ಗದಗ-ಬೆಟಗೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಕೋಲಾಹಲ, ರಂಪಾಟ

By Suvarna NewsFirst Published Sep 20, 2022, 9:02 PM IST
Highlights

ಗದಗ-ಬೆಟಗೇರಿ ನಗರಸಭೆ ಸಾಮಾನ್ಯ ಸಭೆಯು ಗದ್ದಲ, ಕೋಲಾಹಲ, ರಂಪಾಟಕ್ಕೆ ಸಾಕ್ಷಿಯಾಯಿತು. . ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರು 30 ನಿಮಿಷಕ್ಕೂ ಹೆಚ್ಚು ಕಾಲ ಸದನದ ಬಾವಿಗಿಳಿದಿದ್ದರಿಂದ ಚರ್ಚೆ ನಡೆಯದೇ ಕಲಾಪವು ವ್ಯರ್ಥವಾಯಿತು.

ಗದಗ (ಸೆ.20): ಗದಗ-ಬೆಟಗೇರಿ ನಗರಸಭೆ ಸಾಮಾನ್ಯ ಸಭೆಯು ಗದ್ದಲ, ಕೋಲಾಹಲ, ರಂಪಾಟಕ್ಕೆ ಸಾಕ್ಷಿಯಾಯಿತು. ನಗರಸಭೆ ಮೀಟಿಂಗ್ ಹಾಲ್ ನಲ್ಲಿ ಚರ್ಚ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಅವರು, ಅತಿಯಾದ ಮಳೆಯಾಗಿ ಕೆರೆ-ಕೊಳ್ಳ ತುಂಬಿವೆ. ನದಿ ತುಂಬಿ ತುಳುಕುತ್ತಿದ್ದರೂ ಅವಳಿ ನಗರದ ಗದಗ-ಬೆಟಗೇರಿ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈ ಬಗ್ಗೆ ಮೊದಲ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದರು. ಗದಗ-ಬೆಟಗೇರಿ ಅವಳಿ ನಗರಕ್ಕೆ 15-16 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಕೆಲವು ವಾರ್ಡ್‍ಗಳಲ್ಲಿ ಚರಂಡಿ ಮಿಶ್ರಿತ ನೀರು ಸರಬರಾಜಾಗುತ್ತಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಅಧಿಕಾರಗಳು ಸಮರ್ಪಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಕೆಯುಡಬ್ಲ್ಯೂಎಸ್ ಇಂಜಿನೀಯರ್ ಭಜಮ್ಮನವರ, ಮೊದಮೊದಲು ಅವಳಿ ನಗರಕ್ಕೆ 8-10 ದಿನಗಳಿಗೊಮೆ ನೀರು ಪೂರೈಕೆಯಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟ ಏಜೆನ್ಸಿಯವರ ನಿರ್ಲಕ್ಷ್ಯದಿಂದ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ಈಗಾಗಲೇ ಏಜೆನ್ಸಿಯವರಿಗೆ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ನೀರು ಪೂರೈಸಲಾಗುತ್ತದೆ ಎಂದು ತಿಳಿಸಿದರು. ಅಧಿಕಾರಿಗಳು ನೀಡಿದ ಮಾಹಿತಿಗೆ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು, ಸದನದ ಬಾವಿಗಿಳಿದು ಖಾಲಿ ಕೊಡ ಪ್ರದರ್ಶಿಸಿ, ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.

ಏಕವಚನದಲ್ಲಿ ಮಾತು-ಕಲಾಪ ವ್ಯರ್ಥ: ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರು 30 ನಿಮಿಷಕ್ಕೂ ಹೆಚ್ಚು ಕಾಲ ಸದನದ ಬಾವಿಗಿಳಿದಿದ್ದರಿಂದ ಚರ್ಚೆ ನಡೆಯದೇ ಕಲಾಪವು ವ್ಯರ್ಥವಾಯಿತು.

Latest Videos

ಸಭೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಯಾರು ಏನು ಮಾತನಾಡುತ್ತಿದ್ದಾರೆಂಬುದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಆಡಳಿತ ಪಕ್ಷದ ಅನೀಲ ಅಬ್ಬಿಗೇರಿ ಮತ್ತು ಕಾಂಗ್ರೆಸ್ ಪಕ್ಷದ ಜೈನುಲ್ಲಾಬಿ ನಮಾಜಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಆಡಳಿತ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪರಸ್ಪರ ಏಕವಚನದಲ್ಲಿ ಮಾತನಾಡಿ ವಯಕ್ತಿಕವಾಗಿ ನಿಂದಿಸಿಕೊಂಡರು. ಈ ವೇಳೆ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ನಗರಸಭಾಧ್ಯಕ್ಷೆ ಉಷಾ ಮಹೇಶ ದಾಸರ, ಉಪಾದ್ಯಕ್ಷೆ ಸುನಂದಾ ಪ್ರಕಾಶ ಬಾಕಳೆ ಮೌನಕ್ಕೆ ಜಾರಿದ್ದರು.

