Koppal: ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ಅಂತ್ಯಕ್ರಿಯೆ

By Kannadaprabha News  |  First Published Feb 9, 2022, 9:52 AM IST

*  ಭಾವೈಕ್ಯತೆ ಮೆರೆದ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ ಜನತೆ
*  ಹಿಂದೂ ಸಂಪ್ರದಾಯದಂತೆ ಭಜನೆ, ಪೂಜೆ, ಮುಸ್ಲಿಮರಿಂದ ಕುರಾನ್‌ ಪಠಣ
*  ಹಿಂದೂ-ಮುಸ್ಲಿಂ ಧಾರ್ಮಿಕ ಸೌಹಾರ್ದತೆಗೆ ಸಾಕಷ್ಟು ಶ್ರಮಿಸಿದ್ದ ಹುಸೇನಸಾಬ್‌
 


ಕುಕನೂರು(ಫೆ.09):  ಹಿಜಾಬ್‌(Hijab), ಕೇಸರಿ(Saffron) ಶಾಲಿನ ವಿವಾದ ರಾಜ್ಯದಲ್ಲಿ ತಾರಕಕ್ಕೇರಿ ಕೋಮು ಸಾಮರಸ್ಯ ಕದಡುವಂತಹ ವಾತಾವರಣ ಸೃಷ್ಟಿಯಾಗುತ್ತಿರುವ ಮಧ್ಯೆಯೇ ತಾಲೂಕಿನ ತಳಬಾಳ ಗ್ರಾಮದಲ್ಲಿ ನಿಧನರಾದ ಮುಸ್ಲಿಂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ ಭಾವೈಕ್ಯತೆ ಮೆರೆದ ಘಟನೆ ಜರುಗಿದೆ.

ಗ್ರಾಮದ ನಾಟಿ ವೈದ್ಯರಾದ ಹುಸೇನಸಾಬ್‌ ನೂರಭಾಷಾ (87) ಅವರು ಫೆ. 6ರಂದು ನಿಧನರಾಗಿದ್ದರು. ಅಹೋರಾತ್ರಿ ಅವರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ(Hindu Tradition) ಭಜನೆ ಹಾಡುಗಳನ್ನು ಹೇಳಲಾಯಿತು. ಅಲ್ಲದೇ ಮುಸ್ಲಿಮರು(Muslim)  ಕುರಾನ್‌ ಪಠಣ ಮಾಡಿದರು. ಮರುದಿನ ಫೆ. 7ರಂದು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ(Funeral) ನೆರವೇರಿಸಲಾಯಿತು. ಅಂತ್ಯಸಂಸ್ಕಾರ ವೇಳೆ ಪೂಜೆ ಮಾಡಿ, ಮಂಗಳಾರತಿ ಹಾಡಿ, ಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮೃತ ಹುಸೇನಸಾಬ್‌ ಅವರ ಪುತ್ರ ಮಲ್ಲಿಕಸಾಬ್‌ ತಳಬಾಳ, ಕುಟುಂಬದ ಸದಸ್ಯರು ಮತ್ತು ಮುಸ್ಲಿಂ ಹಾಗೂ ಹಿಂದೂ ಸಮಾಜದವರು ಪಾಲ್ಗೊಂಡಿದ್ದರು.

Tap to resize

Latest Videos

ಹಿಂದೂ ಯುವತಿಯ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

ನಿಧನರಾದ ಹುಸೇನಸಾಬ್‌ ಮೂಲತಃ ನಾಟಿ ವೈದ್ಯರು. ಗ್ರಾಮದ ಬಹಳಷ್ಟು ಮಂದಿ ಹಾಗೂ ಸುತ್ತಲಿನ ಗ್ರಾಮದವರಿಗೆಲ್ಲ ಚಿರಪರಿಚಿತರಾಗಿದ್ದರು. ಅಲ್ಲದೇ ಹಿಂದೂ-ಮುಸ್ಲಿಂ ಧಾರ್ಮಿಕ ಸೌಹಾರ್ದತೆಗೆ ಸಾಕಷ್ಟು ಶ್ರಮಿಸಿದ್ದರು. ಅವರು ಮುಸ್ಲಿಂ ಆಗಿದ್ದರೂ ಗಾಯತ್ರಿ ಆರಾಧಕರಾಗಿದ್ದರು. ಶ್ರೀಭೀಮಲಿಂಗೇಶ್ವರ ದೇವರ ಪರಮ ಭಕ್ತರಾಗಿದ್ದರು. ಮುಸ್ಲಿಂ ಹಬ್ಬಗಳಲ್ಲದೇ ಹಿಂದೂಗಳ ಹಬ್ಬ- ಹರಿದಿನಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಗ್ರಾಮದ ಮುಸ್ಲಿಂ- ಹಿಂದೂಗಳೆಲ್ಲ ಸೇರಿ ಭಾವೈಕ್ಯದಿಂದ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಧಾರ್ಮಿಕ ಸಮನ್ವಯತೆಯ ಸಂದೇಶ ಸಾರಿದ್ದಾರೆ.

ನಮ್ಮ ಗ್ರಾಮದಲ್ಲಿ ಸರ್ವಧರ್ಮ ಸಮ ಎಂಬ ಭಾವದಲ್ಲಿ ಬದುಕಿದ್ದೇವೆ. ನಮ್ಮ ತಂದೆಯವರ ನಿಧನರಾದ ವೇಳೆ ಗ್ರಾಮಸ್ಥರೆಲ್ಲ ಕೂಡಿ ಹಿಂದೂ ಸಂಪ್ರದಾಯದಂತೆ ಭಜನೆ ಮಾಡಿದ್ದಾರೆ. ಗ್ರಾಮಸ್ಥರ ಪ್ರೀತಿ, ಏಕತೆ ಭಾವನೆಗೆ ಬೆಲೆ ಕಟ್ಟಲಾಗದು ಅಂತ ಶಿಕ್ಷಕ ಮಲ್ಲಿಕಸಾಬ್‌ ತಳಬಾಳ ತಿಳಿಸಿದ್ದಾರೆ. 

