
ಬೆಂಗಳೂರು: ನಗರದಲ್ಲಿ ವಯೋವೃದ್ಧ ದಂಪತಿಯನ್ನು ವಂಚಿಸಿ ಮನೆ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಕೆಲಸ ಮಾಡುತ್ತಿದ್ದ ಧನಲಕ್ಷ್ಮಿ ಎಂಬ ಮಹಿಳೆ ವೃದ್ಧ ದಂಪತಿಯ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ಸುಮಾರು ಒಂದು ವರ್ಷದಿಂದ ಹಣ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣವನ್ನು ತನಿಖೆ ನಡೆಸಿದ ಪುಲಕೇಶಿ ನಗರದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಫ್ರೇಜರ್ ಟೌನ್ ಪ್ರದೇಶದಲ್ಲಿ ವಾಸವಿದ್ದ ವಯೋವೃದ್ಧ ದಂಪತಿ ತಮ್ಮ ಮನೆಯ ಕೆಲಸಗಳಿಗೆ ಧನಲಕ್ಷ್ಮಿ ಎಂಬ ಮಹಿಳೆಯನ್ನು ನೇಮಿಸಿಕೊಂಡಿದ್ದರು. ಮನೆ ನಿರ್ವಹಣೆಗೆ ಬೇಕಾದ ಖರ್ಚುಗಳನ್ನು ಪೂರೈಸಲು ದಂಪತಿ ಪ್ರತಿ ತಿಂಗಳು ಕೂಡ ಬ್ಯಾಂಕ್‌ಗೆ ತೆರಳಿ ಹಣವನ್ನು ಡ್ರಾ ಮಾಡುತ್ತಿದ್ದರು. ಈ ವೇಳೆ ಧನಲಕ್ಷ್ಮಿಯನ್ನೂ ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು.
ಬ್ಯಾಂಕ್‌ನಿಂದ ತಂದ ಹಣವನ್ನು ದಂಪತಿ ಮನೆಯಲ್ಲಿ ಎಲ್ಲಿಟ್ಟುಕೊಳ್ಳುತ್ತಾರೆ ಎಂಬುದನ್ನು ಧನಲಕ್ಷ್ಮಿ ಗಮನಿಸಿದ್ದಳು. ಈ ಮಾಹಿತಿ ಆಧಾರವಾಗಿ ಆಕೆ ನಿಧಾನವಾಗಿ ಹಣ ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡ ತೊಡಗಿದ್ದಳು. ಹೀಗೆ ಆಕೆ ಸುಮಾರು ಒಂದು ವರ್ಷದ ಅವಧಿಯಲ್ಲಿ 54 ಗ್ರಾಂ ಚಿನ್ನಾಭರಣ ಮತ್ತು ಸುಮಾರು 8 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿದ್ದಾಳೆ.
ದಂಪತಿಯ ಮನೆಯಲ್ಲಿ ಹಣ ಮತ್ತು ಚಿನ್ನಾಭರಣ ಕಾಣೆಯಾಗುತ್ತಿರುವುದನ್ನು ಗಮನಿಸಿದ ಅವರ ಅಳಿಯ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರು ಈ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ವಿಚಾರಣೆ ವೇಳೆ ಮನೆ ಕೆಲಸ ಮಾಡುತ್ತಿದ್ದ ಧನಲಕ್ಷ್ಮಿಯೇ ಕಳ್ಳತನ ನಡೆಸಿರುವುದು ಬಹಿರಂಗವಾಗಿದೆ. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ, ಆಕೆಯಿಂದ 54 ಗ್ರಾಂ ಚಿನ್ನಾಭರಣ ಹಾಗೂ 8 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮನೆ ಕೆಲಸದಾಳುವನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಆರೋಪಿಯಿಂದ 4 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮನೆ ಮಾಲೀಕರಿಗೆ ಗೊತ್ತಾಗದಂತೆ ಆರೋಪಿ ಕಳವು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.