ನೀರು ಪೂರೈಕೆ ವಿಷಯಕ್ಕೆ ಸಂಬಂಧಿಸಿದಂತೆ ಏಜೆನ್ಸಿಯವರಿಗೆ 15 ಬಾರಿ ನೋಟಿಸ್ ನೀಡಲಾಗಿದರೂ, ನೀರೂ ಪೂರೈಕೆಯಲ್ಲಿ ವಿಳಂಬವಾಗುತ್ತಲೇ ಇದೆ. ಕೂಡಲೇ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಒತ್ತಡ ಹೇರುತ್ತಲೇ ಧರಣಿ ಆರಂಭಿಸಿದರು. ಆಡಳಿತ ಸದಸ್ಯರು ಚರ್ಚೆ ಮೂಲಕ ಬಗೆಹರಿಸೋಣ ಎಂದು ಮನವಿ ಮಾಡಿದರೂ ಜಗ್ಗದ ವಿರೋಧ ಪಕ್ಷದ ಸದಸ್ಯರು ಧರಣಿಯನ್ನು ತೀವ್ರಗೊಳಿಸಿದರು.

ವಿರೋಧ ಪಕ್ಷದ ಸದಸ್ಯರು ಧರಣಿಯನ್ನು ತೀವ್ರಗೊಳಿಸುತ್ತಲೇ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಸಮರ ಆರಂಭವಾಯಿತು. ಇದರ ನಡುವೆ ವಿರೋಧ ಪಕ್ಷದ ಸದಸ್ಯರು ಆಡಳಿತ ಪಕ್ಷದ ಸದಸ್ಯರ ವಿರುದ್ಧ ಏಕವಚನದಲ್ಲಿಯೇ ಮಾತು ಆರಂಭಿಸುತ್ತಿದ್ದಂತೆ, ಆಕ್ರೋಶಗೊಂಡ ಆಡಳಿತ ಪಕ್ಷದ ಸದಸ್ಯರು ಏರು ಧ್ವನಿಯಲ್ಲಿಯೇ ತರಾಟೆಗೆ ತೆಗೆದುಕೊಂಡರು. ಸಾಮಾನ್ಯ ಸಭೆಯು ಗದ್ದಲ, ಕೋಲಾಹಲ, ರಂಪಾಟಕ್ಕೆ ಸಾಕ್ಷಿಯಾಯಿತು.

ಇದರ ನಡುವೆ ಮಾತಿಗಿಳಿದ ಆಡಳಿತ ಪಕ್ಷದ ನಾಯಕ ವಿನಾಯಕ ಮಾನ್ವಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಕುರಿತು ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈ ಜಾಗದಲ್ಲಿ ಕುಳಿತುಕೊಳ್ಳುವುದು ಕಷ್ಟವಾಗಬಹುದು ಎಂದು ಎಚ್ಚರಿಸಿದರು.

ನಗರಸಭೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ನೀರು ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆಗಳಿವೆ. ಅವಳಿ ನಗರದಲ್ಲಿ 400 ವಾಲ್ವ್‍ಗಳ ಅಳವಡಿಕೆ ಬಾಕಿಇದೆ. 1000ಕ್ಕೂ ಹೆಚ್ಚು ಕಡೆಗಳಲ್ಲಿ ಪೈಪ್‍ಲೈನ್ ಸೋರಿಕೆಗಳನ್ನು ಬಂದ್ ಮಾಡಬೇಕಿದೆ. ಓವರ್‍ಹೆಡ್ ಟ್ಯಾಂಕ್ ಮೂಲಕ ನೀರು ಹರಿಸಿದಾಗ ಮಾತ್ರ ಅವಳಿ ನಗರದಲ್ಲಿ ನಾಲ್ಕೈದು ದಿನಗಳಿಗೊಮ್ಮೆ ನೀರು ಪೂರೈಸಲು ಸಾಧ್ಯ ಎಂದು ಹೇಳಿದರು.

