ಮಳೆಗಾಲದಲ್ಲೇ ಬರಿದಾಗುತ್ತಿದೆ ಗದಗಿನ ಐತಿಹಾಸಿಕ ಭೀಷ್ಮ ಕೆರೆ; ತುಂಗಭದ್ರಾ ನದಿ ತುಂಬಿದ್ದರೂ ನೀರಿನ ದಾಹ ನೀಗುತ್ತಿಲ್ಲ

Published : Sep 17, 2026, 09:34 AM IST
Gadag Bheeshma kere

ಸಾರಾಂಶ

ಗದಗ ನಗರದ ಐತಿಹಾಸಿಕ ಭೀಷ್ಮ ಕೆರೆಯು ಮಳೆಗಾಲದಲ್ಲಿಯೇ ಬರಿದಾಗುವ ಆತಂಕ ಎದುರಾಗಿದೆ. ಅನುದಾನದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರೆತ್ತುವ ಮೋಟರ್‌ಗಳು ಕೆಟ್ಟು ನಿಂತಿವೆ. ಇದರಿಂದಾಗಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿದ್ದರೂ ಕೆರೆಗೆ ನೀರು ಹರಿಯದೆ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ವರದಿ-ಶಿವಕುಮಾರ ಕುಷ್ಟಗಿ

ಗದಗ (ಸೆ.17): ಗದಗ ನಗರದ ಐತಿಹಾಸಿಕ ಭೀಷ್ಮ ಕೆರೆ ಮಳೆಗಾಲದಲ್ಲಿಯೇ ಬರಿದಾಗುವ ಆತಂಕ ಎದುರಾಗಿದೆ. 0.12 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕೆರೆಗೆ ನದಿ ಪಾತ್ರದಿಂದ ನೀರು ಹರಿಸಿ ತುಂಬಿಸುವ ಮಹತ್ವಾಕಾಂಕ್ಷೆಯ ವ್ಯವಸ್ಥೆ ಇದ್ದರೂ, ಅದನ್ನು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ ನೀರೆತ್ತುವ ಜಾಕ್‌ ವೆಲ್‌ ಗಳ ಬೃಹತ್ ಮೋಟರ್‌ಗಳು ಒಂದೊಂದಾಗಿ ಸ್ಥಗಿತಗೊಂಡಿವೆ. ಪರಿಣಾಮ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.

ಮೋಟರ್‌ಗಳ ದುರಸ್ತಿಗೆ ಅಗತ್ಯವಿರುವ ಹಣ ಇಲ್ಲ ಎನ್ನುವ ಕಾರಣ ಮುಂದಿಟ್ಟುಕೊಂಡು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸರ್ಕಾರದ ಮಾನವನ್ನೇ ಹರಾಜು ಮಾಡುತ್ತಿದ್ದಾರೆ.

ನೀರಿನ ಹರಿವು ಕುಂಠಿತ:

ಯೋಜನೆ ರೂಪಿಸುವ ವೇಳೆಯಲ್ಲಿ ನಿರ್ಮಿಸಲಾಗಿರುವ ನದಿಪಾತ್ರದ ಜಾಕ್ ವೆಲ್, ಕಲಕೇರಿ ಜಾಕ್ ವೆಲ್ ಹಾಗೂ ಚುರ್ಚಿಹಾಳ ಜಾಕ್‌ವೆಲ್‌ನಲ್ಲಿ ಒಟ್ಟು 22 ಮೋಟರ್‌ಗಳಿವೆ. ಅದರಲ್ಲಿ ಸದ್ಯ 6 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರ ಪರಿಣಾಮ ನದಿಯಿಂದ ನೀರು ಎತ್ತಿ ಭೀಷ್ಮ ಕೆರೆಗೆ ತಲುಪಿಸುವ ಸಂಪೂರ್ಣ ಸರಪಳಿಯಲ್ಲೇ ನೀರಿನ ಹರಿವು ಕುಂಠಿತವಾಗಿದೆ.

