'ಪ್ರಧಾನಿ ನರೇಂದ್ರ ಮೋದಿ ಏನು ಪರಮಾತ್ಮನ ಸ್ವರೂಪನೇ?'

By Kannadaprabha NewsFirst Published Mar 2, 2020, 10:10 AM IST
Highlights

ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಚಿಂತಕ ಗೋವಿಂದರಾವ್‌ ಕಿಡಿ|ಎಚ್‌.ಎಸ್‌.ದೊರೆಸ್ವಾಮಿ ವಿರುದ್ಧ ಹೇಳಿಕೆ ಖಂಡನೆ|ಯತ್ನಾಳ್‌ರನ್ನು ಬಜೆಟ್‌ ಅಧಿವೇಶನದಿಂದ ಹೊರಗೆ ಇಡಬೇಕು|

ಬೆಂಗಳೂರು[ಮಾ.02]: ಪ್ರಧಾನಿ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮಾತನಾಡುವುದು ಸರಿಯೇ ಎಂದು ಬಿಜೆಪಿ ನಾಯಕರು ಪ್ರಶ್ನಿಸುತ್ತಾರೆ. ಆದರೆ, ಪ್ರಧಾನಿ ಏನು ಪರಮಾತ್ಮನ ಸ್ವರೂಪನೇ ಎಂದು ಚಿಂತಕ ಜಿ.ಕೆ.ಗೋವಿಂದರಾವ್‌ ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೀಡಿದ ಹೇಳಿಕೆ ಖಂಡಿಸಲು ನಗರದಲ್ಲಿ ಭಾನುವಾರ ಪ್ರಗತಿಪರರು, ಸಾಹಿತಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೊದಲ ಪ್ರಧಾನಿ ಜವಹಾರಲಾಲ್‌ ನೆಹರೂ ವಿರುದ್ಧ ಸಿ.ರಾಜಗೋಪಾಲಚಾರಿ, ಆಚಾರ್ಯ ಕೃಪಲಾನಿ ಮಾತನಾಡಿದ್ದರೂ ನೆಹರೂ ಅವರ ಬಗ್ಗೆ ಗೌರವ ಹೊಂದಿದ್ದರು. ಈಗ ಯತ್ನಾಳರ ಹೇಳಿಕೆಯನ್ನು ದೊರೆಸ್ವಾಮಿ ನಿರ್ಲಕ್ಷಿಸಿದರೂ, ನಾನು ಹೇಗೆ ದೊರೆಸ್ವಾಮಿ ಬಾಯಿ ಮುಚ್ಚಿಸಿದೆ ನೋಡಿ ಎಂದು ಹೇಳಿಕೊಂಡು ತಿರುಗಾಡುವ ವ್ಯಕ್ತಿತ್ವ ಯತ್ನಾಳರದ್ದು ಎಂದರು.

ಸಿಪಿಐ ಮುಖಂಡ ಜಿ.ಎನ್‌.ನಾಗರಾಜ ಮಾತನಾಡಿ, ದೊರೆಸ್ವಾಮಿಯವರು ಬಿಜೆಪಿಯನ್ನು ಮಾತ್ರ ಟೀಕಿಸಿಲ್ಲ. ಕಾಂಗ್ರೆಸ್‌ನ ನರಸಿಂಹರಾವ್‌, ಸೋನಿಯಾ ಗಾಂಧಿ, ಮನಮೋಹನ್‌ ಸಿಂಗ್‌, ಕೆಂಗಲ್‌ ಹನುಮಂತಯ್ಯ ಅವರನ್ನೂ ಟೀಕಿಸಿದ್ದರು ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕಾಂಗ್ರೆಸ್‌ ವಕ್ತಾರ ಬಿ.ಆರ್‌.ಸುದರ್ಶನ್‌ ಮಾತನಾಡಿ, ಯತ್ನಾಳ್‌ರನ್ನು ಬಜೆಟ್‌ ಅಧಿವೇಶನದಿಂದ ಹೊರಗೆ ಇಡಬೇಕು. ಶಾಸಕರಿಗಾಗಿ ನೈತಿಕ ಸಮಿತಿ ರಚಿಸಬೇಕು. ಸದನದೊಳಗಷ್ಟೇ ಅಲ್ಲದೆ, ಸದನದ ಹೊರಗೆ ಶಾಸಕರು ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ನಿಯಮ ರೂಪಿಸುವಂತೆ ಒತ್ತಾಯಿಸಿದರು.

ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯ ಹೋರಾಟ ನಡೆಸಿದ ಕಾಂಗ್ರೆಸ್‌ ಪಕ್ಷದಲ್ಲಿದ್ದ ಎಸ್‌.ಎಂ.ಕೃಷ್ಣ, ಶ್ರೀನಿವಾಸ ಪ್ರಸಾದ್‌, ವಿಶ್ವನಾಥ್‌ ಅವರು ಈ ಬಗ್ಗೆ ಮೌನವಾಗಿರುವುದು ಅವರ ನೈತಿಕ ಶಕ್ತಿ ಕುಸಿದಿರುವುದರ ಸಂಕೇತ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ರವಿವರ್ಮಕುಮಾರ್‌ ಉಪಸ್ಥಿತರಿದ್ದರು.
 

click me!