆ ಇಂಧನ ಮತ್ತು ಗ್ಯಾಸ್ ಬೆಲೆ ಏರಿಕೆ ಹಾಗೂ ಕೊರತೆಯಿಂದಾಗಿ ಈ ದಾಸೋಹ ವ್ಯವಸ್ಥೆಗೂ ತುಸು ವ್ಯತ್ಯಯ ಉಂಟಾಗುತ್ತಿದೆ. ಇದನ್ನು ರಾಷ್ಟ್ರದ ಸಮಸ್ಯೆ ಎಂದು ಪರಿಗಣಿಸಿ ಪ್ರತಿಯೊಬ್ಬ ನಾಗರಿಕನೂ ಇಂಧನ ಉಳಿತಾಯಕ್ಕೆ ಕೈಜೋಡಿಸಬೇಕು ಎಂದು ಶ್ರೀಗಳು ಕರೆ ನೀಡಿದರು.
ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ಬಗ್ಗೆ ಎಚ್ಚರಿಸಿದ ಶ್ರೀಗಳು, ‘ಜನರು ಅನಗತ್ಯವಾಗಿ ವಾಹನಗಳನ್ನು ತೆಗೆದುಕೊಂಡು ಓಡಾಡುವುದನ್ನು ನಿಲ್ಲಿಸಬೇಕು. ಅತ್ಯಂತ ಅವಶ್ಯಕತೆ ಇದ್ದಾಗ ಮಾತ್ರ ವಾಹನಗಳನ್ನು ಬಳಸಬೇಕು. ಸಣ್ಣಪುಟ್ಟ ಕೆಲಸಗಳಿಗೆ ನಡಿಗೆ ಅಥವಾ ಸೈಕಲ್ ಬಳಸುವುದು ಉತ್ತಮ. ನಾವೆಲ್ಲಾ ಭಾರತೀಯರು ಒಟ್ಟಾಗಿ ಈ ಸಮಸ್ಯೆಯನ್ನು ಅರಿತು ಮಿತವ್ಯಯ ಪಾಲಿಸಿದರೆ ಮಾತ್ರ ಈ ಸಂಕಷ್ಟದಿಂದ ಪಾರಾಗಲು ಸಾಧ್ಯ’ ಎಂದರು.
ಇದೇ ಸಂದರ್ಭದಲ್ಲಿ ಜಾಗತಿಕ ರಾಜಕೀಯದ ಕುರಿತು ಮಾತನಾಡಿದ ಸಿದ್ಧರಾಮ ಶ್ರೀಗಳು, "ಅಮೆರಿಕದಂತಹ ರಾಷ್ಟ್ರಗಳು ಇತರ ದೇಶಗಳ ಮೇಲೆ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಿರುವುದು ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಗಳು ಜಗತ್ತಿಗೆ ಮಾರಕವಾಗಿವೆ. ಯುದ್ಧದಿಂದ ಯಾರಿಗೂ ಪ್ರಯೋಜನವಿಲ್ಲ, ಕೇವಲ ವಿನಾಶ ಮಾತ್ರ ಸಾಧ್ಯ. ಕೂಡಲೇ ವಿಶ್ವದ ನಾಯಕರು ಮಾತುಕತೆಯ ಮೂಲಕ ಯುದ್ಧಕ್ಕೆ ವಿರಾಮ ಹಾಡಬೇಕು. ಭಾರತದ ರಾಜಕೀಯ ನಾಯಕರೂ ಸಹ ಈ ಇಂಧನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಬೇಕು" ಎಂದು ಒತ್ತಿ ಹೇಳಿದರು.
ಗದಗ ಶ್ರೀಗಳ ಈ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಪರಿಸರ ಪ್ರೇಮಿಗಳು ಮತ್ತು ಆರ್ಥಿಕ ತಜ್ಞರು ಶ್ರೀಗಳ ಈ 'ಮಿತವ್ಯಯದ ಮಂತ್ರ'ವನ್ನು ಸ್ವಾಗತಿಸಿದ್ದಾರೆ.