ದಲಿತರಿಗೆ ಅನ್ಯಾಯ: 2020-21ನೇ ಸಾಲಿನ ನಗರಸಭೆಯ ಅನುದಾನದ ಶೇ.24.10, 7.5 ಅನುದಾನದಲ್ಲಿ ಎಸ್‍ಎಫ್‍ಸಿ ಅನುದಾನದಡಿ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಮುದಾಯ ಸಂಘಟನಾ ಅಧಿಕಾರಿ ಹುಣಸಿಮರದ ಅವರು ಸದಸ್ಯರ ಅಭಿಪ್ರಾಯ ಸಂಗ್ರಹಿಸದೇ, ಅಧ್ಯಕ್ಷರ ಗಮನಕ್ಕೆ ತರದೇ ಗೋಲ್‍ಮಾಲ್‍ಮಾಡಿದ್ದಾರೆ. ಅಲ್ಲದೇ, ಅಂಗವಿಕಲರಿಗೆ ಸಹಾಯಧನ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಉದ್ಯೋಗ ಸಹಾಯಧನ ವಿತರಣೆಯಲ್ಲಿಯೂ ತಾರತಮ್ಯ ಮಾಡಲಾಗಿದೆ. ಒಂದೇ ಮನೆಯಲ್ಲಿ ಎರಡು ಲ್ಯಾಪ್‍ಟಾಪ್ ವಿತರಿಸಲಾಗಿದೆ. ಅವಳಿ ನಗರದ 35 ವಾರ್ಡ್‍ಗಳ ಪೈಕಿ ಕೆಲವೇ ವಾರ್ಡ್‍ಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಹಣ ಪಡೆದುಕೊಂಡು ಫಲಾನುಭವಿಗಳ ಆಯ್ಕೆ ಮಾಡಿ ವಿತರಿಸಲಾಗಿದೆ. ಕೋಡಲೇ ಅಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ವಿರೋಧ ಪಕ್ಷದ ಸದಸ್ಯರಾದ ಕೃಷ್ಣಾ ಪರಾಪೂರ ಹಾಗೂ ನಮಾಜಿ ಒತ್ತಾಯಿಸಿದರು. ಜೊತೆಗೆ 35 ವಾರ್ಡ್‍ಗಳಲ್ಲಿನ ಸದಸ್ಯರ ಅಭಿಪ್ರಾಯದ ಮೇರೆಗೆ ಅರ್ಹ ಫಲಾನುಭವಿಗಳಿಗೆ ಲ್ಯಾಪ್‍ಟಾಪ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪೌರಕಾರ್ಮಿಕರ ಖಾಯಮಾತಿಗೊಳಿಸಲು ನಿಯೋಗ: ನಗರಸಭೆ ಆಡಳಿತ ಪಕ್ಷದ ಸದಸ್ಯ ಚಂದ್ರಶೇಖರ ತಡಸದ ಅವರು 11,133 ಗುತ್ತಿಗೆ ಪೌರಕಾರ್ಮಿಕರನ್ನು ಖಾಯಮಾತಿಗೊಳಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವಾಗ, ಅಪಸ್ವರ ತೆಗೆದ ನಗರಸಭೆ ವಿರೋಧ ಪಕ್ಷ ಸದಸ್ಯ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಖಾಯಮಾತಿಗೊಳಿಸಲಾಗಿದೆ ಎಂದು ಆರೋಪಿಸಿದರು. ಇದರ ಬೆನ್ನಲ್ಲೆ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಅವರು ನಗರಸಭೆಯಿಂದಲೂ ಕೆಲವು ಪೌರಕಾರ್ಮಿಕರ ಹೆಸರುಗಳನ್ನು ಪ್ರಸ್ತಾವನೆ ಸಲ್ಲಿಸಲಾಗಿತ್ತು. 11133ರಲ್ಲಿ ಗದಗ-ಬೆಟಗೇರಿ ನಗರಸಬೆಯ ಪೌರಕಾರ್ಮಿಕರು ಇರಬಹುದು. ಎರಡು ದಿನಗಳಲ್ಲಿ ಆಯ್ಕೆ ಕುರಿತು ಸ್ಪಷ್ಟತೆ ಬರುತ್ತದೆ ಎಂದರು.

ನಗರಸಭಾಧ್ಯಕ್ಷೆ ಉಷಾ ಮಹೇಶ ದಾಸರ ಮಾತನಾಡಿ, ಅವಳಿ ನಗರದ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುವದಕ್ಕೆ ಆಡಳಿತ ಬಿಜೆಪಿ ಪಕ್ಷ ಬದ್ಧವಾಗಿದೆ. ನೀರು ಸರಬರಾಜು ಯೋಜನೆಯ ಉಸ್ತುವಾರಿವಹಿಸಿರುವ ಕೆಯುಆಯ್‍ಡಿಎಫ್ ಸಿ ಅಧಿಕಾರಿಗಳಿಂದ ವಿವರಣೆ ಪಡೆದು ಮುಂದಿನ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.

click me!