6ರಿಂದ 7 ಗಂಟೆ ಮಾತ್ರ ಮೋಟರ್‌ ಚಾಲು:

ನದಿ ಪಾತ್ರದಿಂದ ಲಿಫ್ಟ್ ವ್ಯವಸ್ಥೆ ಮೂಲಕ ನೀರು ಹರಿಸಿದರೂ, ಚುರ್ಚಿಹಾಳ ಲಿಫ್ಟ್‌ವರೆಗೆ ನೀರು ತಲುಪಿ ಅಲ್ಲಿಂದ ಗದಗದ ಭೀಷ್ಮ ಕೆರೆಗೆ ಬರಲು ಅಂದಾಜು 12 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಪ್ರಸ್ತುತ ಸೀಸನ್‌ನಲ್ಲಿ ಮೋಟರ್‌ಗಳನ್ನು ದಿನಕ್ಕೆ ಕೇವಲ 6ರಿಂದ 7 ಗಂಟೆಗಳಷ್ಟು ಮಾತ್ರ ಚಾಲನೆ ಮಾಡಲಾಗುತ್ತಿದೆ. ಒಮ್ಮೆ ಮೋಟರ್‌ಗಳನ್ನು ಸ್ಥಗಿತಗೊಳಿಸಿದರೆ, ಪೈಪ್‌ ಲೈನ್‌ನಲ್ಲಿ ನೀರು ಹಿಂದಕ್ಕೆ ಹರಿಯದಂತೆ ತಡೆಯಲು ಅಗತ್ಯವಿರುವ ನಾನ್ ರಿಟರ್ನ್ ವ್ಯವಸ್ಥೆಯಲ್ಲಿನ ಸಮಸ್ಯೆಯೂ ಗಂಭೀರವಾಗಿದ್ದು ನಾಲ್ಕೈದು ಗಂಟೆ ಪಂಪ್ ಆದ ನಂತರ ನೀರು ಮರಳಿ ಹೋಗುತ್ತಿದೆ, ಹಾಗಾಗಿ ಈ ವರ್ಷ ಭೀಷ್ಮಕೆರೆಗೆ ನೀರು ಹರಿಸುವುದು ಕಷ್ಟ ಸಾಧ್ಯವಾಗಿದೆ.

ಲಿಫ್ಟ್ ವ್ಯವಸ್ಥೆಯಲ್ಲಿ 3500 ಎಚ್‌ಪಿ ಬೃಹತ್ ಮೋಟಾರ್‌ಗಳನ್ನು ಅಳವಡಿಸಲಾಗಿದ್ದು ಅವುಗಳ ನಿರ್ವಹಣೆ ಕೂಡಾ ಇಲ್ಲದೇ ಇರುವುದರಿಂದಾಗಿ ಅವೆಲ್ಲಾ ದುರಸ್ತಿಯಿಂದಾಗಿ ಸ್ಥಗಿತಗೊಂಡಿವೆ. ಅವುಗಳನ್ನು ದುರಸ್ತಿ ಮಾಡಲು ಈವರೆಗೆ ಸಾಧ್ಯವಾಗಿಲ್ಲ, ದೂರದ ಪೂನಾ, ಮುಂಬೈನಿಂದಲೇ ತಜ್ಞರು ಬರಬೇಕಿದೆ. ಈಗಾಗಲೇ ನಿರ್ವಹಣೆಗೆ ನೀಡಲಾಗಿದ್ದ ಗುತ್ತಿಗೆ ಅವಧಿ ಮುಗಿದು ಹೋಗಿದ್ದು, ಹೊಸದಾಗಿ ನಿರ್ವಹಣೆ ಮಾಡಬೇಕಾದಲ್ಲಿ ಕೋಟ್ಯಾಂತರ ರು. ಬೇಕಿದೆ, ಆದರೆ ಇಲಾಖೆ ಮೂಲಗಳ ಮಾಹಿತಿ ಆಧಾರದಲ್ಲಿ ಅನುದಾನದ ಕೊರತೆಯಿಂದ ಹೀಗಾಗುತ್ತಿದೆ ಎನ್ನಲಾಗುತ್ತಿದೆ.

