
ಗದಗ: ಗದಗ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಅವರು ರೈತನ ಜೊತೆ ಮಾತನಾಡಿರೋ ಆಡಿಯೋ ಕ್ಲಿಪ್ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ. ಜಿಲ್ಲೆಯಲ್ಲಿ ಬರಗಾಲವಿದ್ದು, ಜಿಲ್ಲಾಧಿಕಾರಿಗಳಾದ ನೀವು ಮೋಜು ಮಸ್ತಿಯಲ್ಲಿ ತೊಡಗಿದ್ದು ಎಷ್ಟು ಸರಿ ಎಂದು ರೈತರೊಬ್ಬರು ಪ್ರಶ್ನೆ ಮಾಡಿದ್ದರು. ರೈತರ ಪ್ರಶ್ನೆಗೆ ಕೆಂಡಾಮಂಡಲವಾದ ಜಿಲ್ಲಾಧಿಕಾರಿಗಳು, ಬರಗಾಲ ಬಂದಿದ್ದಕ್ಕೆ ಊಟ ಮಾಡೋದನ್ನು ನಿಲ್ಲಿಸಿದ್ದೀವಾ? ಡ್ಯಾನ್ಸ್ ಮಾಡಿದ್ದಕ್ಕೆ ಹೊಟ್ಟೆ ಉರಿದ್ರೆ ನಾನೇನು ಮಾಡಲಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಕರೆ ಮಾಡಿದ ವ್ಯಕ್ತಿ, ಸಾಹೇಬ್ರೇ ನಿಮಗೆ ಡಿಕೆ ಬುಕ್ ಮಾಡಿದ್ದೀನಿ, ನಾಳೆ ಬರುತ್ತೆ ಎಂದು ವ್ಯಂಗ್ಯವಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ರೈತರ ಬೆಳೆ ಮತ್ತು ಕುಡಿಯಲು ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಡಿಜೆ ಹಾಕಿಕೊಂಡು ನಿಮ್ಮ ಅಧಿಕಾರಿಗಳೊಂದಿಗೆ ಡ್ಯಾನ್ಸ್ ಮಾಡ್ತೀರಿ. ಹಾಗಾಗಿ ಡಿಜೆ ಆರ್ಡರ್ ಮಾಡಿದ್ದು, ನಾಳೆ ನಿಮ್ಮ ಕಚೇರಿಗೆ ತೆಗೆದುಕೊಂಡು ಬರುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರಂಭದಲ್ಲಿ ನಾನೇನು ಮಾಡಿಲ್ಲ ಎಂದು ಹಾರಿಕೆಯ ಉತ್ತರ ನೀಡುವ ಜಿಲ್ಲಾಧಿಕಾರಿಗಳು, ನಂತರ ನಿನಗೆ ಯಾರು ಕರೆದರು? ನಾನೇನು ನಿನಗೆ ಕರೆದಿಲ್ಲ. ಡಿಜೆ ಹಾಕಿರೋದು ನಿನಗ್ಯಾಕೆ? ನಿನ್ನ ಸಮಸ್ಯೆ ಏನೇ ಇದ್ರೂ ಸೋಮವಾರ ಬೆಳಗ್ಗೆ 9.30ಕ್ಕೆ ಆಫಿಸ್ನಲ್ಲಿ ಇರ್ತೀನಿ ಬಾ. ನಾವು ಕೈಲಾದಷ್ಟು ಸಹಾಯ ಮಾಡುತ್ತಿರುತ್ತೇವೆ ಎಂದು ಹೇಳುತ್ತಾರೆ.
ಮುಂದುವರಿದು ಮಾತನಾಡಿದ ಜಿಲ್ಲಾಧಿಕಾರಿಗಳು, ಬರಗಾಲ ಅಂತ ಊಟ ಮಾಡೋದನ್ನು ನಿಲ್ಲಿಸಿದ್ದೇವಾ? ಡ್ಯಾನ್ಸ್ ಮಾಡಿದ್ದಕ್ಕೆ ನಿಮ್ಮ ಹೊಟ್ಟೆ ಉರಿದ್ರೆ ನಾನೇನು ಮಾಡಲಿ. ಸುಮ್ಮನೇ ಏನೇನೋ ಮಾತನಾಡಬೇಡ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕರೆ ಮಾಡಿದ ವ್ಯಕ್ತಿ, ನಮ್ಮಲ್ಲಿ ಒಂದು ವರ್ಷದಿಂದ ಮಳೆ ಇಲ್ಲ. ಪರಿಹಾರಕ್ಕೆ ಕ್ಲೈಮ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡುತ್ತಾರೆ. ಸೋಮವಾರ ಹಣ ಬರುತ್ತೆ ಎಂದು ಹೇಳಿದೆ. ನಾನು ಸಹ ಅಷ್ಟೇ ಹೇಳಬಹುದು. ಅದಕ್ಕಿಂತ ಹೆಚ್ಚು ನಾನೇನು ಮಾಡ್ಲಿ ಅಂತಾರೆ, ಇದಕ್ಕೆ ನವೆಂಬರ್ 30ಕ್ಕೆ ನಿವೃತ್ತಿ ಆಗ್ತಿರೋ ಕಾರಣ ಹೀಗೆ ಮಾತನಾಡುತ್ತಿದ್ದೀರಿ ಎಂದು ಬೇಸರ ಹೊರ ಹಾಕಿದ್ದಾರೆ.
ಇದೇ ನ. 30ರಂದು ನಿವೃತ್ತರಾಗಲಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಬೀಳ್ಕೊಡುಗೆ ಅಂಗವಾಗಿ ತಮ್ಮ ಅಧಿಕೃತ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಡ ರಾತ್ರಿ ವರೆಗೆ ಮೋಜು, ಮಸ್ತಿ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Gadag: ನಿವೃತ್ತಿ ನೆಪದಲ್ಲಿ DC ನಿವಾಸದಲ್ಲಿ ಅದ್ಧೂರಿ ಪಾರ್ಟಿ: ಡಿಜೆ ಹಾಡಿಗೆ ಡ್ಯಾನ್ಸ್