ಗ್ರಾಮದಲ್ಲಿ ಹುಸೇನ್‌ ಸಾಬ್‌ ಅವ್ರೀಗೆ ಮುಸ್ಲಿಂ- ಹಿಂದೂ ಎಂಬ ಭೇದಭಾವ ಇಲ್ಲ. ಹಿಂದೂ ಹಬ್ಬಗಳಲ್ಲಿ(Hindu Festival) ಅವರು, ಮುಸ್ಲಿಂ ಹಬ್ಬಗಳಲ್ಲಿ ನಾವು ಸಕ್ರಿಯವಾಗಿ ಒಂದೇ ಎಂಬ ಭಾವದಲ್ಲಿ ಭಾಗಿಯಾಗುತ್ತಿದ್ದೆವು. ಅವರು ನಿಧನರಾದಾಗ ಭಜನೆ ಮಾಡಿ, ಮಂಗಳಾರತಿ ಹಾಡಿ ಕಾಯಿ ಸಹ ಒಡೆದಿದ್ದೇವೆ ಅಂತ ತಳಬಾಳ ಗ್ರಾಮಸ್ಥ ಹುಚ್ಚಯ್ಯ ಸಸಿಮಠ ಹೇಳಿದ್ದಾರೆ. 

ಮುಸ್ಲಿಂ ಮನೆಯಂಗಳದಲ್ಲಿ ನಡೀತು ಹಿಂದೂ ಪೌರಾಣಿಕ ಯಕ್ಷಗಾನ

ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ!

ಮಂಗಳೂರು: ಕೇರಳ ಮೂಲದ 65 ವರ್ಷದ ಮುಸ್ಲಿಮ್ ವ್ಯಕ್ತಿಯೊಬ್ಬ ಸ್ವಾಮಿ ಕೊರಗಜ್ಜನಿಗೆ ದೇವಾಲಯ ಕಟ್ಟಿಸಿದ್ದಾರೆ. ಅವರು ಇಲ್ಲಿಯೇ ಕಳೆದ 19 ವರ್ಷಗಳಿಂದ ಪೂಜೆ ಮಾಡುತ್ತಿದ್ದು, ಸೌಹಾರ್ದತೆಯ ಸಂದೇಶ ಸಾರುತ್ತಿದ್ದಾರೆ.  

ಕೇರಳದ ಪಲಕಾಡ್ ಜಿಲ್ಲೆಯ ಪಿ ಖಾಸಿಮ್ ಸಾಹಿಬ್ 35 ವರ್ಷಗಳ ಹಿಂದೆ ತಮ್ಮ ಕುಟುಂಬದ ಜೊತೆಗೆ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ಬಂದು, ಮಂಗಳೂರಿನಿಂದ 40 ಕಿ.ಮೀ ದೂರದ ಮುಲ್ಕಿಯ ಕವತಾರು ಗ್ರಾಮದಲ್ಲಿ ನೆಲೆ ನಿಂತಿದ್ದರು. 
ಖಾಸಿಮ್ ತಮ್ಮ ಹೆಂಡತಿ ಮತ್ತು ಐವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರ ಜೀವನ ಅಷ್ಟೇನೂ ಸುಖಕರವಾಗಿರಲಿಲ್ಲ. ಅಂಥ ಸಂದರ್ಭದಲ್ಲಿಯೂ ಖಾಸಿಮ್ ಕಾಲಿಗೆ ಗಾಯವಾಗಿ ತೊಂದರೆಗೊಳಗಾಗಿದ್ದಾರೆ. ಆಗ ಖಾಸಿಮ್ ಗ್ರಾಮದ ಪಾತ್ರಿ ಒಬ್ಬರನ್ನು ಭೇಟಿಯಾಗುತ್ತಾರೆ. ಸ್ನೇಹತರೊಬ್ಬರ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಾಗ, ಅವರು ಕೊರಗಜ್ಜನಿಗೆ ದೇವಾಲಯ ಕಟ್ಟುವಂತೆ ಸಲಹೆ ಕೊಡುತ್ತಾರೆ. ಹಾಗಾಗಿ ಅವರ ಸಲಹೆಯಂತೆ ಖಾಸಿಮ್ ಚಿಕ್ಕದೊಂದು ಜಾಗದಲ್ಲಿ ದೇವಾಲಯವನ್ನು ಕಟ್ಟುತ್ತಾರೆ.

ಪ್ರತಿದಿನ ಕೊರಗಜ್ಜನ ಈ ದೇವಾಲಯಕ್ಕೆ ಸುಮಾರು 50 ಜನ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಕೊರಗಜ್ಜನ ಮೂರ್ತಿ ಜೊತೆಗೆ ಕೊರಗತ್ತಿ ಮೂರ್ತಿ ಕೂಡ ಇದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಕೋಲ ಉತ್ಸವ ಕೂಡ ನಡೆಯುತ್ತದೆ. ಈ ಗ್ರಾಮದಲ್ಲಿ ಸುಮಾರೊ 1,500 ಜನಸಂಖ್ಯೆ ಇದ್ದು ಎಲ್ಲ ಧರ್ಮದ ಎಲ್ಲ ಜಾತಿಯ ಜನರು ಕೂಡ ಇಲ್ಲಿ ಪೂಜೆ ಸಲ್ಲಿಸುತ್ತಾರೆ.
 

click me!