ಜನರಲ್ಲಿ ಆತಂಕ:

ಮಳೆಗಾಲದಲ್ಲಿಯೇ ಭೀಷ್ಮ ಕೆರೆಯ ನೀರಿನ ಮಟ್ಟ ಕುಸಿಯುತ್ತಿರುವುದು ಗದಗ-ಬೆಟಗೇರಿ ಅವಳಿ ನಗರದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ. ಕೆರೆ ಭರ್ತಿಯಾಗಿದ್ದರೆ ಅಂತರ್ಜಲ ಹೆಚ್ಚಳವಾಗಿ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗುತ್ತದೆ. ನೀರಾವರಿ ಇಲಾಖೆ ಅಧಿಕಾರಿಗಳು ಜೂನ್ ತಿಂಗಳಲ್ಲಿ ತುಂಗಭದ್ರಾ ನದಿಯಲ್ಲಿ 1 ಲಕ್ಷ ಕ್ಯೂಸೆಕ್ಸ್ ಒಳಹರಿವು ಇದ್ದಾಗಲೇ ಕೆರೆಗಳನ್ನು ಭರ್ತಿ ಮಾಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಪ್ರಸ್ತುತ ಒಳಹರಿವು ಕೇವಲ 1500 ಕ್ಯೂಸೆಕ್ಸ್ ಮಾತ್ರ ಇದೆ.

ಈ ಕುರಿತು ಈಗಾಗಲೇ ನಿಗಮದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಕೆಲವು ಟೆಂಡರ್ ಹಂತದಲ್ಲಿವೆ. ಇನ್ನು ಕೆಲವು ಪ್ರಸ್ತಾವನೆ ಹಂತದಲ್ಲಿವೆ ಎನ್ನುತ್ತಾರೆ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಇಇ ಶಿವಮೂರ್ತಿ.

ನೀರಿದ್ದರೂ ನೀಗದ ದಾಹ

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ನೀರಿದ್ದರೂ, ರೈತರ ಹೊಲಗಳಿಗೆ ನೀರು ತಲುಪಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎನ್ನುವುದು ರೈತರ ಆರೋಪವಾಗಿದೆ. ರಿಪೇರಿಯಾಗದ ನೀರೆತ್ತುವ ಮೋಟರ್‌ಗಳು, ದುರಸ್ತಿಯನ್ನೇ ಕಾಣದ ಕಾಲುವೆಗಳು, ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಹೀಗೆ ಯೋಜನೆಗೆ ನಿರ್ಲಕ್ಷ್ಯದ ಬರ ಕಾಡುತ್ತಿದೆ. ಬರಗಾಲದಂತಹ ವಿಷಮ ಪರಿಸ್ಥಿತಿಯಲ್ಲೂ ಅನುದಾನವಿಲ್ಲ ಎಂಬ ನೆಪ, ನೀರು ಇದ್ದರೂ ಜನರು ದಾಹದಿಂದ ಬಳಲುವುದೇಕೆ? ಈ ವೈಫಲ್ಯಕ್ಕೆ ಹೊಣೆ ಯಾರು? ಸಿಂಗಟಾಲೂರು ಯೋಜನೆಯ ಒಳನೋಟದ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಕನ್ನಡಪ್ರಭ ಇಂದಿನಿಂದ ಸರಣಿ ವರದಿಗಳನ್ನು ಆರಂಭಿಸುತ್ತಿದೆ.

PREV
Read more Articles on
click me!

Recommended Stories

ಲೋಕಸಭೆಗೆ ಸ್ಪರ್ಧಿಸಲ್ಲ, ವಿಧಾನಸಭೆಗೆ ರೆಡಿ; ಜಿ.ಎಂ.ಸಿದ್ದೇಶ್ವರ ಖಡಕ್‌ ಸಂದೇಶ
'6 ತಿಂಗಳಲ್ಲಿ ಕೆಲಸ ಮಾಡಿ ಇಲ್ಲದಿದ್ರೆ..' ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಹೈಕಮಾಂಡ್ ನೀಡಿದ ಎಚ್ಚರಿಕೆ ಏನು?