ಸ್ವಚ್ಛ ಭಾರತ ಅನುದಾನದಡಿಯಲ್ಲಿ ಶೌಚಾಲಯ ಕಟ್ಟಿಕೊಳ್ಳಿ ಎಂದು ಸರ್ಕಾರ ಅನುದಾನ ಕೊಟ್ರೆ ನಗರಸಭೆ ಅದನ್ನು ಬಳಸಿಕೊಂಡಿಲ್ಲ. ಸ್ವಚ್ಛ ಭಾರತ ಅನುದಾನ ಚಾಮರಾಜನಗರ ನಗರಸಭೆಯಲ್ಲಿ ನಾಲ್ಕು ವರ್ಷವಾದರೂ ಖರ್ಚಾಗಿಲ್ಲ.
ಚಾಮರಾಜನಗರ(ಡಿ.18): ಪ್ರತಿಯೊಂದು ಮನೆಯಲ್ಲೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವವರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ನೀಡುವ ಸ್ವಚ್ಛ ಭಾರತ ಅನುದಾನ ನಗರಸಭೆಯಲ್ಲಿ ನಾಲ್ಕು ವರ್ಷವಾದರೂ ಖರ್ಚಾಗಿಲ್ಲ.
94.70 ಲಕ್ಷ ಬಿಡುಗಡೆ:
ಇಡೀ ಭಾರತ ದೇಶವು ಬಯಲು ಶೌಚಮುಕ್ತ ಎಂದು ಘೋಷಣೆ ಮಾಡಿಕೊಳ್ಳಲು ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಕುಟುಂಬಕ್ಕೆ 10 ಸಾವಿರ ರು. ಸಹಾಯಧನವನ್ನು ನೀಡಲು ಸರ್ಕಾರ ಚಾಮರಾಜನಗರ ನಗರಸಭೆಗೆ 2015ರಲ್ಲಿ ಬಿಡುಗಡೆ ಮಾಡಿರುವ ಅನುದಾನದಲ್ಲಿ 15.61 ಲಕ್ಷ ರು. ಬಾಕಿ ಉಳಿದಿದೆ. 2015ರಲ್ಲಿ ಚಾಮರಾಜನಗರ ನಗರಸಭೆಗೆ ಶೌಚಾಲಯ ಕುರಿತು ಅರಿವು ಮೂಡಿಸಲು (ಐಇಸಿ ಚಟುವಟಿಕೆಗೆ) 1.36 ಲಕ್ಷ ರು., ವೈಯಕ್ತಿಕ ಶೌಚಾಲಯಕ್ಕೆ 93.34 ಲಕ್ಷ ರು. ಸೇರಿ ಒಟ್ಟು 94.70 ಲಕ್ಷ ರು. ಸ್ವಚ್ಛ ಭಾರತ ಅನುದಾನ ಬಿಡುಗಡೆಯಾಗಿದೆ.
ಪೂರ್ಣ ಹಣ ಬಳಕೆಯಿಲ್ಲ:
ನಗರಸಭೆಯ ಅಧಿಕಾರಿಗಳು ಶೌಚಾಲಯ ಕುರಿತು ಅರಿವು ಮೂಡಿಸಲು ಬಿಡುಗಡೆಯಾಗಿದ್ದ 1.36 ಲಕ್ಷ ರು.ಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡಿದ್ದರೂ ನಗರಭೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕರು ಮುಂದಾಗಿಲ್ಲವೋ ಅಥವಾ ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದಲೋ ವೈಯಕ್ತಿಕ ಶೌಚಾಲಯ ನಿರ್ಮಾಣದ ಅನುದಾನ 93.34 ಲಕ್ಷ ರು. ಪೂರ್ಣವಾಗಿ ಖರ್ಚಾಗಿಲ್ಲ.
ಚಿಕ್ಕಬಳ್ಳಾಪುರ: ನಾಯಿಗಳ ದಾಳಿಗೆ 16 ಕುರಿ ಬಲಿ, 8ಕ್ಕೆ ಗಾಯ
ನಗರಸಭೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳದ್ದೇ ಕಳೆದ ಒಂದು ವರ್ಷದಿಂದ ದರ್ಬಾರ್ ಆಗಿದೆ. ಇದಕ್ಕೆ ಕಾರಣ ಜನಪ್ರತಿನಿಧಿಗಳಿಗೆ ಇನ್ನೂ ಕೂಡ ಅಧಿಕಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದಾಗ ನಗರಸಭೆಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಯ ದರ್ಬಾರ್ ಕಡಿಮೆಯಾಗಿ ನಗರಸಭೆಯ ಅನುದಾನಗಳ ಬಳಕೆಯ ಕೆಲಸಕ್ಕೆ ಚುರುಕು ಕಾಣಲಿದೆ ಎಂಬುದು ಸ್ಥಳೀಯರ ಆಭಿಪ್ರಾಯವಾಗಿದೆ.
ಏನೇ ಕಾರಣವಿದ್ದರೂ ಕೂಡ ನಗರಸಭೆಯಲ್ಲಿ ಸ್ವಚ್ಛ ಭಾರತ ಅನುದಾನ 2015ರಲ್ಲೇ ಬಿಡುಗಡೆಯಾಗಿದ್ದರೂ 2019 ಮುಗಿಯುತ್ತಿದ್ದರೂ ಕೂಡ ನಾಲ್ಕೂ ವರ್ಷದಿಂದ ಪೂರ್ಣವಾಗಿ ಬಳಕೆಯಾಗಿಲ್ಲದಿರುವುದು ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವೈಖರಿ ಪ್ರಗತಿಗೆ ಕಪ್ಪುಚುಕ್ಕೆಯಾಗಿದೆ.
ಅನುತೀರ್ಣರಿಗೆ ಪರೀಕ್ಷೆ ಬರೆಯುವ ಅವಕಾಶ
ನಗರಸಭೆ ವ್ಯಾಪ್ತಿಯಲ್ಲಿರುವ ಜನರು ವಿವಿಧ ಯೋಜನೆಗಳ ಅಡಿಯಲ್ಲಿ ಹೊಸದಾಗಿ ಮನೆಗಳ ನಿರ್ಮಾಣ ಮಾಡುತ್ತಿರುವುದರಿಂದ ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮನೆಗಳ ನಿರ್ಮಾಣ ಕಾರ್ಯಗಳು ಸಂಪೂರ್ಣವಾಗಿ ಮುಕ್ತಾಯವಾದ ನಂತರ ಶೌಚಾಲಯ ನಿರ್ಮಾಣಕ್ಕೆ ಮುಂದಾಗಲಿದ್ದಾರೆ. ಆಗ ಅನುದಾನ ಪೂರ್ಣವಾಗಿ ಖರ್ಚಾಗಲಿದೆ ಎಂದು ನಗರಸಭೆ ಪೌರಾಯುಕ್ತ ರಾಜಣ್ಣ ಹೇಳಿದ್ದಾರೆ.
ಬೆಳಗಾವಿ ಕಬ್ಬಿನ ಗದ್ದೆಯಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ‘ಮಹಾ’ತಾಯಿ!
-ಎನ್. ರವಿಚಂದ್ರ