ಕಲಬುರಗಿ: ಜನವಸತಿ ಪ್ರದೇಶದಲ್ಲೇ ಕೊರೋನಾ ಸೋಂಕಿತನ ಅಂತ್ಯ ಸಂಸ್ಕಾರ!

By Kannadaprabha News  |  First Published Jul 6, 2020, 11:07 AM IST

ಜಿಲ್ಲಾಡಳಿತ- ಆರೋಗ್ಯ ಇಲಾಖೆಯಿಂದ ಕಲಬುರಗಿ ಮಹಾನಗರದಲ್ಲಿ ಮತ್ತೊಂದು ಹೊಸ ಅವಾಂತರ| ಜನ ವಸತಿ ಪ್ರದೇಶದಲ್ಲಿ ಸೋಂಕಿನ ಕಳೆಬರ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರ ವಿರೋಧ| ನಗರದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆ| 


ಕಲಬುರಗಿ(ಜು.06): ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಕಳೆಬರಗಳನ್ನೆಲ್ಲ ದರದರನೆ ಎಳೆದು ಬೇಕಾಬಿಟ್ಟಿ ಅಂತ್ಯ ಸಂಸ್ಕಾರ ಮಾಡಿ ಅಮಾನವೀಯತೆ ಮೆರೆದ ಬೆನ್ನಲ್ಲೇ ಕಲಬುರಗಿಯಲ್ಲಿ ಕಾನೂನು- ಕಟ್ಟಳೆಗಳನ್ನೆಲ್ಲ ಗಾಳಿಗೆ ತೂರಿ ಸೋಂಕಿನ ಕಳೆಬರವನ್ನು ನಗರದ ಜನನಿಬಿಡ ಪ್ರದೇಶದ ಕಬರಸ್ತಾನ್‌ದಲ್ಲೇ ಅಂತ್ಯ ಸಂಸ್ಕಾರ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಕಳೆದೊಂದು ವಾರದಿಂದ ಕಲಬುರಗಿಯಲ್ಲಿ ಕೊರೋನಾ ಮರಣ ಮೃಂದಗ ಮುಂದುವರಿದಿದೆ. ನಿತ್ಯ ಮೂರು, ನಾಲ್ಕು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇರೋದರಿಂದ ಶನಿವಾರ ನಡೆದ ಸೋಂಕಿತರ ಸಾವಿನ ಕಳೆಬರಗಳನ್ನು ಆಳಂದ ಕಾಲೋನಿಯ ವಿಜಯ ನಗರ ಬಡಾವಣೆಯ ಜನವಸತಿ ಪ್ರದೇಶದಲ್ಲೇ ಇರುವ ಕಬರಸ್ತಾನ್‌ನಲ್ಲೇ ಸಂಸ್ಕಾರ ಮಾಡಲಾಗಿದ್ದು ಈ ಬೆಳವಣಿಗೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Tap to resize

Latest Videos

undefined

ಕಲಬುರಗಿಗೆ ಬರ್ತಿವೆ ‘ಮಹಾ’ ಮೃತದೇಹಗಳು!

ಕಳೆದ 3 ದಿನದಿಂದ ಕಲಬುರಗಿಯ ಇಸ್ಲಾಮಾಬಾದ್‌ ಕಾಲೋನಿಯಲ್ಲಿ ಮರಣ ಮೃದಂಗ ಜೋರಾಗುತ್ತಿದೆ. ಶನಿವಾರವೂ ಇದೇ ಕಾಲೋನಿಯ ಮೂವರು ಸಾವನ್ನಪ್ಪಿದ್ದು ಇವರೆಲ್ಲರೂ ಕೊರೋನಾ ಸೋಂಕಿತರು. ಇವರ ಮೃತ ದೇಹಗಳನ್ನು ಸಂಬಂಧಿಕರ ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆಳಂದ ಕಾಲೋನಿಯ ವಿಜಯ ನಗರ ಬಡಾವಣೆಯಲ್ಲಿರುವ ಕಬರಸ್ತಾನ್‌ನಲ್ಲಿ ಶನಿವಾರ ರಾತ್ರಿ ಅಂತ್ಯ ಸಂಸ್ಕಾರ ನಡೆಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಅಂತ್ಯ ಸಂಸ್ಕಾರದ ವಿಡಿಯೋ, ಫೋಟೋಗಳು ಸದ್ಯ ವೈರಲ್‌ ಆಗಿವೆ.

ನಗರದ ಹೊರಭಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಿ:

ಸಾಮಾನ್ಯ ಸಾವಿನ ಪ್ರಕರಣಗಳಲ್ಲಿ ಕಳೆಬರದ ಅಂತ್ಯ ಸಂಸ್ಕಾರ ಇಂತಹ ಕಬರಸ್ತಾನದಲ್ಲಾದರೆ ಓಕೆ, ಇಂತಹ ಸೋಂಕಿನ ಹಾಗೂ ಅತಂಯ್ತ ತುರ್ತು ಸಂದರ್ಭದಲ್ಲೂ ಜನನಿಬಿಡ ಪ್ರದೇಶದಲ್ಲಿನ ಕಬರಸ್ತಾನದಲ್ಲಿ ಅಂತ್ಯ ಸಂಸ್ಕಾರ ಬೇಕಿತ್ತೆ? ಕೊರೊನಾ ಸೋಂಕಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಪ್ರತ್ಯೇಕ ನಿಯಮಗಳೇ ಇರೋವಾಗ ಅವನ್ನೆಲ್ಲ ಗಾಳಿಗೆ ತೂರಿ ಹೀಗೇಕೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ನಡೆದುಕೊಳ್ಳುತ್ತಿದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ. ಸೋಂಕಿತರ ಮೃತ ದೇಹಗಳನ್ನು ನಗರದಲ್ಲಿ ಅಂತ್ಯಕ್ರಿಯೆ ನಡೆಸಿ ಹೋಗಿರೋದು ಆಳಂದ ರಸ್ತೆ ವಿಜಯನಗರ ಬಡಾವಣೆಯಲ್ಲಿ ಸೋಂಕಿನ ಆತಂಕ ಹೆಚ್ಚುವಂತೆ ಮಾಡಿದೆ.

ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ

ಕೊರೋನಾ ಸೋಂಕಿಗೆ ದೇಶದಲ್ಲೇ ಮೊದಲ ಬಲಿಯಾಗಿದ್ದ ಕಲಬುರಗಿಯ 76 ವರ್ಷದ ವೃದ್ಧನ ಕಳೆಬರ ಅಂತ್ಯ ಸಂಸ್ಕಾರದಲ್ಲೂ ಕಲಬುರಗಿ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಬೇಕಾಬಿಟ್ಟಿತನ ತೋರಿದ್ದರಿಂದಲೇ ಸೊಂಕು ನಗರದಲ್ಲಿ ತಳ ಊರಲು ಇರುವ ಕಾರಣಗಳಲ್ಲಿ ಪ್ರಮುಖವಾದದ್ದು ಎಂಬುದನ್ನು ಯಾರೂ ಮರೆತಿಲ್ಲ. ಹೀಗಿದ್ದರೂ ಸೋಂಕಿನೊಂದಿಗೆ ಏಗುತ್ತಿರುವ 4 ತಿಂಗಳ ನಂತರವೂ ಕಲಬುರಗಿ ಆಡಳಿತ ಇನ್ನೂ ಸೋಂಕಿತರ ಕಳೆಬರ ಸಂಸ್ಕಾರದಲ್ಲಿನ ಬೇಕಾಬಿಟ್ಟಿತನ ಇನ್ನೂ ಬಿಟ್ಟಿಲ್ಲ ಎಂಬುದಕ್ಕೆ ಶನಿವಾರದ ಅಂತ್ಯ ಸಂಸ್ಕಾರವೇ ಕನ್ನಡಿ ಹಿಡಿದಿದೆ. ಈಗಾಗಲೇ ನಗರದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಹೆಚ್ಚಿದ್ದು ಸೋಂಕಿತರ ಸಂಖ್ಯಾಬಲ 1900ರ ಗಡಿ ಸಮೀಪಿಸಿರುವಾಗ ಹೆಚ್ಚಿನ ಕಾಳಜಿ, ಸೂಕ್ಷ್ಮತೆ ಪ್ರದರ್ಶಿಸಬೇಕಿದ್ದ ಜಿಲ್ಲಾಡಳಿತ ತೋರುತ್ತಿರುವ ಅಲಕ್ಷತನ ಜನರ ಟೀಕೆಗೆ ಗುರಿಯಾಗಿದೆ.
 

click me!